ಕೂಡಿಗೆ, ಸೆ. 21: ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ನೀರಿಲ್ಲದೆ ರೈತರ ಬೆಳೆಗಳು ಹಾಳಾಗಿದ್ದು, ರೈತರ ದೂರಿನನ್ವಯ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೂಡಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಮುನ್ನೂರು ಎಕರೆ ಪ್ರದೇಶದ ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಿದ್ದ ಏತ ನೀರಾವರಿ ಘಟಕವನ್ನು ದುರಸ್ತಿ ಮಾಡಲು ಈಗಾಗಲೇ ಸಣ್ಣ ನೀರಾವರಿ ಇಲಾಖೆಯ ಮೂಲಕ ರೂ. 50 ಲಕ್ಷಗಳ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಕಾಮಗಾರಿಯು ಶೇ. 75 ಭಾಗದಷ್ಟು ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿಯನ್ನು ಗುತ್ತಿಗೆದಾರ ನಿರ್ವಹಿಸದ ಕಾರಣ ಈ ಸಾಲಿನ ಬೇಸಾಯಕ್ಕೆ ನೀರನ್ನು ನೀಡಿರುವದಿಲ್ಲ. ಈ ಕುರಿತು ರೈತರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರನ್ವಯ ಸಣ್ಣ ನೀರಾವರಿ ಇಲಾಖೆಯ ಮೈಸೂರು ವೃತ್ತದ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಹಾಗೂ ತಂಡದವರು ಕಾಮಗಾರಿ ನಡೆದಿರುವ ಸ್ಥಳ ಪರಿಶೀಲನೆ ನಡೆಸುವದರ ಜೊತೆಗೆ ರೈತರಿಗೆ ಆಗಿರುವ ತೊಂದರೆ ಮತ್ತು ರೈತರಿಗೆ ನೀರೊದಗಿಸಲು ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ರೈತರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.

ರೈತರ ಪ್ರಮುಖ ಬೇಡಿಕೆಯಾದ ಏತ ನೀರಾವರಿಯ ಕೇಂದ್ರದಲ್ಲಿ ನದಿಗೆ ನೂತನ ಮಾದರಿಯ ಸಬ್ ವೇರ್ ಸಿವರಲ್ ವ್ಯವಸ್ಥೆಯನ್ನು ಮಾಡುವದರ ಮೂಲಕ ರೈತರಿಗೆ ಸಮರ್ಪಕವಾಗಿ ನೀರೊದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕೂಡ್ಲೂರು ನೀರು ಬಳಕೆದಾರರ ಸಂಘ ಒತ್ತಾಯಿಸಿದೆ.

ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೇ ರೂ. 50 ಲಕ್ಷ ವೆಚ್ಚದ ಕಾಮಗಾರಿಯನ್ನು ಕೈಗೊಂಡಿದ್ದು, ಕಾಮಗಾರಿಯು ಸಮರ್ಪಕವಾಗಿ ರೈತರಿಗೆ ನೀರು ಒದಗಿಸಲು ಸಾಧ್ಯವಾಗಿರುವದಿಲ್ಲವೆಂದು ಈ ಭಾಗದ ರೈತರು ಆರೋಪಿಸಿದ್ದಾರೆ.

ಸರ್ಕಾರದಿಂದ ಮಂಜೂರಾದ ಟೆಂಡರ್ ಪ್ರಕಾರ ಟೆಂಡರ್ ಪಡೆದವರು ಕಾಮಗಾರಿ ನಿರ್ವಹಿಸಬೇಕಾಗಿದ್ದು, ಟೆಂಡರ್‍ದಾರ ಮನಬಂದಂತೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಈ ಸಾಲಿನ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ ಎಂದು ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದಾನಂದ, ಕಾರ್ಯದರ್ಶಿ ನಾಗರಾಜಾಚಾರಿ, ರೈತರುಗಳಾದ ರಾಜಪ್ಪ, ಗಿರೀಶ, ಗೋವಿಂದ , ದರ್ಮಣ್ಣ, ಜಾಮೇಗೌಡ ಸೇರಿದಂತೆ ಹಲವರು ಆರೋಪಿಸಿದ್ದಾರೆ.

ರೈತರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿಯನ್ನು ನಡೆಸಲು ಮುಂದಾದರೆ ಸುಮಾರು ಒಂದುವರೆ ಕೋಟಿಗೂ ಹೆಚ್ಚಿನ ಹಣದ ಅವಶ್ಯಕತೆಯಿದ್ದು, ಮುಂದಿನ ದಿನಗಳಲ್ಲಿ ರೈತರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುದಾನವನ್ನು ಪಡೆದು ಕಾಮಗಾರಿ ನಡೆಸಲಾಗುವದು. ಈ ವ್ಯಾಪ್ತಿಯ ರೈತರಿಗೆ ಇಲಾಖಾ ವತಿಯಿಂದ ಕಾಮಗಾರಿ ಕೈಗೊಳ್ಳಲು ಅಂದಾಜು ಪಟ್ಟಿ ಒಂದು ಕೋಟಿ ಆಗಿದ್ದರೂ ಮಂಜೂರಾಗಿರುವ ಹಣ ಐವತ್ತು ಲಕ್ಷವಾಗಿರುತ್ತದೆ. ಇದಕ್ಕನುಗುಣವಾಗಿ ನವೀನ ಮಾದರಿಯಲ್ಲಿ ಪೈಪ್ ಅಳವಡಿಸಿ ನೀರಿನ ವ್ಯವಸ್ಥೆಯನ್ನು ಒದಗಿಸಲು ಕ್ರಮ ಕೈಗೊಳ್ಳುವದಾಗಿ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ತಿಳಿಸಿದರು.

ಈ ಸಂದರ್ಭ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಇಂಜಿನಿಯರ್ ರಫೀಕ್ ಉಪಸ್ಥಿತರಿದ್ದರು.