ಮಡಿಕೇರಿ, ಸೆ. 21: ಜಿಲ್ಲೆಯಲ್ಲಿ ಕಳೆದ ತಿಂಗಳು ಉಂಟಾದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿದ್ದವರಿಗೆ ನೀಡಲಾಗಿದ್ದ ರೂ. 3800/- ರೂಪಾಯಿ ಮೊತ್ತವನ್ನು 50 ಸಾವಿರಕ್ಕೆ ಏರಿಸಲು ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಬಟ್ಟೆ-ಬರೆ ಹಾನಿಯಾಗಿದ್ದಲ್ಲಿ ಪ್ರತಿ ಕುಟುಂಬಕ್ಕೆ ರೂ. 1800/- ಹಾಗೂ ದಿನ ಬಳಕೆ ವಸ್ತುಗಳಿಗೆ ರೂ. 2000/-ದಂತೆ ಪರಿಹಾರ ಮಂಜೂರು ಮಾಡಲಾಗಿತ್ತು. ಈ ಮೊತ್ತ ತೀರಾ ಕಡಿಮೆ ಎಂದು ಜಿಲ್ಲೆಗೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿಗಳು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರ ಸಚಿವರು ಸರಕಾರಕ್ಕೆ ಮನದಟ್ಟು ಮಾಡಿದ್ದರು. ಮೊತ್ತವನ್ನು ರೂ. 50 ಸಾವಿರ ಏರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದರು.ಜಿಲ್ಲಾಧಿಕಾರಿಯವರ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ ರೂ. 50 ಸಾವಿರಕ್ಕೆ ಏರಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಹೆಚ್ಚುವರಿ ಮೊತ್ತವನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಭರಿಸಲು ಸಾಧ್ಯವಿಲ್ಲದ್ದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳ ವರದಿಯಲ್ಲಿ 186 ಮನೆಗಳು ಪೂರ್ಣವಾಗಿಯೂ, 530 ಮನೆಗಳು ಗಂಭೀರವಾಗಿಯೂ, 404 ಮನೆಗಳು ಬಾಗಶಃ ಹಾನಿಯಾಗಿರುವದಾಗಿ ವರದಿಯಾಗಿದೆ. ಅಲ್ಲದೆ ಕೆಲ ಗ್ರಾಮಗಳಿಗೆ ಸಂಪರ್ಕವಿಲ್ಲದ ಕಾರಣ ಇನ್ನೂ ಹೆಚ್ಚು ಮನೆಗಳು ಹಾನಿಯಾಗಿರುವ ಸಂಭವವಿದೆ ಎಂದು ಉಲ್ಲೇಖಿಸಿದ್ದಾರೆ. ಇದೀಗ ವರದಿಯಾಗಿರುವ 1156 ಮನೆಯ ಕುಟುಂಬಗಳಿಗೆ ತಲಾ 50 ಸಾವಿರದಂತೆ ಪರಿಹಾರ ನೀಡಿದಲ್ಲಿ ಒಟ್ಟು 5.78 ಕೋಟಿ ವೆಚ್ಚ ತಗಲುತ್ತದೆ ಎಂದು ವಿವರಿಸಲಾಗಿದೆ.