ಸೋಮವಾರಪೇಟೆ, ಸೆ. 21: ಕಳೆದ ತಿಂಗಳು ಆ.16ರಂದು ಸಂಭವಿಸಿದ ಪ್ರಾಕೃತಿಕ ವಿಕೋಪ ಉಂಟು ಮಾಡಿರುವ ಅನಾಹುತ ಅಷ್ಟಿಷ್ಟಲ್ಲ. ಇದೀಗ ಮಳೆ ಮಾಯವಾಗಿ ಬಿರು ಬೇಸಿಗೆಯ ವಾತಾವರಣ ಮೂಡಿದ್ದು, ಭೂಮಿ ಒಮ್ಮೆ ಮೈಕೊಡವಿದ್ದಕ್ಕೆ ನದಿ-ತೊರೆಗಳೇ ತಮ್ಮ ದಿಕ್ಕನ್ನು ಬದಲಿಸಿಬಿಟ್ಟಿವೆ.

ಮಾದಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಎದುರು ಭಾಗದಿಂದ ಇಗ್ಗೋಡ್ಲು ಗ್ರಾಮಕ್ಕೆ ತೆರಳುವ ರಸ್ತೆಯ ಬದಿಯಲ್ಲಿರುವ ಗದ್ದೆ ಪ್ರದೇಶ ಇದೀಗ ಮರಳುಗಾಡಿನಂತಾಗಿದೆ. ನಾಟಿ ಮಾಡಿದ್ದ ಗದ್ದೆಗಳಲ್ಲಿ ಸಂಪೂರ್ಣ ಮರಳು ಮಿಶ್ರಿತ ಮಣ್ಣು ತುಂಬಿದ್ದು, ಗದ್ದೆಯ ಒಂದು ಬದಿಯಲ್ಲಿ ಹರಿಯುತ್ತಿದ್ದ ತೊರೆ ಇದೀಗ ಗದ್ದೆಯ ನಡುಭಾಗಕ್ಕೆ ತನ್ನ ದಾರಿ ಬದಲಿಸಿದೆ.

ಗುಡ್ಡ ಕುಸಿತದಿಂದ ಜಾರಿ ಬಂದ ಮಣ್ಣು ತೊರೆಯನ್ನು ಮುಚ್ಚಿದ್ದು, ಪರಿಣಾಮವಾಗಿ ‘ಆನೆ ನಡೆದದ್ದೇ ದಾರಿ’ ಎಂಬಂತೆ ನೀರು ತನ್ನ ದಿಕ್ಕನ್ನು ಬದಲಿಸಿ ಹರಿಯುತ್ತಿದೆ. ಈ ಭಾಗದಲ್ಲಿ ಕೆಲವು ಗದ್ದೆಗಳನ್ನು ನಾಟಿ ಮಾಡಲಾಗಿದ್ದು, ಇದೀಗ ಸಂಪೂರ್ಣ ನಾಶವಾಗಿದೆ. ಗದ್ದೆಯಲ್ಲಿ ಬೆಳೆದಿದ್ದ ಬಾಳೆ ಕೃಷಿಯೂ ಸಂಪೂರ್ಣ ಹಾನಿಗೀಡಾಗಿದ್ದು, ಪ್ರಕೃತಿಯ ಮುನಿಸಿಗೆ ಜನರ ಬದುಕಿನೊಂದಿಗೆ ಕೃಷಿಯೂ ಕೊಚ್ಚಿಹೋಗಿದೆ.

- ವಿಜಯ್