ಮಡಿಕೇರಿ, ಸೆ. 21: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ಮಡಿಕೇರಿಯ ಬಾಲಭವನದ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಬಿ.ಈ. ಬೋಪಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಮಾತನಾಡಿ, ಸಂಘದ ಮಾಜಿ ಅಧ್ಯಕ್ಷರುಗಳು, ಹಿರಿಯ ಸಹಕಾರಿಗಳು, ಹಾಲಿ ನಿರ್ದೇಶಕರುಗಳು, ಸರ್ವ ಸದಸ್ಯರುಗಳು, ಸಿಬ್ಬಂದಿ ವರ್ಗದವರ ಸಹಕಾರದಿಂದಾಗಿ ಸಂಘವು ರೂ. 14.87 ಲಕ್ಷ ನಿವ್ವಳ ಲಾಭ ಗಳಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

ಸಂಘದ ಮೃತಪಟ್ಟ ಸದಸ್ಯರುಗಳಿಗೆ ಮತ್ತು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಮೃತರಾದವರುಗಳಿಗೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು. ಸಂಘದ ಸದಸ್ಯರುಗಳಿಗೆ ಶೇ. 25 ರಷ್ಟು ಡಿವಿಡೆಂಡ್‍ಅನ್ನು ನೀಡಲು ನಿರ್ಧರಿಸಿದ್ದು, ಆ ಡಿವಿಡೆಂಡ್‍ಅನ್ನು ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಕಷ್ಟನಷ್ಟವನ್ನು ಅನುಭವಿಸಿ ನಿರಾಶ್ರಿತರಾಗಿರುವ ಅರ್ಹ ಸಂಘದ ಸಂತ್ರಸ್ತ ಸದಸ್ಯರುಗಳಿಗೆ ಮತ್ತು ಸಂಘದ ಇಬ್ಬರು ಸಂತ್ರಸ್ತ ಸಿಬ್ಬಂದಿಗಳಿಗೆ ಪರಿಹಾರದ ನೆರವು ನೀಡಲು ಡಿವಿಡೆಂಡ್‍ಅನ್ನು ಬಿಟ್ಟುಕೊಡುವಂತೆ ತೀರ್ಮಾನಿಸಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಡಿ. ಲೇಖನ ಸಭೆಯ ಕಾರ್ಯಕ್ರಮವನ್ನು ನಿರೂಪಿಸಿ, ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿದರು.

ಸಂಘದ ಉಪಾಧ್ಯಕ್ಷ ಕೆ.ಆರ್. ಅನಂತ್‍ಕುಮಾರ್ ವಂದನೆ, ಸಭೆಯಲ್ಲಿ ನಿರ್ದೇಶಕರುಗಳಾದ ಎಂ.ಕೆ. ಚೋಟು ಕಾವೇರಿಯಪ್ಪ, ಕೆ.ಬಿ. ಟಾಟ ಚಂಗಪ್ಪ, ಎಂ.ಸಿ. ಅಯ್ಯಣ್ಣ, ಎಸ್.ಎಸ್. ಈರಪ್ಪ, ಎಂ.ಜಿ. ಮೋಹನ್ ದಾಸ್, ಎ.ಟಿ. ಗೋಪಾಲಕೃಷ್ಣ, ಡಿ.ಬಿ. ಅಣ್ಣಯ್ಯ, ಬಿ.ಸಿ. ಗಣಪತಿ, ಬಿ.ಸಿ. ಚೆನ್ನಪ್ಪ, ಹೆಚ್.ಎನ್. ಈರಪ್ಪ, ಎ.ಕೆ. ಸುಶೀಲಾ, ಸಿ.ಟಿ. ವೇದಾವತಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.