ಮಡಿಕೇರಿ, ಸೆ. 21: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಮಹಾಸಭೆ ನಗರದ ಕೊಹಿನೂರು ರಸ್ತೆಯಲ್ಲಿರುವ ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಎಂ. ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಸಂಘದ ಅಭಿವೃದ್ಧಿ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ಧೇಶ ಸಹಕಾರ ಸಂಘದಿಂದ ಸಾಲ ಪಡೆದ ಮೊತ್ತಕ್ಕೆ ವಿಮೆ ಮಾಡಿಸಿದರೆ ಮುಂದೆ ಸಾಲ ಪಡೆದವರು ಮೃತಪಟ್ಟಲ್ಲಿ ಅವರ ಸಾಲವನ್ನು ಈ ವಿಮೆಯಿಂದ ಹೊಂದಾಣಿಕೆ ಮಾಡಿಕೊಳ್ಳುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದಿಂದ ಸದಸ್ಯರು ಸಾಲ ಪಡೆದ ಮೊತ್ತಕ್ಕೆ ವಿಮೆ ಮಾಡಿಸಿದರೆ ಮುಂದೆ ಸಾಲ ಪಡೆದ ಸದಸ್ಯರು ಆಕಸ್ಮಿಕವಾಗಿ ಮೃತಪಟ್ಟಲ್ಲಿ ಅಥವಾ ಇತರ ಅನಾಹುತದಲ್ಲಿ ಸಂಘಕ್ಕೆ ಸದಸ್ಯರಿಂದ ಬರಬೇಕಾದ ಸಾಲ ಹಣವನ್ನು ಈ ವಿಮೆಯಿಂದ ಹೊಂದಾಣಿಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಎಲ್ಲಾ ಸದಸ್ಯರು ಚರ್ಚಿಸಿದ ನಂತರ ಅಂತಿಮವಾಗಿ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಈ ಬಗೆಗಿನ ಚರ್ಚೆಯಲ್ಲಿ ವೀರಾಜಪೇಟೆಯ ರವಿ ಉತ್ತಪ್ಪ, ರಘು, ಸೋಮವಾರಪೇಟೆಯ ಮೋಹನ್ ಮತ್ತು ವಿಜಯ ಮತ್ತಿತರರು ಪಾಲ್ಗೊಂಡು ನೀಡಿದ ಪಾಲ್ಗೊಂಡು ನೀಡಿದ ಸಲಹೆ ಮೇರೆಗೆ ನಿರ್ಣಯವನ್ನು ಮಾಡಲಾಯಿತು. ಇತ್ತೀಚಿನ ಜಲಪ್ರಳಯದಿಂದ ಸಾಮಾನ್ಯ ಜನರಿಗೆ ಮಾತ್ರವಲ್ಲ, ವರ್ತಕರಿಗೂ ಮತ್ತು ವ್ಯಾಪಾರಸ್ಥರಿಗೂ ಬಹಳಷ್ಟು ಸಮಸ್ಯೆಯಾಗಿದೆ. ಮರಣ ನಿಧಿಗೆ ಸಂಬಂಧಿಸಿದಂತೆ ಈಗಾಗಲೇ ಸಂಘದಲ್ಲಿ ನಿಗದಿ ಮಾಡಲಾದ 500 ರೂ. ಗಳಿಗಿಂತ 1000 ರೂ. ಗಳನ್ನು ನಿಗದಿ ಮಾಡಿದರೆ ಸದಸ್ಯರು ಯಾರಾದರೂ ಮರಣ ಹೊಂದಿದಲ್ಲಿ ಅವರಿಗೆ 10 ಸಾವಿರ ಮೊತ್ತವನ್ನು ಮರಣ ನಿಧಿಯಾಗಿ ಕುಟುಂಬ ಸದಸ್ಯರಿಗೆ ನೀಡುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು. ಈ ವಿಷಯ ಸಂಘದ ಪ್ರತಿಯೊಬ್ಬ ಸದಸ್ಯರಿಗೂ ತಿಳಿಯಲು ಅನುಕೂಲವಾಗುವಂತೆ ಕೂಡಲೇ ನೋಟೀಸ್ ನೀಡಿ ಗಮನಕ್ಕೆ ತರುವಂತೆ ಸದಸ್ಯರು ಸಲಹೆ ನೀಡಿದರು.

ಸಹಕಾರ ಸಂಘದ ಕಾನೂನು ಪ್ರಕಾರ ಸಂಘದ ಸದಸ್ಯರಿಗೆ 60 ವರ್ಷ ಮೇಲ್ಪಟ್ಟಲ್ಲಿ ಅವರಿಗೆ ಮರಣ ನಿಧಿ ವ್ಯಾಪ್ತಿಗೊಳಪಡುವದಿಲ್ಲ ಎಂಬದಾಗಿ ಅಧ್ಯಕ್ಷ ಗಣೇಶ್ ಅವರು ಸಭೆಯ ಗಮನಕ್ಕೆ ತಂದಾಗ, ಕೆಲ ಸದಸ್ಯರು ಈ ಬಗ್ಗೆ ಚರ್ಚಿಸಿದರು. ಸಂಘದ ಮಹಾಸಭೆಗೆ ಗೈರು ಹಾಜರಾಗುವವರಿಗೆ ಡಿವಿಡೆಂಡ್ ನೀಡದಂತೆ ಸದಸ್ಯ ಮೋಹನ್ ಮತ್ತಿತರರು ಸಭೆಯಲ್ಲಿ ಅಧ್ಯಕ್ಷರ ಮೇಲೆ ಒತ್ತಡ ಹಾಕಿದ ಪ್ರಸಂಗ ಕಂಡು ಬಂತು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಜಲ ಪ್ರಳಯದಿಂದ ಸಂತ್ರಸ್ತರಾದವರಿಗೆ ನಮ್ಮೆಲ್ಲರ ಡಿವಿಡೆಂಡ್ ಹಣವನ್ನು ಅವರ ಕಲ್ಯಾಣಕ್ಕೆ ನೀಡುವದಾಗಿ ಸದಸ್ಯರು ಹೇಳಿದರು.

ಕೊಡ್ಲಿಪೇಟೆಯ ಯತೀಶ್ ಅವರು ಸಲಹೆ ನೀಡಿ, ಮಹಾಮಳೆಯಿಂದ ಮನೆ ಮಠ ಹಾಗೂ ಆಸ್ತಿಪಾಸ್ತಿಗಳನ್ನು ಕಳಕೊಂಡ ಸದಸ್ಯರ ಸಾಲದ ಬಡ್ಡಿ ಮೇಲಿನ ಮೊತ್ತಕ್ಕೆ ರಿಯಾಯಿತಿ ನೀಡಿ ಕಡಿಮೆ ಮಾಡುವದು ಅಥವಾ ಬಡ್ಡಿಯನ್ನು ಮನ್ನಾ ಮಾಡುವ ಕುರಿತು ನಿರ್ಣಯ ಕೈಗೊಳ್ಳಬೇಕೆಂದು ಹೇಳಿದರು. ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಅವರಿಗೆ ಮನವಿ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಹೇಳಿದರು. ಸಂಘದ ಎಲ್ಲಾ ಆಗುಹೋಗುಗಳಿಗೆ ಪ್ರತಿಯೊಬ್ಬ ಸದಸ್ಯರು ನಿರೀಕ್ಷೆಗೂ ಮೀರಿ ಭಾಗಿಯಾಗಿದ್ದೀರಿ. 2006 ರಿಂದ ಈಚೆಗೆ ಸಂಘದಿಂದ ಡಿವಿಡೆಂಡ್ ನೀಡಲು ಆರಂಭಿಸಿದ್ದೇವೆ. ಅಂದಿನಿಂದ ಇಂದಿನ ವರೆಗೆ ಸಂಘ ಲಾಭ ದಲ್ಲಿರಲು ಎಲ್ಲರ ಸಹಕಾರದಿಂದ ಸಾಧ್ಯ ಎಂದ ಅವರು, ಈ ಬಾರಿ ಸುಮಾರು 30 ಲಕ್ಷಕ್ಕೂ ಮಿಕ್ಕಿ ಲಾಭ ಗಳಿಸಲು ಸಹಕರಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲೆಯ ಪ್ರತಿಯೊಬ್ಬ ವರ್ತಕರು ಸದಸ್ಯರಾಗುವಂತೆ ಮತ್ತು ಖಾತೆ ತೆಗೆಯುವಂತೆ ಮನವಿ ಮಾಡಿಕೊಂಡರು.

ಮಾದಾಪುರದಲ್ಲಿ ಶಾಖೆಗೆ ಒತ್ತಾಯ

ಮಾದಾಪುರದಲ್ಲಿ ವರ್ತಕ ಸದಸ್ಯ ಮೋಹನ್ ಮಾತನಾಡಿ, ಮಾದಾಪುರದಲ್ಲಿ ನಮ್ಮ ಸಂಘದ ಶಾಖೆಯನ್ನು ತೆರೆದು ವ್ಯವಹಾರ ನಡೆಸಬಹುದಲ್ಲವೇ, ಅಲ್ಲಿ ಕೇವಲ ಒಂದೇ ವಾಣಿಜ್ಯ ಬ್ಯಾಂಕ್ ಮಾತ್ರವಿದೆ ಎಂಬ ಸಲಹೆ ನೀಡಿದರು.

ಇದಕ್ಕುತ್ತರಿಸಿದ ಅಧ್ಯಕ್ಷ ಗಣೇಶ್ ಅವರು, ಮುಂಬರುವ ದಿನಗಳಲ್ಲಿ ಸಂಘದ ಸಾಧಕ-ಬಾಧಕಗಳನ್ನು ನೋಡಿ ಸೂಕ್ತ ತೀರ್ಮಾನವನ್ನು ಕೈಗೊಳ್ಳುವದಾಗಿ ಸಮಜಾಯಿಸಿಕೆ ನೀಡಿದರು.

ಸಂಘದ ಸದಸ್ಯರು ಸರಿಯಾಗಿ ಸಾಲ ಮರುಪಾವತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿ ಸಾಲ ಪಡೆಯುವ ಸದಸ್ಯರಷ್ಟೇ ಹೆಚ್ಚಿನ ಜವಾಬ್ದಾರಿ ಜಾಮೀನು ನೀಡಿದವರಿಗೂ ಇರುತ್ತದೆ. ಸಾಲ ಪಡೆದವರು ಪಾವತಿಸದಿದ್ದಲ್ಲಿ ಜಾಮೀನು ನಿಂತವರು ಮರುಪಾವತಿಸಬೇಕಾಗುತ್ತದೆ ಎಂದು ಸದಸ್ಯರುಗಳು ಹೇಳಿದರು.

ಸಂತ್ರಸ್ತರಿಗೆ ಆಶ್ರಯ ರೂ. 32 ಸಾವಿರ ವೆಚ್ಚ

ಈ ವರ್ಷದ ಮಳೆಗಾಲದಲ್ಲಿ ಜಲಪ್ರಳಯವಾಗಿ ಬಹಳಷ್ಟು ಮಂದಿ ಆಸ್ತಿ ಪಾಸ್ತಿಗಳನ್ನು, ಮನೆ ಮಠಗಳನ್ನು ಕಳೆದುಕೊಂಡವರಲ್ಲಿ ನಾವು ಸುಮಾರು 135ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರಿಗೆ ನಮ್ಮ ಸಂಘದ ಸಭಾಂಗಣದಲ್ಲಿ ಪರಿಹಾರ ಕೇಂದ್ರವನ್ನು ತೆರೆದು ಆಶ್ರಯ ನೀಡಿದ್ದೇವೆ. ಇದಕ್ಕಾಗಿ ಸಂಘದಿಂದ ರೂ. 32 ಸಾವಿರ ಹಣ ವೆಚ್ಚವಾಗಿದೆ. ಇದರೊಂದಿಗೆ ದಾನಿಗಳು, ಜಿಲ್ಲಾಡಳಿತ ಬಹಳಷ್ಟು ಆಹಾರ ಪದಾರ್ಥಗಳನ್ನು ನೀಡಿದೆ. ಅಲ್ಲದೆ, ವಿವಿಧ ಸಂಘ-ಸಂಸ್ಥೆಗಳವರು ಆಹಾರ ಸಾಮಗ್ರಿಗಳನ್ನು ಇನ್ನಿತರ ವಸ್ತುಗಳನ್ನು ತಂದಾಗ ನಮ್ಮ ಸೂಚನೆಯಂತೆ ನೇರವಾಗಿ ಸಂತ್ರಸ್ತರಿಗೆ ಕೊಡಿಸಿದ್ದೇವೆ ಎಂದು ಅಧ್ಯಕ್ಷ ಗಣೇಶ್ ಸಭೆಗೆ ವಿವರಣೆ ನೀಡಿದರು.

ಅಧ್ಯಕ್ಷ ಕೆ.ಎಂ. ಗಣೇಶ್ ಸ್ವಾಗತಿಸಿದರು. ನಂತರ ಅಗಲಿದ ಸದಸ್ಯರಿಗೆ ಮತ್ತು ಜಲ ಪ್ರಳಯದಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು. ನಿರ್ದೇಶಕ ಎ.ಪಿ. ವೀರರಾಜ್ ವಂದಿಸಿದರು.