ವೀರಾಜಪೇಟೆ, ಸೆ. 21: ಶತಮಾನದಿಂದಲೂ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದ ಗೌರಿ ಗಣೇಶನ ವಿಸರ್ಜನೋತ್ಸವ ಈ ಬಾರಿ ಸರಳವಾಗಿ ಆಚರಿಸಲು ವೀರಾಜಪೇಟೆ ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿವಿಧ ಸಮಿತಿಗಳು ಪೂರ್ವ ಸಿದ್ಧತೆ ನಡೆಸಿವೆ.

ಭಾರೀ ಮಳೆಯಿಂದ ಕೊಡಗಿನ ಅನೇಕ ಕಡೆಗಳಲ್ಲಿ ಉಂಟಾದ ಪ್ರಕೃತಿ ವಿಕೋಪದ ದುರಂತದಿಂದ ಸಹಸ್ರಾರು ಮಂದಿ ಆಸ್ತಿ ಪಾಸ್ತಿ ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿರುವ ಹಿನೆÀ್ನಲೆಯಲ್ಲಿ ಈ ಬಾರಿ ವೀರಾಜಪೇಟೆಯಲ್ಲಿ ನಡೆಯುವ ಗೌರಿ ಗಣೇಶನ ವಿಸರ್ಜನೋತ್ಸವವನ್ನು ಆಡಂಬರವಿಲ್ಲದೆ ನಡೆಸಲು ಉತ್ಸವ ಸಮಿತಿಗಳು ತೀರ್ಮಾನಿಸಿವೆ. ಅದರಂತೆ ಹೆಚ್ಚಿನ ಉತ್ಸವ ಸಮಿತಿಗಳು ಸಾಂಪ್ರದಾಯಿಕ ನಾದಸ್ವರ, ವಾದ್ಯಗೋಷ್ಠಿಯೊಂದಿಗೆ ಸಾಮೂಹಿಕ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಈಗಾಗಲೇ ಪೊಲೀಸ್ ಇಲಾಖೆ ಪ್ರತಿ ವರ್ಷದಂತೆ ಗೌರಿ ಗಣೇಶನ ಮೂರ್ತಿಯ ಮಂಟಪಗಳು ಸರದಿ ಪ್ರಕಾರ ಸಾಮೂಹಿಕ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕ್ರಮ ಸಂಖ್ಯೆಗಳನ್ನು ನೀಡಿವೆÉ.

ಪ್ರತಿ ವರ್ಷ ಗೌರಿ ಗಣೇಶ ವಿಸರ್ಜನೋತ್ಸವದಂದು ರಾತ್ರಿ ವೀರಾಜಪೇಟೆಯಲ್ಲಿ ಹೊರಗಿನಿಂದ ಬರುವ ವೀಕ್ಷಕರ ಮನರಂಜನೆಗಾಗಿ ಸಂಗೀತ ರಸ ಮಂಜರಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದವು. ಈ ಬಾರಿ ಸರಳ ಉತ್ಸವವಾಗಿರುವದರಿಂದ ಸಂಘಟನೆಗಳು ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಕೈ ಬಿಟ್ಟಿವೆ. ವಿಸರ್ಜನೋತ್ಸವವನ್ನು ಸರಳವಾಗಿ ಆಚರಿಸಿದರೂ ಮೆರವಣಿಗೆಯ ಮಾರ್ಗ ಹಾಗೂ ಸರದಿಯ ಕ್ರಮ ಸಂಖ್ಯೆಯಲ್ಲಿ ಯಾವದೇ ಬದಲಾವಣೆ ಇಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಈ ಬಾರಿಯ ಗೌರಿ ಗಣೇಶ ವಿಸರ್ಜನೋತ್ಸವದ ರಾತ್ರಿ ಎಂದಿನಂತೆ ಪೊಲೀಸ್, ಮಹಿಳಾ ಪೊಲೀಸ್, ಹೋಮ್‍ಗಾಡ್ರ್ಸ್‍ಗಳು ಬಂದೋಬಸ್ತ್‍ನಲ್ಲಿ ನಿಯೋಜಿಸಲಾಗುವದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದ 21 ಕಡೆಗಳಲ್ಲಿ ಗೌರಿ ಹಾಗೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು ತಾ.23ರಂದು ನಡೆಯುವ ವಿಸರ್ಜನೋತ್ಸವದ ಸಾಮೂಹಿಕ ಮೆರವಣಿಗೆಯಲ್ಲಿ ಜೈನರಬೀದಿಯ ಬಸವೇಶ್ವರ ದೇವಾಲಯದ ಗೌರಿ ಗಣೇಶೋತ್ಸವ ಸಮಿತಿ, ಗಡಿಯಾರ ಕಂಬದ ಬಳಿಯ ಗಣಪತಿ ಸೇವಾ ಟ್ರಸ್ಟ್, ತೆಲುಗರ ಬೀದಿಯ ಅಂಗಾಳ ಪರಮೇಶ್ವರಿ ವಿನಾಯಕ ಯುವಕ ಭಕ್ತ ಮಂಡಳಿ, ಪಂಜರು ಪೇಟೆ ಗಣಪತಿಬೀದಿಯ ಮಹಾ ಗಣಪತಿ ಸೇವಾ ಸಮಿತಿ, ಪಂಜರು ಪೇಟೆಯ ವಿನಾಯಕ ಸೇವಾ ಸಮಿತಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ಸುಣ್ಣದ ಬೀದಿಯ ಹರಿಕೇರಿಯ ದೊಡ್ಡಮ್ಮ-ಚಿಕ್ಕಮ್ಮ ತಾಯಿ ವಿನಾಯಕ ಉತ್ಸವ ಸಮಿತಿ, ನೆಹರು ನಗರದ ನೇತಾಜಿ ಯುವಕ ಸಂಘದ ಗಣೇಶ ಉತ್ಸವ ಸಮಿತಿ. ಚಿಕ್ಕಪೇಟೆಯ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ದಖ್ಖನ್ನಿ ಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ, ಸುಂಕದ ಕಟ್ಟೆಯ ಸರ್ವಸಿದ್ದಿ ವಿನಾಯಕ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ಗಣೇಶ ಉತ್ಸವ ಸಮಿತಿ, ಅಯ್ಯಪ್ಪ ಬೆಟ್ಟದ ವರದ ವಿನಾಯಕ ಉತ್ಸವ ಸಮಿತಿ, ಕುಕ್ಲೂರುವಿನ ವಿಘ್ನೇಶ್ವರ ಸೇವಾ ಸಮಿತಿ, ಪಟ್ಟಣ ಪಂಚಾಯಿತಿಯ ಪೌರ ಸೇವಾ ನೌಕರರ ಗಣೇಶೋತ್ಸವ ಸಮಿತಿ, ಕೆ.ಬೋಯಿಕೇರಿಯ ವಿಘ್ನೇಶ್ವರ ಸೇವಾ ಸಮಿತಿ, ಮೀನುಪೇಟೆಯ ವಿಶ್ವ ವಿನಾಯಕ ಸೇವಾ ಸಮಿತಿ, ಗಾಂಧಿನಗರದ ಗಣಪತಿ ಸೇವಾ ಸಮಿತಿ, ಅರಸು ನಗರದ ವಿಘ್ನೇಶ್ವರ ಸೇವಾ ಸಮಿತಿ, ಗೌರಿಕೆರೆ ಗೌರಿ ಗಣೇಶ ಸೇವಾ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲಾಂಜನೇಯ ವಿನಾಯಕ ಉತ್ಸವ ಸಮಿತಿಗಳು ಪಾಲ್ಗೊಳ್ಳಲಿವೆ.

ಅದ್ದೂರಿಯಾಗಿದ್ದ ವಿಸರ್ಜನೋತ್ಸವ

ಕಳೆÀದ ವರ್ಷ ಪಟ್ಟಣದ 21 ಉತ್ಸವ ಸಮಿತಿಗಳು ಯಾವದೇ ಅಡಚಣೆ ಆತಂಕಗಳಿಲ್ಲದೇ ಆಡಂಬರ, ಅದ್ಧೂರಿಯಿಂದ ಸಾಮೂಹಿಕ ಮೆರವಣಿಗೆಗೆ ವಿವಿಧ ಮನರಂಜನೆ ತಂಡಗಳೊಂದಿಗೆ ಚಾಲನೆ ನೀಡಿದ್ದವು. 21 ಉತ್ಸವ ಸಮಿತಿಗಳು ತನ್ನ ಪ್ರತಿಷ್ಠೆಗನುಸಾರವಾಗಿ ರೂ. ಎರಡೂವರೆ ಲಕ್ಷದಿಂದ ನಾಲ್ಕು ಲಕ್ಷಕ್ಕೂ ಮೇಲ್ಪಟ್ಟು ವೆಚ್ಚ ಮಾಡಲಾಗಿತ್ತು. ಈ ಬಾರಿ ಕೊಡಗಿನ ಪ್ರಕೃತಿ ವಿಕೋಪ ಇಲ್ಲಿನ ಗೌರಿಗಣೇಶನ ಅದ್ದೂರಿ ಆಡಂಬರ ಎಲ್ಲವನ್ನು ಕಸಿದುಕೊಂಡಿದೆ.

ಗೌರಿಕೆರೆ ಶುದ್ಧೀಕರಣ

ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಶತಮಾನಗಳ ಹಿಂದಿನ ಪವಿತ್ರ ಗೌರಿಕೆರೆಯನ್ನು ಗೌರಿ ಗಣೇಶನ ವಿಸರ್ಜನೋತ್ಸವದ ಪ್ರಯುಕ್ತ ಪಟ್ಟಣ ಪಂಚಾಯಿತಿಯಿಂದ ಶುದ್ಧೀಕರಿಸಲಾಗಿದೆ. ಜೊತೆಗೆ ತಾ. 23ರಂದು ಗೌರಿಕೆರೆಯ ಸುತ್ತಲೂ ವಿದ್ಯುತ್‍ದೀಪಗಳಿಂದ ಅಲಂಕರಿಸಲಾಗುವದು.