ಮಡಿಕೇರಿ, ಸೆ. 21: ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಯಿತು.

ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಗ್ರಾಮಗಳ ನೂರಾರು ಗ್ರಾಮಸ್ಥರೊಂದಿಗೆ ಸಂತ್ರಸ್ತರಿಗೆ ಶಾಶ್ವತ ಪುನರ್‍ವಸತಿ ನೀಡಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭ ಕೊಡವ ನ್ಯಾಷನಲ್ ಕೌನ್ಸಿಲ್‍ನ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ಭೂ-ಸ್ಫೋಟದ ನೈಜ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಬುನಾದಿಯಾಗಬೇಕಾದ ಶಾಶ್ವತ ಪುನರ್‍ವಸತಿ ನಿರ್ಮಾಣ ಕಾರ್ಯ ಆಗಬೇಕು. ವಾಯುವ್ಯ ಕೊಡಗಿನ ಏಳು ಕೊಡವ ನಾಡುಗಳಲ್ಲಿ ಘಟಿಸಿದ ಘೋರ ಜಲ-ಸ್ಫೋಟ ಮತ್ತು ಭೂ-ಸ್ಫೋಟ ದುರಂತವನ್ನು ಅಂತಾರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬೇಕು. ಹಾರಂಗಿ ಜಲಾಶಯವನ್ನು ತುರ್ತಾಗಿ ಸಂಪೂರ್ಣ ಕಿತ್ತು ಹಾಕಿ. ಮುಂದಿನ ದಿನದಲ್ಲಿ ಉತ್ತಮ ಯೋಜನೆಗಳನ್ನು ಈ ಭಾಗದಲ್ಲಿ ಹಮ್ಮಿಕೊಳ್ಳಬೇಕು. ಜತೆಗೆ ಈ ಭಾಗದ ಸಂತ್ರಸ್ತರಿಗೆ ರೂ. 30 ಸಾವಿರ ಕೋಟಿ ಆರ್ಥಿಕ ಪ್ಯಾಕೇಜನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಭರಿಸಬೇಕು ಎಂದು ಆಗ್ರಹಿಸಿದರು.

ಪುನರ್‍ವಸತಿಗಾಗಿ ವಿಶೇಷವಾದ ವಿಪತ್ತು ನಿರ್ವಹಣಾ ಮಂತ್ರಾಲ ಯವನ್ನು ಸೃಷ್ಟಿಸಿ ಪುನರ್‍ವಸತಿ ಮಂತ್ರಿಯೊಬ್ಬರನ್ನು ಯೋಜನೆ ಪೂರ್ಣವಾಗುವಲ್ಲಿಯವರೆಗೆ ನೇಮಿಸಬೇಕು ಎಂದು ನಾಚಪ್ಪ ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಿಎನ್‍ಸಿ ಸದಸ್ಯರಾದ ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಆಪ್ಪಚ್ಚಿರ ರಮ್ಮಿ ನಾಣಯ್ಯ, ಸಂತ್ರಸ್ತರಾದ ಮೊಣ್ಣಂಡ ಅರುಣ, ಉಡುವೆರ ಲೋಕೇಶ್, ಚಂಡೀರ ರಾಜಾ ತಿಮ್ಮಯ್ಯ, ಮುದ್ದಂಡ ತಿಮ್ಮಯ್ಯ ಮತ್ತಿತರರಿದ್ದರು.