ಸೋಮವಾರಪೇಟೆ,ಸೆ.21: ಮಹಾಮಳೆಗೆ ಅಸ್ತಿತ್ವವನ್ನೇ ಕಳೆದುಕೊಂಡು ಕಳೆದ ಒಂದು ತಿಂಗಳಿಗೂ ಅಧಿಕ ಕಾಲದಿಂದ ಸಂಚಾರ ಸ್ಥಗಿತಗೊಂಡಿದ್ದ ಸೋಮವಾರಪೇಟೆ-ಮಾದಾಪುರ-ಹಟ್ಟಿಹೊಳೆ-ಮಡಿಕೇರಿ ರಾಜ್ಯ ಹೆದ್ದಾರಿ ಇದೀಗ ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.ಕಳೆದ ಆ.16 ರಂದು ಅಲ್ಪಪ್ರಮಾಣದ ಕುಸಿತಕ್ಕೆ ಒಳಗಾಗಿ ಸಂಚಾರ ಸ್ಥಗಿತಗೊಂಡಿದ್ದ ಈ ರಸ್ತೆ ನಂತರದ ದಿನಗಳಲ್ಲಿ ಇನ್ನಿಲ್ಲದಂತೆ ಕೊಚ್ಚಿಹೋಗಿದ್ದು, ನೂರಾರು ಕಾರ್ಮಿಕರು, ಹತ್ತಾರು ವಾಹನಗಳೊಂದಿಗೆ ಹರಸಾಹಸ ನಡೆಸಿ ಇದೀಗ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.ಮಾದಾಪುರದಿಂದ ಹಾಲೇರಿವರೆಗೆ 6 ಕಡೆಗಳಲ್ಲಿ ರಾಜ್ಯ ಹೆದ್ದಾರಿ ಕುಸಿತಗೊಂಡಿದ್ದು, ಭಯಾನಕ ಸನ್ನಿವೇಶದೊಂದಿಗೆ ರಸ್ತೆ ಕೊಚ್ಚಿಕೊಂಡು ಹೋಗಿತ್ತು. ಹಟ್ಟಿಹೊಳೆಯಿಂದ ಮುಂದಕ್ಕೆ ಸುಮಾರು 100 ಮೀಟರ್ ರಸ್ತೆ ಕಣ್ಮರೆಯಾಗಿದ್ದು, ಮಣ್ಣು ತುಂಬಿಸುವ ಕಾರ್ಯ ನಡೆದಿದೆ. ಇದರೊಂದಿಗೆ ರಸ್ತೆಯ ಮೇಲಿದ್ದ ಮಣ್ಣನ್ನು ತೆರವುಗೊಳಿಸಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ರಸ್ತೆಯ ಎಡಭಾಗದಲ್ಲಿ ಕುಸಿತ, ಬಲಭಾಗದಲ್ಲಿ ಬರೆ ಕುಸಿತದಿಂದ ಸಾವಿರಾರು ಲೋಡ್ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದರಿಂದ ಕಳೆದ ಒಂದು ತಿಂಗಳಿನಿಂದ ಈ ರಸ್ತೆ ಬಂದ್ ಆಗಿತ್ತು. ಇದರೊಂದಿಗೆ ಹಾಲೇರಿ ಬಳಿಯಲ್ಲಿ ಸಿಂಕೋನ ಮತ್ತು ಬಾಲಾಜಿ ಎಸ್ಟೇಟ್ ಇರುವ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತಗೊಂಡಿದ್ದು, 20 ಮೀಟರ್ ರಸ್ತೆ ಇನ್ನಿಲ್ಲದಂತೆ ಮಾಯವಾಗಿ, ರಸ್ತೆ ಸಂಪರ್ಕ ಅಸಾಧ್ಯ ಎಂಬಷ್ಟರ ಮಟ್ಟಿಗೆ ಸನ್ನಿವೇಶ ಸೃಷ್ಟಿಯಾಗಿತ್ತು.

ಮಾದಾಪುರದಿಂದ ಹಟ್ಟಿಹೊಳೆವರೆಗೆ ರಸ್ತೆಯ ಒಂದು ಬದಿಯಲ್ಲಿ ಸ್ಯಾಂಡ್ ಬ್ಯಾಗ್‍ಗಳಿಂದ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಹಾಲೇರಿ ಬಳಿ ರಸ್ತೆ ತುಂಡಾಗಿರುವ ಪ್ರದೇಶಕ್ಕೆ ಬದಲಾಗಿ, ಸಿಂಕೋನ ಎಸ್ಟೇಟ್‍ಗೆ ಸೇರಿದ ಎರಡು ಏಕರೆ ತೋಟವನ್ನು ಬಳಸಿಕೊಂಡು ಬದಲಿ ಮಾರ್ಗ ನಿರ್ಮಾಣ ಕಾರ್ಯ ನಡೆಸಲಾಗಿದ್ದು, 36 ದಿನಗಳ ನಂತರ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ.

(ಮೊದಲ ಪುಟದಿಂದ) ಲೋಕೋಪಯೋಗಿ ಇಲಾಖೆ ಮೂಲಕ ನಡೆದ ಕಾಮಗಾರಿಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಇದರೊಂದಿಗೆ ಇತರ ಜನಪ್ರತಿನಿಧಿಗಳು ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದ್ದರು. ಇಲಾಖೆಯ ಅಭಿಯಂತರರು, ಗುತ್ತಿಗೆದಾರರು, ಕಾರ್ಮಿಕರು ಸಮರೋಪಾದಿ ಕಾರ್ಯ ನಿರ್ವಹಿಸಿದ್ದರ ಫಲವಾಗಿ ಇದೀಗ ರಸ್ತೆ ಸಂಪರ್ಕ ಸಾಧ್ಯವಾಗಿದೆ.

ಒಟ್ಟಾರೆ ಕಳೆದ 36 ದಿನಗಳಿಂದ ಬಂದ್ ಆಗಿದ್ದ ಸೋಮವಾರಪೇಟೆ-ಹಟ್ಟಿಹೊಳೆ-ಮಡಿಕೇರಿ ರಾಜ್ಯ ಹೆದ್ದಾರಿ-27ರಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಾದಾಪುರ-ಗರಗಂದೂರು-ಸುಂಟಿಕೊಪ್ಪ ಮಾರ್ಗವಾಗಿ ತೆರಳುತ್ತಿದ್ದ ಸೋಮವಾರಪೇಟೆ ಭಾಗದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದಂತಾಗಿದೆ.