ಪಾಲಿಬೆಟ್ಟ, ಸೆ. 25: ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಜಾಪಿತ ಬ್ರಹ್ಮಕುಮಾರಿಯರ ಈಶ್ವರಿ ವಿಶ್ವವಿದ್ಯಾಲಯದ ವೀರಾಜಪೆಟೆ ತಾಲೂಕು ಸಂಚಾಲಕಿ ಬಿ.ಕೆ. ಕೋಮಲ ಮಾತನಾಡಿ, ವಿದ್ಯಾರ್ಥಿಗಳು ಶಾರೀರಿಕ ಮತ್ತು ಮಾನಸಿಕ ಸ್ವಚ್ಛತೆಯನ್ನು ಕಾಪಾಡಿಕೊಂಡು ಸಮಾಜ ಸೇವೆಯನ್ನು ಮಾಡಬೇಕು. ದೇಹವನ್ನು ಸ್ವಚ್ಛ ಮಾಡಿದಷ್ಟೇ ಮನಸ್ಸನ್ನು ಕೂಡಾ ಸ್ವಚ್ಛ ಮಾಡಬೇಕು. ಸ್ವಚ್ಛ ಮನಸ್ಸಿನಲ್ಲಿ ಮಾತ್ರ ಉತ್ತಮ ಗುಣಗಳಾದ ಪ್ರೀತಿ, ಸಹಕಾರ, ಶಿಸ್ತು, ಸೇವೆ ಹಾಗೂ ಪರಸ್ಪರ ಗೌರವ ಬೆಳವಣಿಗೆಯಾಗುತ್ತದೆ. ಮನಸ್ಸು ಕೆಟ್ಟರೆ ವ್ಯಕ್ತಿಯ ಹಾಗೂ ಸಮಾಜದ ಅದಪತನವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿ.ಎ. ಗುರುರಾಜ್ ಭಟ್, ಎನ್.ಎಸ್.ಎಸ್. ವಿದ್ಯಾರ್ಥಿಗಳು ನಿಸ್ವಾರ್ಥ ಸೇವೆಯನ್ನು ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡರೆ ಭಾವೀ ಜೀವನ ಸಂತೋಷದಾಯಕವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಎಂ. ಭವಾನಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಗುಲಾಮರಾಗದೆ ಎನ್.ಎಸ್.ಎಸ್. ನಂತಹ ಯೋಜನೆಗಳಲ್ಲಿ ತೊಡಗಿಸಿಕೊಂಡರೆ ಬಲಿಷ್ಠವಾದ ಸಮಾಜವನ್ನು ನಿರ್ಮಿಸಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ದಿನಾಚರಣೆಯ ಪ್ರಯುಕ್ತ ಸ್ವಯಂ ಸೇವಕ ಹರ್ಷತ್ ಎನ್.ಎಸ್.ಎಸ್. ಸ್ವಯಂ ಸೇವಕರಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಸೇವೆಯನ್ನು ಸಲ್ಲಿಸಿ ರಾಷ್ಟ್ರವನ್ನು ಬಲಿಷ್ಠಗೊಳಿಸುತ್ತೇವೆ ಎಂಬ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಚಂಗಪ್ಪ, ಕಾಲೇಜಿನ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಯೋಜನಾಧಿಕಾರಿ ಪಿ.ಆರ್. ಶಿವದಾಸ್ ಸ್ವಾಗತಿಸಿದರು. ಉಪನ್ಯಾಸಕಿ ಕೆ.ಕೆ. ಸುನಿತಾ ವಂದಿಸಿದರು. ವಿದ್ಯಾರ್ಥಿನಿ ದೀಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿನಿ ಜೀವಿತಾ ಮತ್ತು ತಂಡದವರು ಪ್ರಾರ್ಥಿಸಿದರು.