ವೀರಾಜಪೇಟೆ, ಸೆ. 25: ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಗೌರಿ ಗಣೇಶ ವಿಸರ್ಜನೋತ್ಸವದ ವೇದಿಕೆಯಲ್ಲಿ ‘ಸಂತ್ರಸ್ತರಿಗೆ ಸಹಾಯ ಹಸ್ತ’ದ ಸಮಾರಂಭ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚೇಂಬರ್ ಬ್ಯಾಂಕ್ ಅಧ್ಯಕ್ಷ ಗಣೇಶ್ ಅವರು, ಗಣಪತಿ ಸೇವಾ ಸಮಿತಿ ಪರವಾಗಿ ಮಕ್ಕಂದೂರಿನ ಸಂತ್ರಸ್ತರಾದ ಮೂರು ಕುಟುಂಬಗಳಿಗೆ ತಲಾ ರೂ. 15000 ದಂತೆ ನಗದನ್ನು ನೀಡಿದರು. ನಂತರ ಮಾತನಾಡಿ ಕೊಡಗು ಇತ್ತೀಚೆಗೆ ಭೀಕರ ಪ್ರಕೃತಿ ದುರಂತದಿಂದ ತತ್ತರಿಸಿದೆ. ಇಂತಹ ನಿರಾಶ್ರಿತ ಕುಟುಂಬಗಳನ್ನು ಗುರುತಿಸಿ ಸಹಾಯ ಮಾಡುವದು ಎಲ್ಲರ ಕರ್ತವ್ಯವಾಗಿದೆ. ಗಾಂಧಿನಗರ ಗಣಪತಿ ಸೇವಾ ಸಮಿತಿಯು ಶ್ರದ್ಧೆ ಭಕ್ತಿಯ ಜೊತೆಗೆ ಸಮಾಜ ಸೇವಾ ಮನೋಭಾವವನ್ನು ಹೊಂದಿದೆ. ಇದರಂತೆ ಎಲ್ಲ ಸಂಘ ಸಂಸ್ಥೆಗಳು ನಿರಾಶ್ರಿತರಿಗೆ ಸಹಾಯ ಮಾಡುವಂತೆ ಕೋರಿದರು.
ಕಾಫಿ ಮಂಡಳಿಯ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ ಕೊಡಗಿನ ಎಲ್ಲ ಉದಾರಿಗಳು ಸಂತ್ರಸ್ತರಿಗೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆಯುವಂತಾಗ ಬೇಕು ಎಂದರು.
ಸಭೆಯನ್ನುದ್ದೇಶಿಸಿ ಗ್ರಾಮಾಂತರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಬೋಪಣ್ಣ, ವಕೀಲ ಸೋಮ ಲೋಕನಾಥ್ ಮಾತನಾಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಮಾಳೇಟಿರ ಕಾಶಿ ಕುಂಞಪ್ಪ, ಉದ್ಯಮಿಗಳಾದ ಚೋಪಿ ಜೋಸೆಫ್, ಬೊಳ್ಯಪಂಡ ಬೋಪಣ್ಣ, ಮಾಹಿನ್ ಕುಟ್ಟಿ, ಕುಯ್ಮಂಡ ಶಾಂತಿ ಕಾವೇರಪ್ಪ ಉಪಸ್ಥಿತರಿದ್ದರು.
ಸೇವಾ ಸಮಿತಿಯ ಅಧ್ಯಕ್ಷ ಚಿಲ್ಲವಂಡ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಮಾರಂಭದಲ್ಲಿ ನಿರಾಶ್ರಿತರಾದ ಬಿದ್ದಿಯಂಡ ರಮೇಶ್, ಮೃತ ಗಿಲ್ಬರ್ಟ್ ಮೆಂಡೋಸ್ ಅವರ ಪತ್ನಿ ರೀಟಾ ಮೆಂಡೋಸ್, ಅಂತರಾಷ್ಟ್ರೀಯ ಕ್ರೀಡಾಪಟು ಕು. ತಶ್ಮ ಇವರುಗಳು ನಗದು ಸಹಾಯವನ್ನು ಸ್ವೀಕರಿಸಿದರು.
ಸಮಾರಂಭದಲ್ಲಿ ಸೇವಾ ಸಮಿತಿಯ ಗೌ: ಅಧ್ಯಕ್ಷ ಕುಯ್ಮಂಡ ರಾಖೇಶ್ ಬಿದ್ದಪ್ಪ, ಉಪಾಧ್ಯಕ್ಷ ಐಚಂಡ ಸದಾ, ಕಾರ್ಯದರ್ಶಿಗಳಾದ ಶಿನೋಜ್, ಪ್ರಿತೇಶ್ ರೈ, ರಂಜನ್ ನಾಯ್ಡು, ಮಾಜಿ ಅಧ್ಯಕ್ಷ ಪಿ.ಎ. ಮಂಜುನಾಥ್ ಹಾಜರಿದ್ದರು. ಎಂ.ಎಂ. ಶಶಿಧರ್ ನಿರೂಪಿಸಿದರು.