ಕುಶಾಲನಗರ, ಸೆ. 25: ಕೊಡಗು ಜಿಲ್ಲೆಯ ಮೂಲಕ ಹರಿಯುತ್ತಿರುವ ನದಿಗಳು, ಉಪ ನದಿಗಳು, ಹೊಳೆ, ತೊರೆ, ಬಾವಿಗಳು ಉಕ್ಕಿ ಹರಿದು ಹಲವೆಡೆ ದುರಂತಕ್ಕೀಡು ಮಾಡಿದ ಬೆನ್ನಲ್ಲೇ ಇದೀಗ ಎಲ್ಲೆಡೆ ಜಲಮೂಲಗಳು ಬರಿದಾಗುತ್ತಿರುವ ವಿದ್ಯಮಾನದೊಂದಿಗೆ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿರುವದು ಕಂಡುಬಂದಿದೆ.
ಜಿಲ್ಲೆಯಲ್ಲಿ ಕಳೆದ 4 ತಿಂಗಳ ಕಾಲ ಸುರಿದ ನಿರಂತರ ಮಳೆಯ ನಡುವೆ ಆಗಸ್ಟ್ ತಿಂಗಳಲ್ಲಿ ಉಂಟಾದ ಜಲಸ್ಫೋಟದಲ್ಲಿ ಬೆಟ್ಟ-ಗುಡ್ಡಗಳು ಕುಸಿಯುವದರೊಂದಿಗೆ ತಗ್ಗು ಪ್ರದೇಶಗಳು ನೀರಿನಿಂದ ಅವೃತಗೊಂಡು ಪ್ರಾಣ ಹಾನಿ ಹಾಗೂ ಎಲ್ಲೆಡೆ ಜನಜೀವನ ಅಸ್ತವ್ಯಸ್ಥಗೊಂಡ ಘಟನೆ ಮಾಸುವ ಮುನ್ನವೇ ಇದೀಗ ನದಿ-ತೊರೆಗಳು ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಜಲಮಟ್ಟ ಭಾರೀ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ.
ಕಾವೇರಿ ನದಿಯಲ್ಲಿ ಹರಿವಿನ ಕೊರತೆ ಎದುರಾದರೆ ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ತಳಮಟ್ಟಕ್ಕೆ ತಲಪಿದೆ. ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಸಂಪೂರ್ಣ ಕುಸಿದಿದೆ. ಕಾವೇರಿ ನದಿಯಲ್ಲಿ 50 ಅಡಿಗಿಂತಲೂ ಎತ್ತರದಲ್ಲಿ ಹರಿಯುತ್ತಿದ್ದ ನೀರಿನ ಪ್ರಮಾಣ ಇದೀಗ ಕೇವಲ ಮೂರು ಅಡಿಗಳಿಗೆ ಇಳಿದ ದೃಶ್ಯ ಕಂಡುಬಂದಿದೆ.
ಜಲಸ್ಫೋಟದ ಸಂದರ್ಭ ನದಿ-ತೊರೆಗಳು ತನ್ನ ಜಲಮಾರ್ಗವನ್ನೇ ಬದಲಾಯಿಸುವಷ್ಟರ ಮಟ್ಟಿಗೆ ತುಂಬಿ ಹರಿದಿದ್ದು, ಇದೀಗ ಸಂಪೂರ್ಣ ಮಣ್ಣು ಮಿಶ್ರಿತ ಖಾಲಿ ಪ್ರದೇಶಗಳು ಮಾತ್ರ ಉಳಿದಿರುವ ದೃಶ್ಯ ಗೋಚರಿಸಿದೆ. ದಾಖಲೆ ಪ್ರಮಾಣದಲ್ಲಿ ತುಂಬಿ ಹರಿದ ಹಾರಂಗಿ ಜಲಾಶಯಕ್ಕೆ ಕೂಡ ನೀರಿನ ಒಳಹರಿವಿನ ಪ್ರಮಾಣ ಸಂಪೂರ್ಣ ಕ್ಷೀಣಿಸಿದೆ. ಒಂದು ತಿಂಗಳ ಹಿಂದೆ ಒಂದು ಲಕ್ಷ ಕ್ಯೂಸೆಕ್ ಪ್ರಮಾಣದಲ್ಲಿ ಹರಿದ ನೀರು ಇದೀಗ ಕೇವಲ 500 ಕ್ಯೂಸೆಕ್ ಪ್ರಮಾಣಕ್ಕೆ ಇಳಿದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಕ್ಕೆ 2500 ಕ್ಯೂಸೆಕ್ ಪ್ರಮಾಣದ ನೀರಿನ ಹರಿವು ಕಂಡುಬಂದಿತ್ತು. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 2859 ಅಡಿಗಳಾಗಿದ್ದು ಇದೀಗ ಅಣೆಕಟ್ಟೆಯಲ್ಲಿ 5 ಅಡಿಗಳಷ್ಟು ನೀರು ತಳಕ್ಕೆ ಇಳಿದಿದೆ. ನದಿಗೆ ಹರಿಸಲಾಗುತ್ತಿರುವ ನೀರು ಸಂಪೂರ್ಣ ಸ್ಥಗಿತಗೊಂಡಿದ್ದು ಕಾಲುವೆ ಮೂಲಕ ಕೃಷಿ ಚಟುವಟಿಕೆಗಳಿಗೆ ಮಾತ್ರ ನೀರು ಹರಿಸಲಾಗುತ್ತಿದೆ.
ಈ ಬಾರಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿರುವದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗದು ಎನ್ನುವ ಭಾವನೆಯಲ್ಲಿದ್ದ ಜನತೆ ಇದೀಗ ಕೇವಲ ತಿಂಗಳ ಅವಧಿಯಲ್ಲಿ ಪರಿಸ್ಥಿತಿ ಬದಲಾವಣೆಯಾಗಿರುವದು ನೋಡಿ ಆತಂಕಕ್ಕೆ ಒಳಗಾಗಿದ್ದಾರೆ. ಕಾವೇರಿ ನದಿಯಲ್ಲಿ ಸಾಮಾನ್ಯವಾಗಿ ಜನವರಿ, ಫೆಬ್ರವರಿ ತಿಂಗಳಲ್ಲಿ ಇರಬೇಕಾದ ನೀರಿನ ಮಟ್ಟ ಪ್ರಸ್ತುತ ಕಂಡುಬರುತ್ತಿದೆ.
ಬೆಟ್ಟದಿಂದ ಬರುತ್ತಿದ್ದ ನೀರಿನ ಮೂಲಗಳು ಸಂಪೂರ್ಣ ಬತ್ತಿ ಹೋಗಿದ್ದು ಮುಂದಿನ ದಿನಗಳಲ್ಲಿ ಕುಡಿವ ನೀರಿಗಾಗಿ ಹಾಹಾಕಾರ ಉಂಟಾಗುವ ಸಾಧ್ಯತೆ ಅಧಿಕ ಎನ್ನುವದು ಈ ಭಾಗದ ಜನವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.
ಭೂಗರ್ಭದಲ್ಲಿ ಉಂಟಾಗಿರುವ ದಿಢೀರ್ ಬದಲಾವಣೆ ಇದಕ್ಕೆ ಸಾಧ್ಯತೆ ಎನ್ನಲಾಗಿದ್ದರೂ ಈ ಬಗ್ಗೆ ವೈಜ್ಞಾನಿಕ ಅಧ್ಯಯನದ ಮೂಲಕ ಕಾರಣ ಪತ್ತೆಹಚ್ಚಬೇಕಿದೆ. ಮುಂದಿನ ದಿನಗಳಲ್ಲಿ ಉಂಟಾಗಲಿರುವ ನೀರಿನ ಹಾಹಾಕಾರಕ್ಕೆ ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ ಪರಿಹಾರ ಕಂಡುಹಿಡಿಯಬೇಕಾಗಿದೆ.