ಗೋಣಿಕೊಪ್ಪ ವರದಿ, ಸೆ. 25: ಹಿಂದುಳಿದ ವರ್ಗದಲ್ಲಿ ಪ್ರವರ್ಗ 2ಎ ರಾಜಕೀಯ ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಧಾರವನ್ನು ಕೊಡಗು ಹೆಗ್ಗಡೆ ಸಮಾಜದ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸಮಾಜದ ಸಭಾಂಗಣದಲ್ಲಿ ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಾಂಗದ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದರಂತೆ ರಾಜಕೀಯ ಮೀಸಲಾತಿಯಲ್ಲಿ ಸರ್ಕಾರ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಲು ಮನವಿ ಸಲ್ಲಿಸುವಂತೆ ನಿರ್ಧರಿಸಲಾಯಿತು.

ಪ್ರಾಕೃತಿಕ ವಿಕೋಪದಿಂದಾಗಿ ಜನಾಂಗದ ಕ್ರೀಡಾಕೂಟ ನಡೆಸಬೇಕೆ, ಬೇಡವೇ ಎಂಬ ನಿರ್ಧಾರವನ್ನು ಕ್ರೀಡಾಕೂಟ ನಡೆಸುವ ಸಂದರ್ಭ ತೆಗೆದುಕೊಳ್ಳಲು ನಿರ್ಧರಿಸಲಾಯಿತು.

ಭೂ ಕುಸಿತಕ್ಕೆ ಒಳಗಾದ ಸಂತ್ರಸ್ತರಿಗೆ ನೆರವಾಗಲು ಸಮಾಜದಿಂದ ನೇರವಾಗಿ ಸಂತ್ರಸ್ತರನ್ನು ಪತ್ತೆ ಮಾಡಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಆರ್ಥಿಕ ಸಹಕಾರ ನೀಡುವಂತೆ ಚರ್ಚಿಸಿ ನಿರ್ಧರಿಸಲಾಯಿತು.

ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚೆಂಗಪ್ಪ, ಕ್ರೀಡಾ ಮತ್ತು ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್, ಖಜಾಂಚಿ ಪಾನಿಕುಟ್ಟೀರ ಕುಟ್ಟಪ್ಪ, ನಿರ್ದೇಶಕರುಗಳಾದ ಚರ್ಮಂಡ ಪೂವಯ್ಯ, ಕೊಪ್ಪಡ ಪಳಂಗಪ್ಪ, ತೋರೇರ ಮುದ್ದಯ್ಯ, ಮೂರೀರ ಕುಶಾಲಪ್ಪ ಉಪಸ್ಥಿತರಿದ್ದರು.