ಮಡಿಕೇರಿ, ಸೆ. 25: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಮಹಾಮಳೆಯಿಂದ ಸಂಭವಿಸಿದ ನೆರೆ ಹಾವಳಿ ಮತ್ತು ಭೂಕುಸಿತದಿಂದಾಗಿ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ನೊಂದವರಿಗೆ ಯಾವ ರೀತಿಯಲ್ಲಿ ಪರಿಹಾರ ಮಾರ್ಗೋಪಾಯಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಆಡಳಿತ ವ್ಯವಸ್ಥೆಗೆ ಕೆಲವು ಸಲಹೆಗಳನ್ನು ನೀಡುವ ಸಲುವಾಗಿ ತಾ. 28 ರಂದು ಮಡಿಕೇರಿಯಲ್ಲಿ ರ್ಯಾಲಿವೊಂದನ್ನು ನಡೆಸಲು ನಿರ್ಧರಿಸಿರುವದಾಗಿ ಕೊಡಗು ಪ್ರಾಕೃತಿಕ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತರ ಸಮಿತಿಯ ಅಧ್ಯಕ್ಷ ಮಂಡೇಪಂಡ ಮನುಮೇದಪ್ಪ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವದೆಂದು ತಿಳಿಸಿದರು. ವಿಶೇಷ ಪ್ಯಾಕೇಜ್ ಘೋಷಣೆ, ಸಂತ್ರಸ್ತರಿಗೆ ಪುನರ್ ವಸತಿ, ಮನೆಗಳ ಹಾನಿಗೆ ಪರಿಹಾರ, ಸಾಲ ಮನ್ನಾ ಘೋಷಣೆ, ಕಾಫಿ, ಸಾಂಬಾರ ಬೆಳೆ ಮತ್ತು ತೋಟಗಾರಿಕಾ ಬೆಳೆ ನಷ್ಟಕ್ಕೆ ಪರಿಹಾರ, ಭೂ ಕುಸಿತಕ್ಕೆ ಪರಿಹಾರ, ಮಹಾಮಳೆಯಿಂದ ಉಂಟಾದ ಹೂಳು ತೆಗೆಯಲು ಕ್ರಮ, ಬಿದ್ದ ಮರಗಳ ಬಳಕೆಗೆ ಅವಕಾಶ, ಹಾರಂಗಿ ಜಲಾಶಯದಿಂದ ಆಗುತ್ತಿದೆ ಎನ್ನಲಾಗುತ್ತಿರುವ ತೊಂದರೆಗಳ ಸತ್ಯಾಸತ್ಯತೆಯ ಬಗ್ಗೆ ಅಧ್ಯಯನ, ನಾಶವಾದ ಭೂಪ್ರದೇಶದ ಭೌಗೋಳಿಕ ಸರ್ವೇ, ಪುನರ್ ವಸತಿ, ಸಂತ್ರಸ್ತರಿಗೆ ಉದ್ಯೋಗ, ಪಿಂಚಣಿ ಮತ್ತು ಸಂತ್ರಸ್ತ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕುರಿತು ಸರಕಾರ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ರ್ಯಾಲಿ ಮೂಲಕ ಗಮನ ಸೆಳೆಯಲಾಗುವದು ಎಂದರು.

ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪರಿಹಾರ ಕಾರ್ಯಗಳು ಮತ್ತಷ್ಟು ಚುರುಕನ್ನು ಪಡೆದುಕೊಳ್ಳಲಿ ಎನ್ನುವ ಕಾರಣಕ್ಕಾಗಿ ರ್ಯಾಲಿ ನಡೆಸುತ್ತಿರುವದಾಗಿ ಸ್ಪಷ್ಟಪಡಿಸಿದರು.

ಸ್ವಯಂ ಪ್ರೇರಣೆಯಿಂದ ಸಂತ್ರಸ್ತರ ಸಮಿತಿಯನ್ನು ರಚಿಸಿಕೊಂಡು ಸಂಕಷ್ಟಕ್ಕೊಳಗಾದ ಸುಮಾರು 40 ಗ್ರಾಮಗಳಲ್ಲಿ ಅಧ್ಯಯನ ನಡೆಸಿ ನಷ್ಟದ ಕುರಿತು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ತಾ. 28 ರಂದು ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿರುವದಾಗಿ ಮನುಮೇದಪ್ಪ ತಿಳಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾಬೆಳ್ಯಪ್ಪ ಮಾತನಾಡಿ, ಮಹಾಮಳೆಗೆ ಜಿಲ್ಲೆ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದ್ದು, ಎನ್‍ಡಿಆರ್‍ಎಫ್ ತಂಡ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ಸಮಿತಿ ಈ ಬಗ್ಗೆ ಮನವಿಯೊಂದನ್ನು ಸಲ್ಲಿಸಿದೆ ಎಂದರು.

ಬೆಳೆÉಗಾರರ ಒಕ್ಕೂಟದ ವಕ್ತಾರÀ ಕೆ.ಕೆ. ವಿಶ್ವನಾಥ್ ಮಾತನಾಡಿ, ಮೊದಲೇ ನಷ್ಟದಲ್ಲಿದ್ದ ಕಾಫಿ ಬೆಳೆಗಾರರಿಗೆ ಅತಿವೃಷ್ಟಿಯ ಪರಿಣಾಮ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೆ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಮನವಿ ಮಾಡಲಾಗಿದ್ದು, ಹಣಕಾಸು ಇಲಾಖೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಬೆಳೆ ಸಾಲ ಮತ್ತು ಪುನರ್ವಸತಿ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಲಾಗುವದೆಂದ ಅವರು, ದೀರ್ಘಾವಧಿ ಪರಿಹಾರದ ಬಗ್ಗೆ ಆದ್ಯತೆ ನೀಡಬೇಕಾಗಿದೆ ಎಂದರು. ಜಿಲ್ಲೆಯಲ್ಲಿ ಆಗಿರುವ ನಷ್ಟದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಇನ್ನಷ್ಟೆ ಸಮಗ್ರ ವರದಿ ತಲುಪಬೇಕಾಗಿದೆ ಎಂದÀು ವಿಶ್ವನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಿರ್ದೇಶಕ ರಮೇಶ್ ಬಿ.ಎನ್., ಸಮಿತಿಯ ಕಾನೂನು ಸಲಹೆಗಾರ ರತನ್ ತಮ್ಮಯ್ಯ ಹಾಗೂ ಸಿಪಿಎ ಸದಸ್ಯ ಕುಕ್ಕೇರ ಜಯಾ ಚಿಣ್ಣಪ್ಪ ಉಪಸ್ಥಿತರಿದ್ದರು.