ಮಡಿಕೇರಿ, ಸೆ. 25: ಭಾರತ ಹಾಗೂ ಥೈಲ್ಯಾಂಡ್ ರಾಷ್ಟ್ರಗಳ ನಡುವೆ ಬ್ಯಾಂಕಾಕ್‍ನಲ್ಲಿ ಇತ್ತೀಚೆಗೆ ಜರುಗಿದ ಎರಡು ರಾಷ್ಟ್ರಗಳ ಥ್ರೋಬಾಲ್ ಪಂದ್ಯಾಟದಲ್ಲಿ ಭಾರತ ತಂಡ ಅರ್ಹ ಜಯಗಳಿಸಿದೆ.ಎರಡು ರಾಷ್ಟ್ರಗಳ ನಡುವೆ ನಡೆದ ಈ ಸರಣಿಯಲ್ಲಿ ಭಾರತದ ಪುರುಷರ ಹಾಗೂ ಮಹಿಳೆಯರ ತಂಡ ಪಾಲ್ಗೊಂಡಿತ್ತು. ಎರಡು ತಂಡಗಳು ಸರಣಿಯಲ್ಲಿ ಜಯಗಳಿಸಿವೆ. ಮಹಿಳಾ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕೊಡಗಿನ ನಾಪೋಕ್ಲು ಮೂಲದ ಯುವ ಆಟಗಾರ್ತಿ ಬೊಪ್ಪಂಡ ರೀಮಾ ಅಪ್ಪಚ್ಚು ಅವರು ತಂಡದ ಜಯದಲ್ಲಿ ಉತ್ತಮ ಸಾಧನೆ ತೋರಿದ್ದಾರೆ.
ಭಾರತ ಮಹಿಳಾ ತಂಡ 2-1 ರಿಂದ ಸರಣಿ ಗೆದ್ದಿದೆ. ತಂಡದ ಜಯದ ಬಗ್ಗೆ ‘ಶಕ್ತಿ’ಯೊಂದಿಗೆ ಹರ್ಷ ವ್ಯಕ್ತಪಡಿಸಿರುವ ರೀಮಾ ಸದ್ಯದಲ್ಲಿ ಸೌತ್ ಏಷ್ಯನ್ ಗೇಮ್ಸ್ ನಡೆಯಲಿದ್ದು, ಇದರಲ್ಲಿ ಮತ್ತಷ್ಟು ಸಾಧನೆ ತೋರಲು ಉತ್ಸುಕರಾಗಿರುವದಾಗಿ ತಿಳಿಸಿದರು. ರೀಮಾ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಇವರು ಕರ್ನಾಟಕ ತಂಡವನ್ನು ಪ್ರತಿನಿಧಿಸುವದರೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ಮೂಲತಃ ನಾಪೋಕ್ಲು ವಿನವರಾದ ಹಾಕಿ ಆಟಗಾರ ಬೊಪ್ಪಂಡ ಜಪ್ಪು ಅಪ್ಪಚ್ಚು ಹಾಗೂ ಸೀತಮ್ಮ (ತಾಮನೆ ಅಂಜಪರವಂಡ) ದಂಪತಿಯ ಪುತ್ರಿ.