ಶ್ರೀಮಂಗಲ, ಸೆ. 25: ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಖಾಸಗಿ ಶಾಲೆಯಲ್ಲಿ ಆರ್‍ಟಿಇ (ಕಡ್ಡಾಯ ಶಿಕ್ಷಣ ಕಾರ್ಯಕ್ರಮ) ಕಾಯ್ದೆಯಡಿಯಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಒದಗಿಸುತ್ತೇವೆಂದು ತಿಳಿಸಿತ್ತು. ಆದರೆ, ಮೊದಲ ಶೈಕ್ಷಣಿಕ ವರ್ಷ ಪೂರೈಸುತ್ತಿದ್ದರೂ ಕೆಲವು ಶಾಲೆಯ 2ನೇ ತರಗತಿ ಹೊರತುಪಡಿಸಿ 1ನೇ ತರಗತಿಯಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆಂಗ್ಲ ಪಠ್ಯ ಪುಸ್ತಕ ದೊರೆತಿರುವದಿಲ್ಲ ಎಂದು ಕೊಡಗು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಲಿಖಿತ ಪತ್ರಿಕೆ ಹೇಳಿಕೆ ನೀಡಿರುವ ಅವರು, ಆರ್‍ಟಿಇ ವಿದ್ಯಾರ್ಥಿಗಳ ಬಗ್ಗೆ ಅನುದಾನ ರಹಿತ ಶಾಲೆಗಳು ತಾರತಮ್ಯ ತೋರುತಿರುವದಾಗಿ ಆರೋಪಿಸುತ್ತಿರುವ ಸರ್ಕಾರದ ಇಲಾಖೆಯೇ ಈ ರೀತಿ ಮಾಡಿರುವದು ಎಷ್ಟು ಸಮಂಜಸ ಎಂದು ಪ್ರಶ್ನಿಸಿರುವ ಅವರು, ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಪಠ್ಯ ಪುಸ್ತಕ ನೀಡಬೇಕಾಗಿ ಒತ್ತಾಯಿಸಿದ್ದಾರೆ.
ಇದಲ್ಲದೆ, ಕೊಡಗಿನಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತ ಕುಟುಂಬಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕೊಡಗು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ವತಿಯಿಂದ ಎಲ್ಲಾ ಸಹಕಾರ ನೀಡುವದಾಗಿ ಹಾಗೂ ರಾಜ್ಯ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು ಮಕ್ಕಳ ಸಮೀಕ್ಷೆ ನಡೆಸಿ ಅವರ ವಿದ್ಯಾಭ್ಯಾಸಕ್ಕೆ ಸಹಾಯ ನೀಡುವದಾಗಿ ಭರವಸೆ ನೀಡಿದ್ದಾರೆ ಎಂದು ತಿಮ್ಮಯ್ಯ ತಿಳಿಸಿದ್ದಾರೆ.