ಗೋಣಿಕೊಪ್ಪಲು, ಸೆ. 25: ಕಳೆದ ಐದು ವರ್ಷದಿಂದ ಕೊಡಗು ಜಿಲ್ಲೆಯಲ್ಲಿ ಹೈನುಗಾರಿಕೆ ಉತ್ತೇಜನಕ್ಕೆ ನಬಾರ್ಡ್ ಮೂಲಕ ಸಾಲದ ಮೇಲೆ ಶೇ. 25 ರಷ್ಟು ಸಬ್ಸಿಡಿ ಸೌಲಭ್ಯವಿದ್ದರೂ ಯಾವೊಬ್ಬರೂ ಇದರ ಲಾಭ ಪಡೆದಿಲ್ಲ ಎಂದು ನಬಾರ್ಡ್‍ನ ಕೊಡಗು ಸಹಾಯಕ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎಂ.ಸಿ.ನಾಣಯ್ಯ ವಿಷಾಧಿಸಿದರು. ಮುಂದಿನ ಮಾರ್ಚ್ ತಿಂಗಳಿನಲ್ಲಿ ಯೋಜನೆ ಅಂತ್ಯಗೊಳ್ಳಲಿದ್ದು ಅದಕ್ಕೂ ಮುನ್ನ ಹೈನುಗಾರಿಕೆ ಉದ್ಯಮದ ಲಾಭವನ್ನು ಜಿಲ್ಲೆಯ ರೈತರು, ವ್ಯಕ್ತಿಗಳು ಹೊಂದಿಕೊಂಡು ಸರ್ಕಾರದ ಸವಲತ್ತು ಸದ್ಭಳಕೆ ಮಾಡಿಕೊಳ್ಳಲು ಮನವಿ ಮಾಡಿದರು. ಇಂದು ಇಲ್ಲಿಗೆ ಸಮೀಪ ಹೊಸೂರುವಿನ ಮಹಾದೇವರ ದೇವಸ್ಥಾನದ ಆವರಣದ ಸಮುದಾಯ ಭವನದಲ್ಲಿ ಜರುಗಿದ ವಿಶೇಷ ಮಹಾಸಭೆಯಲ್ಲಿ ಅವರು ಹೊಸೂರು, ಬೆಟ್ಟಕೇರಿ, ಕಳತ್ಮಾಡು ಗ್ರಾಮಸ್ಥರಿಗೆ ಹೈನುಗಾರಿಕೆಯ ಲಾಭೋದ್ಧೇಶಗಳನ್ನು ವಿವರಿಸಿದರು.ಅಮ್ಮತ್ತಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೋಂಡ ವಿಜು ಸುಬ್ರಮಣಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹೈನುಗಾರಿಕೆಯ ಮಹತ್ವವನ್ನು ವಿವರಿಸಿದರು.ಎಂ.ಸಿ. ನಾಣಯ್ಯ ಅವರು ಮಾತನಾಡಿ, (ಮೊದಲ ಪುಟದಿಂದ) ಹೊಸೂರು ಗ್ರಾಮಸ್ಥರು ಹೈನುಗಾರಿಕೆ ಉದ್ಯಮವನ್ನು ಸಮುದಾಯವಾಗಿ ಆರಂಭಿಸಿದ್ದಲ್ಲಿ ಸುಮಾರು 9 ಬಗೆಯ ಪೂರಕ ಯೋಜನೆಗೆ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು. ಓರ್ವ ವ್ಯಕ್ತಿ ಅಥವಾ ರೈತ 2 ಹಸುಗಳಿಂದ 10 ಹಸುಗಳ ಸಾಕಾಣಿಕೆಗೆ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಸಹಕಾರಿ ಸ್ವಾಮ್ಯದ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯವನ್ನು ಹೊಂದಬಹುದಾಗಿದ್ದು ಎಸ್‍ಸಿ. ಎಸ್‍ಟಿ ಗಳಿಗೆ ಶೇ.33 ಸಹಾಯಧನ ಹಾಗೂ ಇತರೆ ಜನಾಂಗಕ್ಕೆ ಶೇ.25 ಸಹಾಯಧನ ನೀಡಲಾಗುವದು ಎಂದು ಹೇಳಿದರು.

ಹೈನುಗಾರಿಕೆ ಅಭಿವೃದ್ಧಿ ಯೋಜನೆ ಕೇಂದ್ರದ ನಿರಂತರ ಯೋಜನೆಯಾಗಿದ್ದು ರೈತರ ಮನೆಬಾಗಿಲಿಗೆ ಯೋಜನೆ ಬಂದರೂ ಇಲ್ಲಿನ ಒಬ್ಬನೇ ರೈತ ಯೋಜನೆ ಲಾಭ ಪಡೆದಿಲ್ಲ ಎಂದು ಹೇಳಿದರು. ಡೈರಿ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಮೊದಲ ಆದ್ಯತೆ ನೀಡಲಿದ್ದು ಪರಿಶುದ್ಧ ಹಾಲು ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.ಕೊಡಗಿನಲ್ಲಿ ಇದೀಗ ಕೇವಲ 15 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಸುಮಾರು 45 ಸಾವಿರ ಲೀಟರ್ ಹಾಲು ಕೊರತೆಯನ್ನು ಹಾಸನ ಜಿಲ್ಲೆ ಹಾಗೂ ನೆರೆಯ ಕೇರಳ ರಾಜ್ಯದಿಂದ ಸರಿದೂಗಿಸಲಾಗುತ್ತಿದೆ. ಇಲ್ಲಿ ಹೈನುಗಾರಿಗೆ ಅಭಿವೃದ್ಧಿಗೊಂಡಲ್ಲಿ ಉತ್ತಮ ಲಾಭಗಳಿಸಲು ಸಾಧ್ಯ ಎಂದು ಹೇಳಿದರು.

ಹಾಲು ಸಂಗ್ರಹ ಘಟಕ, ಶೀತಲೀಕರಣ ವ್ಯವಸ್ಥೆ, ಸಂಸ್ಕ್ರರಣೆ, ಪ್ಯಾಕಿಂಗ್, ಮನೆ ಮನೆಗೆ ಸರಬರಾಜು, ಹಾಲಿನ ವಿವಿಧ ಉತ್ಪನ್ನ ಉತ್ಪಾದನೆ, ಮಿನಿಡೈರಿ ಅಥವಾ ಮಿಲ್ಕ್ ಪಾರ್ಲರ್ ಮೂಲಕ ಹಲವು ಉದ್ಯೋಗ ಸೃಷ್ಟಿಗೆ ಅವಕಾಶವಿದೆ. ಕೇಂದ್ರವು 2014 ರಿಂದಲೇ ಹೈನುಗಾರಿಕೆಗೆ ಉತ್ತೇಜನ ನೀಡುತ್ತಾ ಬಂದಿದ್ದು 2014-15ರಲ್ಲಿ ರಾಜ್ಯದ 4664 ರೈತರು ಸುಮಾರು ರೂ.18.81 ಕೋಟಿ ಸಹಾಯಧನ ಹೊಂದಿಕೊಂಡಿದ್ದು, 2015-16ರಲ್ಲಿ ಈ ಸಬ್ಸಿಡಿ ಪ್ರಮಾಣ ರೂ. 439 ಲಕ್ಷಕ್ಕೆ ಕುಸಿಯಿತು. 2016-17ರಲ್ಲಿ ರೂ. 12.97 ಕೋಟಿ ಸಬ್ಸಿಡಿಯನ್ನು ವಿತರಿಸಲಾಗಿದೆ ಎಂದು ಹೇಳಿದರು.

ಬ್ಯಾಂಕುಗಳು ತಲಾ 2 ರಾಸುಗಳನ್ನು ಕೊಳ್ಳಲು ಯಾವದೇ ಅಡಮಾನ, ಆಧಾರವಿಲ್ಲದೆ ರೂ. 1.50 ಲಕ್ಷದವರೆಗೆ ಸಾಲ ನೀಡಬಹುದು. ಅದಕ್ಕಿಂದ ಮೇಲ್ಪಟ್ಟ ಸಾಲ ಸೌಲಭ್ಯಕ್ಕೆ 2 ಎಕರೆಗೂ ಅಧಿಕ ಜಾಗ ಹೊಂದಿರಬೇಕು ಎಂದು ವಿವರಿಸಿದರು.

ಜಿ.ಪಂ. ಸದಸ್ಯ ವಿಜುಸುಬ್ರಮಣಿ ಮಾತನಾಡಿ, ಆಧುನಿಕ ಯುಗದಲ್ಲಿ ಡೆನ್ಮಾರ್ಕ್ ಒಳಗೊಂಡಂತೆ ಹಲವು ದೇಶಗಳಲ್ಲಿ ಹಾಲು ಉತ್ಪಾದನೆ ಲಾಭದಾಯಿಕ ಉದ್ಯಮ ಎಂದು ಹೇಳಿದರು. ಮಣ್ಣಿನ ಸಂರಕ್ಷಣೆ, ಫಲವತ್ತತೆ ಹಾಗೂ ದೈಹಿಕ ಆರೋಗ್ಯಕ್ಕೆ ಹಾಲು ಉದ್ಯಮ ಅಗತ್ಯ. ಇತ್ತೀಚೆಗಿನ ವರ್ಷದಲ್ಲಿ ರಸಗೊಬ್ಬರ, ರಾಸಾಯನಿಕ ಬಳಕೆಯಿಂದಾಗಿ ಕೊಡಗಿನ ಮಣ್ಣು ವಿಷವಾಗಿದೆ. ನಮ್ಮ ಗುಂಡಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಗಣಿಗೊಬ್ಬರ ಮಹತ್ವವನ್ನು ಅರಿತು ಹೈನುಗಾರಿಕೆಗೆ ಒತ್ತು ನೀಡಲು ಅವರು ಮನವಿ ಮಾಡಿದರು.

ಸಭೆಯಲ್ಲಿ ಕೊಲ್ಲೀರ ಧರ್ಮಜ, ಮೊಳ್ಳೇರ ಭೀಮಯ್ಯ ಮುಂತಾದವರು ಮಾತನಾಡಿದರು. ವೇದಿಕೆಯಲ್ಲಿ ಅಮ್ಮತ್ತಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಹುಲ್‍ನಾಥ್, ವೀರಾಜಪೇಟೆ ತಾಲೂಕು ಪಶು ಸಂಗೋಪನಾ ಇಲಾಖೆಯ ಅಧಿಕಾರಿ ಡಾ. ಶಾಂತೇಶ್, ಸಂಪನ್ಮೂಲ ವ್ಯಕ್ತಿ ಕುಶಾಲ್‍ಕುಲಕರ್ಣಿ, ಎಂ.ಎಸ್. ಗಣಪತಿ ಮುಂತಾದವರು ಉಪಸ್ಥಿತರಿದ್ದರು.

ಹೊಸೂರು ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಓ ಶ್ರೀನಿವಾಸ್ ವಂದಿಸಿದರು.