ಮಡಿಕೇರಿ, ಸೆ. 25: ಹಾಕಿ ಇಂಡಿಯಾದ ಅಧೀನದಲ್ಲಿ ಬರುವ ಹಾಕಿ ಕರ್ನಾಟಕದ ವತಿಯಿಂದ ಎಂಟು ರಾಜ್ಯಗಳನ್ನು ಒಳಗೊಂಡ ‘ಫೈವ್’ ಎ ಸೈಡ್ ಹಾಕಿ ಪಂದ್ಯಾಟ ಈ ಬಾರಿ ಬೆಂಗಳೂರಿನಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಜರುಗಿದ್ದು, ಪುರುಷರ ವಿಭಾಗದಲ್ಲಿ ಹಾಕಿ ಕರ್ನಾಟಕ ಹಾಗೂ ಮಹಿಳಾ ವಿಭಾಗದಲ್ಲಿ ಹಾಕಿ ಮಹಾರಾಷ್ಟ್ರ ಜಯಗಳಿಸಿದೆ.
ಈ ಹಿಂದೆ ಪೂನಾದಲ್ಲಿ ಎರಡು ಬಾರಿ ಈ ಪಂದ್ಯಾವಳಿ ನಡೆದಿದ್ದು, ಈ ವರ್ಷದ ಪಂದ್ಯಾಟವನ್ನು ಹಾಕಿ ಕರ್ನಾಟಕ ಬೆಂಗಳೂರಿನಲ್ಲಿ ಆಯೋಜಿಸಿತ್ತು. ಕರ್ನಾಟಕ, ಹರ್ಯಾಣ, ಮಹಾರಾಷ್ಟ್ರ, ತಮಿಳುನಾಡು, ಒರಿಸ್ಸಾ, ಜಾರ್ಖಂಡ್, ಪಂಜಾಬ್ ಹಾಗೂ ಉತ್ತರಪ್ರದೇಶ ರಾಜ್ಯ ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.
ಕೊಡಗಿನವರ ಪಾರುಪತ್ಯ
ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಭಾನುವಾರ ನಡೆದ ಫೈನಲ್ನಲ್ಲಿ ಹಾಕಿ ಹರ್ಯಾಣ ತಂಡವನ್ನು ಮಣಿಸಿ ಪ್ರಶಸ್ತಿ ಗಳಿಸಿತು. ಒಟ್ಟು 9 ಆಟಗಾರರು ತಂಡದಲ್ಲಿ ಇದ್ದು, ಇವರಲ್ಲಿ ಐದು ಮಂದಿ ಮೈದಾನದಲ್ಲಿ ಆಟವಾಡುತ್ತಾರೆ. 9 ಮಂದಿ ಆಟಗಾರರ ಪೈಕಿ ಆರು ಮಂದಿ ಕೊಡಗು ಮೂಲದವರಾಗಿದ್ದು, ವಿಶೇಷ. ತಂಡದ ನಾಯಕನಾಗಿ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ, ಕೆ.ಟಿ. ಕಾರ್ಯಪ್ಪ, ಕೆ.ಪಿ. ಸೋಮಯ್ಯ, ಪ್ರಥ್ವಿರಾಜ್, ಆಭರಣ್, ರತನ್ ಮುತ್ತಣ್ಣ ತಂಡದಲ್ಲಿದ್ದರು. ಇವರೊಂದಿಗೆ ತಂಡದ ಕೋಚ್ಗಳಾಗಿಯೂ ಕೊಡಗಿನವರಾದ ಎ.ಬಿ. ಚೀಯಣ್ಣ ಹಾಗೂ ವಿ.ಎಸ್. ವಿನಯ್ ಕರ್ತವ್ಯ ನಿರ್ವಹಿಸಿದರೆ, ತಂಡದ ವ್ಯವಸ್ಥಾಪಕ ರಿಕ್ಕಿ ಗಣಪತಿ ಅವರು ಕೂಡ ಕೊಡಗಿನವರು.
ಮಹಿಳಾ ತಂಡ
ಮಹಿಳಾ ತಂಡದಲ್ಲಿ ಹಾಕಿ ಕರ್ನಾಟಕ ಪರ ಅಂತರರಾಷ್ಟ್ರೀಯ ಆಟಗಾರ್ತಿ ಮಲ್ಲಮಾಡ ಲೀಲಾವತಿ, ನಾಪಂಡ ಸೌಮ್ಯಶ್ರೀ, ಪೂಜಾ, ನಿಶಾ, ಪವಿತ್ರಾ, ಚೆಲುವಾಂಬ ಕೊಡಗಿನವರಾಗಿದ್ದರು. ನೀಲೇಶ್ ಅಪ್ಪಣ್ಣ ಕೋಚ್ ಆಗಿದ್ದರು.
ಮಿಕ್ಸೆಡ್ ಪಂದ್ಯ
ಪುರುಷ ಹಾಗೂ ಮಹಿಳಾ ಪಂದ್ಯವಲ್ಲದೆ ಮಿಕ್ಸೆಡ್ ತಂಡವಾಗಿಯೂ ಪ್ರತ್ಯೇಕ ಪಂದ್ಯ ಏರ್ಪಡಿಸಲಾಗಿತ್ತು. ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರನ್ನು ಒಳಗೊಂಡಂತೆ ಈ ಪಂದ್ಯ ಆಕರ್ಷಕವಾಗಿತ್ತು. ಇದರಲ್ಲಿ ರಾಜ್ಯದ ಪರ ಕೊಡಗಿನ ಆಭರಣ್ ಹಾಗೂ ಲೀಲಾವತಿ ಆಟವಾಡಿದರು.
ಸರಿಗಮಪ ರಂಗು
ಭಾನುವಾರದಂದು ಎಲ್ಲಾ ವಿಭಾಗದ ಫೈನಲ್ ಪಂದ್ಯಾಟ ಹೊನಲು ಬೆಳಕಿನಲ್ಲಿ ರಂಗು ರಂಗಿನ ಕಾರ್ಯಕ್ರಮದೊಂದಿಗೆ ನಡೆಯಿತು. ವಿಶೇಷ ಆಕರ್ಷಣೆಯಾಗಿ ಜೀ ಕನ್ನಡದ ಸರಿಗಮಪ ತಂಡದ ಹಾಡುಗಾರಿಕೆ ಆಕರ್ಷಣೀಯ ವಾಗಿತ್ತು.
ವೀಕ್ಷಕ ವಿವರಣೆ
ಜಿಲ್ಲೆಯಲ್ಲಿ ಕೌಟುಂಬಿಕ ಹಾಕಿ ಉತ್ಸವದಲ್ಲಿ ಆಕರ್ಷಕ ವೀಕ್ಷಕ ವಿವರಣೆ ಮೂಲಕ ಗಮನ ಸೆಳೆದಿರುವ ಮಾಜಿ ಆಟಗಾರ ಚೆಪ್ಪುಡೀರ ಕಾರ್ಯಪ್ಪ ಅವರು ಜಿಲ್ಲೆಯಿಂದ ತೆರಳಿ ಈ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡಿದ್ದು, ವಿಶೇಷವಾಗಿತ್ತು. ಹಾಕಿ ಕರ್ನಾಟಕದ ಅಧ್ಯಕ್ಷ ಸುಗ್ರಮಣ್ಯಂ ಗುಪ್ತ, ಪಂದ್ಯಾವಳಿಯ ಯಶಸ್ಸಿಗೆ ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ, ಉಪಾಧ್ಯಕ್ಷರಾಗಿರುವ ಅರೆಯಡ ಪವಿನ್ ಪೊನ್ನಣ್ಣ ಮತ್ತಿತರರು ಶ್ರಮಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾಜಿ ಅಂತರರಾಷ್ಟ್ರೀಯ ಆಟಗಾರರಾದ ಕೊಡಗಿನ ಎಂ.ಎಂ. ಸೋಮಯ್ಯ, ಸೈಯ್ಯದ್ ಆಲಿ, ವಿ. ಆರ್. ರಘುನಾಥ್, ಕೆ.ಕೆ. ಪೂಣಚ್ಚ, ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಮತ್ತಿತರರು ಭಾಗಿಗಳಾಗಿದ್ದರು. ಕೊಡಗು ಜಿಲ್ಲೆಯ ಹಲವಷ್ಟು ಆಟಗಾರರು, ಹಾಕಿ ಕರ್ನಾಟಕದ ಪದಾಧಿಕಾರಿಗಳು ಭಾಗಿಗಳಾಗಿದ್ದರು. ಜಲ್ಲೆಯವರಾದ ಯುವ ತೀರ್ಪುಗಾರ ಕೊಂಡೀರ ಕೀರ್ತಿ ಮುತ್ತಪ್ಪ ಅವರು ಕೂಡ ಓರ್ವ ತೀರ್ಪುಗಾರರಾಗಿದ್ದರು.
- ಶಶಿ ಸೋಮಯ್ಯ