ಮಡಿಕೇರಿ, ಸೆ. 26: ವೃದ್ಧೆ ತಾಯಿಯೊಬ್ಬರು ವಯೋಮಾನ ಸಹಜ ಅನಾರೋಗ್ಯದಿಂದ ಸಾವನ್ನಪ್ಪಿರುವ ಬೆನ್ನಲ್ಲೇ ಆಕೆಯ ಮಗ ಕೂಡ ಹಠಾತ್ ಅಸ್ವಸ್ಥಗೊಂಡು ಕೊನೆಯುಸಿರೆಳೆದಿರುವ ಮಾನವೀಯ ಘಟನೆ ಮಾಯಮುಡಿ ಸಮೀಪದ ಬಾಳಾಜಿ ಗ್ರಾಮದಲ್ಲಿ ಸಂಭವಿಸಿದೆ. ಅಲ್ಲಿನ ಕೋಲುಬಾಣೆ ನಿವಾಸಿ ನಾಮೇರ ನೀಲಕ್ಕಿ ಚಂಗಪ್ಪ (81) ಅವರು ತಾ. 23ರಂದು ಕೊನೆಯುಸಿರೆಳೆದಿದ್ದರು.
ತಾ. 24ರಂದು ಅಪರಾಹ್ನ ವೇಳೆಗೆ ನೀಲಕ್ಕಿ ಅವರ ಅಂತ್ಯ ಸಂಸ್ಕಾರ ನಡೆಸಿದ್ದು, ಆ ಬೆನ್ನಲ್ಲೇ ಸ್ಮಶಾನದಿಂದ ಹಿಂತೆರಳುವ ವೇಳೆಗೆ ಮೃತರ ಪುತ್ರ ನಂದಾ ಬೋಪಯ್ಯ (53) ತೀರಾ ಬಳಲಿದ ಸ್ಥಿತಿಯಲ್ಲಿ ಕುಸಿದಿದ್ದಾರೆ. ಬಂಧುಗಳು ಈ ವೇಳೆ ನೀರು ಕುಡಿಸಿ ಮನೆಗೆ ಕರೆ ತಂದಿದ್ದಾರೆ.
ಮನೆಗೆ ಬಂದ ಬೋಪಯ್ಯ ಸುಧಾರಿಸಿಕೊಂಡು ಸ್ನಾನ ಮಾಡಿದ್ದು, ಅಷ್ಟರಲ್ಲಿ ಮತ್ತೊಮ್ಮೆ ತೀವ್ರ ಅಸ್ವಸ್ಥಗೊಂಡ ಮೇರೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗೋಣಿಕೊಪ್ಪಲುವಿನಲ್ಲಿ ಪ್ರಥಮ ಚಿಕಿತ್ಸೆಯೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವ ತಯಾರಿಯಲ್ಲಿ ಇರುವಾಗಲೇ ಮಾರ್ಗಮಧ್ಯೆ ಪ್ರಾಣಪಕ್ಷಿ ಹಾರಿಹೋಗಿದೆ. ಒಂದೊಮ್ಮೆ ಮುಂಬೈನಲ್ಲಿ ನೆಲೆಸಿದ್ದ ಬೋಪಯ್ಯ ಹೆತ್ತವರ ಯೋಗಕ್ಷೇಮ ನೋಡಿಕೊಳ್ಳುವ ಸಲುವಾಗಿ ಹಿಂತಿರುಗಿ ಬಂದು ಗ್ರಾಮದಲ್ಲಿ ವಾಸಿಸುತ್ತಿದ್ದುದಾಗಿ ಬಂಧುವರ್ಗ ತಿಳಿಸಿದ್ದು, ತಾಯಿಯೊಂದಿಗೆ ಮಗನ ಅಗಲಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ಬೋಪಯ್ಯ ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.