ವೀರಾಜಪೇಟೆ, ಸೆ. 26: ಕುಟುಂಬ ಸದಸ್ಯರ ನಕಲಿ ಸಹಿ ಬಳಸಿ ಖಾತೆ ಬದಲಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಕೊಕ್ಕಂಡ ಗಿಣಿ ಗಣಪತಿ ಎಂಬವರು ಕೊಕ್ಕಂಡ ಬೆಳ್ಳಿಯಪ್ಪ, ಪೊನ್ನಂಪೇಟೆ ರೆವಿನ್ಯೂ ಅಧಿಕಾರಿ, ಗ್ರಾಮ ಲೆಕ್ಕಿಗ, ಸರ್ವೆ ಅಧಿಕಾರಿ ವಿರುದ್ಧ ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಬೆಳ್ಳಿಯಪ್ಪ ಹಾಗೂ ಅಧಿಕಾರಿಗಳ ವಿರುದ್ಧ 111/18, 467,468,420, ರೀಡ್ ವಿತ್ 34 ಪ್ರಕರಣ ದಾಖಲಾಗಿದೆ.
ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕ್ಕಂಡ ಎಸ್ ಬೆಳ್ಳಿಯಪ್ಪ ಎಂಬವರು ಸರ್ವೆ ಸಂಖ್ಯೆ 61/2ರಲ್ಲಿ ಕುಟುಂಬಕ್ಕೆ ಸೇರಿದ 1.20ಎಕರೆ ಜಾಗವನ್ನು ಸೆಪ್ಟೆಂಬರ್ 7 ರಂದು ಕುಟುಂಬ ಸದಸ್ಯರ ಗಮನಕ್ಕೆ ತಾರದೆ ತನ್ನ ಹೆಸರಿಗೆ ಖಾತೆ ಮಾಡಿಸಿ ಕೊಂಡಿದ್ದಾರೆ. 30.08.18 ರಂದು ನಮೂನೆ 21 ನಿಯಮ 65ರಲ್ಲಿ ತಮ್ಮಯ್ಯ, ಅಚ್ಚಪ್ಪ, ರಾಜು, ಮಿಟ್ಟು, ಕೆ.ಎ ದೇವಯ್ಯ, ಕೆ.ಡಿ ನಾಣಯ್ಯ ಹಾಗೂ ನನ್ನ ಸಹಿಯನ್ನು ನಕಲಿ ಮಾಡಿ ಪೊನ್ನಂಪೇಟೆ ರೆವಿನ್ಯೂ ಇಲಾಖೆಯ ಗ್ರಾಮ ಲೆಕ್ಕಿಗರು, ಕಂದಾಯ ಪರಿವೀಕ್ಷಕರು ಹಾಗೂ ವೀರಾಜಪೇಟೆ ಭೂಮಾಪನ ಅಧಿಕಾರಿಗಳು ಅವರಿಗೆ ಹಕ್ಕು ಬದಲಾವಣೆ ಮಾಡಿಕೊಟ್ಟಿದ್ದಾರೆ.
ಕೆ.ಎಸ್ ಬೆಳ್ಳಿಯಪ್ಪ ಅವರು ನಕಲಿ ಸಹಿ ಮಾಡಿ ವಂಚಿಸಿರುವ ದಾಖಲೆಗಳ ಮುಖಾಂತರ ವರ್ಗಾಹಿಸಿಕೊಂಡ ಜಾಗದಲ್ಲಿ ಕುಟುಂಬದ ದೇವಸ್ಥಾನ(ಕ್ಯೆಮಾಡ), ಮೂರ್ತಿ ದೇವರುಗಳ ಸ್ಥಾನಗಳು, ಇರುವದರಿಂದ ಆ ಜಾಗವನ್ನು ಕುಟುಂಬದ ಉಪಯೋಗಕ್ಕಾಗಿ ಹಾಗೆಯೆ ಬಿಡಲಾಗಿದೆ. ಅಲ್ಲದೆ ಪ್ರತಿ ಏಪ್ರಿಲ್ ತಿಂಗಳಲ್ಲಿ ಈ ಸ್ಥಳದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಸೇರಿ ಗುರು ಹಿರಿಯರಿಗೆ ಮೀದಿ ಇಡುವ ಕಾರ್ಯವು ನಡೆಯುತ್ತದೆ. ಆ ಜಾಗನ್ನು ಕಬಳಿಸಿದ ಬೆಳ್ಳಿಯಪ್ಪ ಹಾಗೂ ಅವರ ಹೆಸರಿಗೆ ಜಾಗವನ್ನು ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಿದ್ದಾರೆ.