ಮಡಿಕೇರಿ, ಸೆ. 26: ಪ್ರಾಕೃತಿಕ ವಿಕೋಪದಿಂದ ಮನೆ-ಮಠಗ ಳೊಂದಿಗೆ ಜೀವನದ ಅಸ್ತಿತ್ವವನ್ನೇ ಕಳೆದುಕೊಂಡಿರುವ ಕೊಡಗಿನ ನಿರಾಶ್ರಿತರಿಗೆ ಹೊಸ ಬದುಕನ್ನು ಕಟ್ಟಿಕೊಡಲು ನೂರಾರು ಎಕರೆ ಜಮೀನು ಹೊಂದಿರುವ ಸ್ಥಿತಿವಂತರು ಒಂದಷ್ಟು ಭೂದಾನಕ್ಕೆ ಮುಂದಾಗ ಬೇಕೆಂದು ಕೊಡಗಿನ ಸಹೃದಯಿ ಹಿತೈಷಿಗಳ ಕೂಟ ಮನವಿ ಮಾಡಿದೆÉ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಟದ ಸದಸ್ಯ ಕೆ.ಎಂ. ಕರುಂಬಯ್ಯ, ಪ್ರಾಕೃತಿಕ ವಿಕೋಪ ಕಂಡು ಕೇಳರಿಯದ ಸಂಕಷ್ಟಗಳನ್ನು ತಂದೊಡ್ಡಿದೆ. ಹತ್ತಾರು ಎಕರೆ, ತೋಟ, ಮನೆಗಳನ್ನು ಹೊಂದಿದ್ದಂತಹವರು, ಕೆಲವಾರು ಸೆಂಟ್ಗಳಲ್ಲಿ ಮನೆ ಕಟ್ಟಿಕೊಂಡವರು ಪ್ರಸ್ತುತ ಅಕ್ಷರಶಃ ನಿರ್ಗತಿಕರಾಗಿದ್ದಾರೆ, ಅವರ ಬದುಕು ಅತಂತ್ರ ಸ್ಥಿತಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಂದೂರು, ಮುಕ್ಕೋಡ್ಲು ಸೇರಿದಂತೆ ಹಲವೆಡೆಗಳಲ್ಲಿ ಗುಡ್ಡಕ್ಕೆ ಗುಡ್ಡವೆ ಕುಸಿತಕ್ಕೆ ಒಳಗಾಗಿ ತೋಟ ಗದ್ದೆಗಳು ಸಂಪೂರ್ಣ ನಾಮಾವ ಶೇಷವಾಗಿದೆ. ಇದರಿಂದ ನೂರಾರು ಮಂದಿಯ ಬದುಕು ಅತಂತ್ರವಾಗಿದೆ. ಇಂತಹ ನಿರ್ವಸತಿಗರ ನೆರವಿಗಾಗಿ ಹೆಚ್.ಎಂ. ಕೃಷ್ಣ ಅವರ ಮಾರ್ಗದರ್ಶನದಂತೆ ಸಮಾನ ಮನಸ್ಕರು ಸೇರಿ ಕೂಟವನ್ನು ರಚಿಸಿಕೊಳ್ಳುವ ಮೂಲಕ, ಸಂತ್ರಸ್ತರಿಗೆ ಅಗತ್ಯ ನೆಲೆಯನ್ನು ಒದಗಿಸಲು ನೆರವು ನೀಡಲು ಕಾರ್ಯೋನ್ಮುಖ ರಾಗಿರುವದಾಗಿ ತಿಳಿಸಿದರು.
ರಾಜ್ಯ ಸರ್ಕಾರ ಹಾಗೂ ರಾಜ್ಯದ ವಿವಿಧ ಸಂಘ-ಸಂಸ್ಥೆಗಳಿಂದ ನೆರವಿನ ಹಸ್ತ ನೀಡುತ್ತಿದ್ದು, ಇದು ಸಂತ್ರಸ್ತರಿಗೆ ಒಂದಷ್ಟು ಸಹಾಯವನ್ನು ದೊರಕಿಸ ಬಹುದಷ್ಟೆ. ಆದರೆ, ಕಳೆದುಕೊಂಡ ಕಾಫಿ ತೋಟ, ಗದ್ದೆಗಳನ್ನು ಮರಳಿ ದೊರಕಿಸಿಕೊಡುವದು ಅಸಾಧ್ಯ. ಕುಸಿದ, ಕೆಸರು ತುಂಬಿದ ಗದ್ದೆಗಳಲ್ಲಿ ಮತ್ತೆ ಬೆಳೆ ಬೆಳೆಯುವದು ಅಸಾಧ್ಯವಾದ ಪರಿಸ್ಥಿತಿ ಇದೆ. ಈ ಹಿನ್ನೆಲೆ ಕೊಡಗಿನ ಸ್ಥಿತಿವಂತ ಕಾಫಿ ತೋಟ ಮಾಲೀಕರು ಕೊಡುಗೈ ದಾನಿಗಳಾಗಿದ್ದು, ಇಂತಹವರ ನೆರವನ್ನು ಕೂಟ ಬಯಸುತ್ತದೆ ಎಂದು ಕರುಂಬಯ್ಯ ಹೇಳಿದರು.
ಸಂತ್ರಸ್ತರಿಗೆ ನೆರವನ್ನು ನೀಡಲು ಆಸಕ್ತರಾದ ಹಲ ಮಂದಿಗೆ ತಾವು ಹೇಗೆ ಜಾಗವನ್ನು ದಾನವಾಗಿ ನೀಡುವದು, ಯಾರಿಗೆ ನೀಡುವದು, ನೈಜ ಸಂತ್ರಸ್ತರು ಯಾರೆನ್ನುವ ಬಗ್ಗೆ ಸ್ಪಷ್ಟ ಮಾಹಿತಿಗಳು ಇಲ್ಲ. ಅಂತಹವರು ಕೂಟವನ್ನು ಸಂಪರ್ಕಿಸಿದಲ್ಲಿ ನೈಜ ಸಂತ್ರಸ್ತರ ಬಗ್ಗೆ ಮಾಹಿತಿ ಒದಗಿಸುವದಲ್ಲದೆ, ಜಾಗ ದಾನಕ್ಕೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ಅಗತ್ಯ ನೆರವನ್ನು ಒದಗಿಸಲಾಗುವದೆಂದು ತಿಳಿಸಿದರು. ನೂರಾರು ಎಕರೆ ತೋಟ ಹೊಂದಿ ದವರು ತಲಾ 5 ಎಕರೆ ಜಾಗವನ್ನು ದಾನವಾಗಿ ನೀಡಿದಲ್ಲಿ ಸಂತ್ರಸ್ತರ ಸಂಕಷ್ಟಗಳನ್ನು ದೂರಮಾಡಲು ಸಾಧ್ಯವಿದೆಯೆಂದು ಕರುಂಬಯ್ಯ ಅಭಿಪ್ರಾಯಪಟ್ಟರು. ಆಸಕ್ತ ದಾನಿಗಳು ಹೆಚ್.ಎಂ. ಕೃಷ್ಣ ಮೊ. 9483620213, ಮೊಹಮ್ಮದ್ ಆಸಿಫ್ ಮೊ. 9845606784, ಕೆ.ಎಂ. ಕರುಂಬಯ್ಯ ಮೊ. 8088004755 ನ್ನು ಸಂಪರ್ಕಿಸಬಹುದು.
ಗೋಷ್ಠಿಯಲ್ಲಿ ಕೂಟದ ಸದಸ್ಯರುಗಳಾದ ಹೆಚ್.ಎಂ. ಕೃಷ್ಣ, ಮೊಹಮ್ಮದ್ ಆಸಿಫ್, ಸುರಯ್ಯಾ ಅಬ್ರಾರ್, ಬಾನು ಅಪ್ಪಣ್ಣ ಹಾಗೂ ಅಂಬೆಕಲ್ ನವೀನ್ ಉಪಸ್ಥಿತರಿದ್ದರು.