ಸೋಮವಾರಪೇಟೆ, ಸೆ. 26: ಪಟ್ಟಣ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದ್ದ ಪರಿಹಾರ ಸಾಮಗ್ರಿಗಳನ್ನು ಗ್ರಾ.ಪಂ.ನ ಕೆಲ ಸಿಬ್ಬಂದಿಗಳು ಮತ್ತು ಸದಸ್ಯರು ತಮ್ಮ ಮನೆಗೆ ಸಾಗಿಸಿರುವ ಆರೋಪ ಕೇಳಿಬಂದಿದೆ.

ಕಳೆದ ಒಂದು ತಿಂಗಳ ಹಿಂದೆ ಕುಶಾಲನಗರ ಮತ್ತು ಸೋಮವಾರಪೇಟೆಯ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ತೆರೆಯಲಾಗಿದ್ದ ಪರಿಹಾರ ಕೇಂದ್ರದಲ್ಲಿ ಉಳಿಕೆಯಾಗಿದ್ದ ಪರಿಹಾರ ಸಾಮಗ್ರಿಗಳನ್ನು ಚೌಡ್ಲು ಗ್ರಾಮ ಪಂಚಾಯಿತಿ ಕಚೇರಿಗೆ ಸಾಗಿಸಲಾಗಿತ್ತು. ಕುಶಾಲನಗರದಿಂದ ಗ್ರಾ.ಪಂ.ನ ಕೆಲ ಸಿಬ್ಬಂದಿಗಳೇ ಪರಿಹಾರ ಸಾಮಗ್ರಿಗಳನ್ನು ತಂದು ಕಚೇರಿಯಲ್ಲಿ ಸಂಗ್ರಹಿಸಿಟ್ಟಿದ್ದರು.

ನಂತರ ಸರ್ಕಾರದ ವಿಶೇಷ ಅನ್ನಭಾಗ್ಯ ಯೋಜನೆಯಡಿ ಆಹಾರ ಇಲಾಖೆಯಿಂದ ಪಡಿತರ ಚೀಟಿದಾರರಿಗೆ ಪಡಿತರ ಸಾಮಾಗ್ರಿಗಳು ಬಂದಿದ್ದರಿಂದ ಅವುಗಳನ್ನು ಗ್ರಾ.ಪಂ. ಮೂಲಕವೇ ಫಲಾನುಭವಿಗಳಿಗೆ ವಿತರಿಸಲಾಗಿತ್ತು. ಈ ಮಧ್ಯೆ ಕುಶಾಲನಗರ ಮತ್ತು ಸೋಮವಾರಪೇಟೆಯ ಗೌಡ ಸಮಾಜದ ಪರಿಹಾರ ಕೇಂದ್ರದಿಂದ ತಂದಿದ್ದ ಸಾಮಗ್ರಿಗಳನ್ನು ಕಚೇರಿಯಲ್ಲಿಯೇ ಇಟ್ಟುಕೊಳ್ಳಲಾಗಿತ್ತು.

ನಿನ್ನೆ ದಿನ ಗ್ರಾಮ ಪಂಚಾಯಿತಿಯ ಮೂವರು ಸದಸ್ಯರು ಹಾಗೂ 6 ಮಂದಿ ಸಿಬ್ಬಂದಿಗಳು, ಪಂಚಾಯಿತಿಯಲ್ಲಿ ಇಡಲಾಗಿದ್ದ 120 ಕೆ.ಜಿ. ಗೋಧಿ, 200 ಕೆ.ಜಿ.ಗೂ ಅಧಿಕ ಬಿ.ಟಿ. ಅಕ್ಕಿ, 60 ಕೆ.ಜಿ. ಸಕ್ಕರೆ, ಚಾಪೆ, ಬೆಡ್‍ಶೀಟ್, ಬಿಸ್ಕೆಟ್, ಬಕೇಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಹಂಚಿಕೊಂಡ ವಸ್ತುಗಳನ್ನು ಆಟೋಗಳಲ್ಲಿ ತಮ್ಮ ಮನೆಗೆ ಸಾಗಿಸಿದ್ದಾರೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.

ಈ ಮಧ್ಯೆ ಗ್ರಾಮ ಪಂಚಾಯಿತಿಯ ಕೆಲವು ಸಿಬ್ಬಂದಿಗಳು ಹಾಗೂ ಕೆಲ ಸದಸ್ಯರು ಪರಿಹಾರ ಸಾಮಗ್ರಿಗಳನ್ನು ತೆಗೆದುಕೊಂಡಿರುವದಕ್ಕೆ ಅಸಮಾಧಾನ ವ್ಯಕ್ತಗೊಂಡಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಪಡಿತರ ಚೀಟಿ ಇಲ್ಲದೆಯೇ ತೀರಾ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರು ಅನೇಕರಿದ್ದು, ಇವರುಗಳಿಗಾದರೂ ಪರಿಹಾರ ಸಾಮಗ್ರಿ ವಿತರಿಸಬೇಕಿತ್ತು ಎಂಬ ಅಭಿಪ್ರಾಯಗಳು ವ್ಯಕ್ತಗೊಂಡಿದೆ.