ವೀರಾಜಪೇಟೆ, ಸೆ. 26: ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ಬೇರೆ ಮಾರ್ಗದಲ್ಲಿ ಕೊಂಡೊಯ್ದು ಬೇಟೋಳಿಯ ಅರಣ್ಯದೊಳಗೆ ಕರೆದೊಯ್ಯಲು ವಿಫಲ ಪ್ರಯತ್ನ ನಡೆಸಿದ ದೂರಿನ ಮೇರೆ ಇಲ್ಲಿನ ನಗರ ಪೊಲೀಸರು ಚಾಲಕನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ತಾ. 24ರಂದು ಬೆಳಿಗ್ಗೆ 8 ಗಂಟೆಗೆ ಇಲ್ಲಿನ ಮೀನುಪೇಟೆಯಿಂದ ಕುಕ್ಲೂರು ಗ್ರಾಮಕ್ಕೆ ಹೋಗಲು ಆಟೋ ರಿಕ್ಷಾ (ಕೆ.ಎ.12 ಎ 4331) ಹತ್ತಿದ ಶ್ರೀಜಾ (24) ಎಂಬ ಯುವತಿ ಚಾಲಕನೊಂದಿಗೆ ಕುಕ್ಲೂರು ಗ್ರಾಮದ ಕಿಗ್ಗಾಲು ಶೀಟ್ ಫ್ಯಾಕ್ಟರಿಗೆ ಹೋಗುವಂತೆ ನಿರ್ದೇಶಿದಳು. ಆದರೆ ಚಾಲಕ ಕುಕ್ಲೂರಿಗೆ ಹೋಗುವ ರಸ್ತೆಗೆ ಬದಲಾಗಿ ಮಹಿಳಾ ಸಮಾಜ ರಸ್ತೆಗೆ ವೇಗವಾಗಿ ತೆರಳುತ್ತಿದ್ದುದನ್ನು ನೋಡಿ ಚಾಲಕನನ್ನು ನಿಲ್ಲಿಸಲು ಹೇಳಿದರೂ ಆಟೋ ನಿಲ್ಲಿಸದಿದ್ದರಿಂದ ಸಂಶಯಗೊಂಡು ಮಹಿಳಾ ಸಮಾಜದಿಂದ ಕೆಲವು ಅಡಿಗಳ ಅಂತರದಲ್ಲಿ ಆಟೋದಿಂದ ಧುಮುಕಿ ರಸ್ತೆಗೆ ಬಿದ್ದುದರಿಂದ ತಲೆ, ಕೈ, ಕಾಲುಗಳಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿದೆ. ಯುವತಿಯ ಎಡದ ಕಾಲಿನ ಮೂಳೆ ಮುರಿದಿದೆ. ರಸ್ತೆಗೆ ಬಿದ್ದನಂತರ ರಕ್ತ ಸಿಕ್ತದ ಉಡುಪಿನಲ್ಲಿಯೇ ಯುವತಿ ನಡೆದುಕೊಂಡು ಪಶುವೈದ್ಯ ಶಾಲೆಯ ಬಳಿ ಬಂದಾಗ ಆಕೆಯನ್ನು ಅಪರಿಚಿತ ಮಹಿಳೆ ಇಲ್ಲಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ಸೇರಿಸಿದ್ದಾರೆ. ಯುವತಿ ಆಟೋ ರಿಕ್ಷಾದಿಂದ ಧುಮುಕಿದ ತಕ್ಷಣ ಚಾಲಕ ಆಟೋ ಸಮೇತ ಪರಾರಿಯಾದನು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಶ್ರೀಜಾ ಇಲ್ಲಿನ ನಗರ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸಿ ಅಪಹರಣಕ್ಕೆ ಬಳಸಿದ ಆಟೋ ರಿಕ್ಷಾವನ್ನು ಇಂದು ವಶ ಪಡಿಸಿಕೊಂಡಿದ್ದಾರೆ.
ಪೊಲೀಸರ ತನಿಖೆಯಿಂದ ಆಟೋ ಚಾಲಕ ಹೆಗ್ಗಳ ಗ್ರಾಮದವನಾಗಿದ್ದು ಚಾಲಕನ ಸುಳಿವು ಪೊಲೀಸರಿಗೆ ಗೊತ್ತಾಗಿದ್ದು ಚಾಲಕ ತಲೆಮರೆಸಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ.