ಬೆಂಗಳೂರು, ಸೆ. 26: ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ಮಾಸಿಕ ರೂ. 10 ಸಾವಿರ ನಗದನ್ನು ಕುಟುಂಬ ನಿರ್ವಹಣೆಗಾಗಿ ನೀಡಲು ಸರಕಾರ ತೀರ್ಮಾನಿಸಿದೆ ಎಂದು ವಸತಿ ಸಚಿವ ಯು.ಟಿ. ಖಾದರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರಕಾರ ಅವರಿಗೆ ಶಾಶ್ವತ ಸೂರು ಕಲ್ಪಿಸುವವರೆಗೂ ಈ ಮಾಸಿಕ ಧನಸಹಾಯ ಲಭ್ಯವಾಗಲಿದೆ ಎಂದು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 800 ರಿಂದ 900 ಕುಟುಂಬಗಳು ಸೂರು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರಿಗೆ ಮನೆ ನಿರ್ಮಾಣ ಮಾಡಿಕೊಡುವವರೆಗೂ ಅವರು ವಸತಿ ಹಾಗೂ ಇತರ ವೆಚ್ಚಕ್ಕಾಗಿ ಸರಕಾರ ಈ ರೂಪದಲ್ಲಿ ಹಣ ಭರಿಸಲಿದೆ.
ಸೂರು ಕೆಳೆದುಕೊಂಡ ಪ್ರತಿ ಕುಟುಂಬಕ್ಕೂ ರೂ. 6 ಲಕ್ಷ ವೆಚ್ಚದಲ್ಲಿ ಮಾದರಿ ಮನೆ ನಿರ್ಮಿಸಿಕೊಡಲಾಗುವದು. ನಿರಾಶ್ರಿತರಿಗೆ ಶೆಡ್ ನಿರ್ಮಾಣ ಮಾಡುವದನ್ನು ಕೈಬಿಡಲಾಗಿದ್ದು, ರಾಜೀವ್ ಗಾಂಧಿ ವಸತಿ ನಿಗಮ ಮತ್ತು ಖಾಸಗಿಯವರಿಂದಲೂ ಇದೇ ವೆಚ್ಚದಲ್ಲಿ ಮನೆ ನಿರ್ಮಿಸುವ ಕಡೆ ಗಮನ ಹರಿಸಲಾಗಿದೆ ಎಂದರು. ಒಂದುವೇಳೆ ಫಲಾನುಭವಿಗಳು ಸರಕಾರ ನಿಗದಿಪಡಿಸಿರುವ ಹಣದ ಜೊತೆಗೆ ತಾವು ಮತ್ತಷ್ಟು ಹಣ ಹಾಕಿಕೊಂಡು ಮನೆ ನಿರ್ಮಾಣ ಮಾಡಿಕೊಂಡರೂ, ಅದಕ್ಕೂ ಅವಕಾಶ ಕಲ್ಪಿಸಲಾಗುವದು. ಇಲ್ಲವೇ ತಮ್ಮ ಸ್ವಂತ ನಿವೇಶನದಲ್ಲಿ ಸೂರು ನಿರ್ಮಿಸಿಕೊಂಡರೂ ಸರಕಾರ ನಿಗದಿಪಡಿಸಿದ ಹಣವನ್ನು ಅವರ ಬಾಬ್ತಿಗೆ ಸಂದಾಯ ಮಾಡುವದಾಗಿ ಸ್ಪಷ್ಟಪಡಿಸಿದರು.
ರಾಜೀವ್ ಗಾಂಧಿ ವಸತಿ ನಿಗಮದಿಂದ ಮಂಜೂರಾಗಿದ್ದ ಮನೆಗಳ ಫಲಾನುಭವಿಗಳು ನಿಗದಿತ ಸಮಯದಲ್ಲಿ ಮನೆ ನಿರ್ಮಾಣದ ಪ್ರಗತಿಯ ವಿವರಗಳನ್ನು ಅಪ್ಲೋಡ್ ಮಾಡದವರಿಗೆ ಸೆ. 5 ರಿಂದ 25 ರ ನಡುವೆ ಒಂದು ಬಾರಿ ಅವಕಾಶ ಕಲ್ಪಿಸಲಾಗಿದೆ ಎಂದು ಇದೇ ಸಂದರ್ಭ ತಿಳಿಸಿದರು.
ರಾಜ್ಯದಲ್ಲಿ 72 ಸಾವಿರದ 370 ಮನೆಗಳು ವಿವಿಧ ಹಂತದಲ್ಲಿದ್ದು, ಅವುಗಳು ಬ್ಲಾಕ್ ಆಗಿದ್ದವು. ಬ್ಲಾಕ್ ತೆಗೆದು ಮನೆ ಪ್ರಗತಿ ವಿವರವನ್ನು ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಿದಾಗ 37,508 ಫಲಾನುಭವಿಗಳು ತಮ್ಮ ಮನೆಯ ವಿವರಗಳನ್ನು ಅಪ್ಲೋಡ್ ಮಾಡಿದ್ದರು. ಆ ಪೈಕಿ 19,245 ಮನೆಗಳ ವಿವರ ಸರಿಯಾಗಿದ್ದವು. ಆಯಾಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಆ ಅಧಿಕಾರಿಗಳು ಅದನ್ನು ಪರಿಶೀಲಿಸಿ ಸರಿಯಾಗಿದೆ ಎಂದು ಕಳುಹಿಸಿದರೆ ಅಂಥವರಿಗೆ ಮತ್ತೆ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲು ಮತ್ತೊಂದು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು. ಮೈತ್ರಿ ಸರಕಾರದ ಪೂರ್ಣ ಅವಧಿಯಲ್ಲಿ 20 ಲಕ್ಷ ಮನೆಗಳನ್ನು ನಿರ್ಮಿಸಿ ಸೂರಿಲ್ಲದವರಿಗೆ ಹಂಚಲು ತೀರ್ಮಾನ ಕೈಗೊಳ್ಳಲಾಗಿದೆ.
ಪ್ರತಿವರ್ಷ ನಾಲ್ಕು ಲಕ್ಷ ಮನೆ ನಿರ್ಮಾಣ ಮಾಡಲಿದ್ದು, ಅದರಲ್ಲಿ 2.50 ಲಕ್ಷ ಗ್ರಾಮೀಣ ಭಾಗಕ್ಕೂ, ಉಳಿದ 1.50 ಲಕ್ಷ ಮನೆಗಳು ನಗರ ಪ್ರದೇಶಕ್ಕೆ ಮೀಸಲಿಡಲಾಗುವದು. ಪ್ರಸಕ್ತ ವರ್ಷ ಕೊಳೆಗೇರಿ ನಿವಾಸಿಗಳಿಗೆ 83 ಸಾವಿರ ಮನೆ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿರುವದರ ಜೊತೆಗೆ ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯುವದಾಗಿ ತಿಳಿಸಿದರು.