ಮಡಿಕೇರಿ, ಸೆ. 26: ಜಿಲ್ಲೆಯ ಅಲ್ಲಲ್ಲಿ ಕೆಲವು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಜನತೆ ತತ್ತರಿಸಿ ಹೋಗಿದ್ದರು. ಎಡೆಬಿಡದೆ ಸುರಿದ ಮಳೆಯಿಂದಾಗಿ ಆ ಸಂದರ್ಭದಲ್ಲಿ ತೋಟಗಳಿಗೆ ಗೊಬ್ಬರ ಹಾಕಲೂ ಸಮಸ್ಯೆ ಎದುರಿಸಿದ್ದ ಬೆಳೆಗಾರರು ಸಣ್ಣ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಹಾಗೂ ಈಗಿನ ವಾತಾವರಣವನ್ನು ಬಳಸಿಕೊಂಡು ಗೊಬ್ಬರ ಹಾಕುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಇದು ಒಂದೆಡೆಯಾದರೆ ಮೊದಲೇ ಕಂಗೆಟ್ಟಿರುವ ಜನರನ್ನು ಮತ್ತೆ ಬೆಚ್ಚಿ ಬೀಳಿಸುವಂತೆ ಗುಡುಗು ಮಿಂಚಿನ ದೃಶ್ಯವೂ ಇದೀಗ ಕಂಡುಬರುತ್ತಿರುವದು ಆತಂಕ ಹೆಚ್ಚಿಸುವಂತೆ ಮಾಡಿದೆ. ನಿನ್ನೆ ತಡರಾತ್ರಿಯಲ್ಲಿ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಇಂತಹ ಸನ್ನಿವೇಶ ಎದುರಾಗಿತ್ತಾದರೂ, ಇಂದು ಬೆಳಿಗ್ಗೆಯಿಂದ ವಾತಾವರಣ ಮತ್ತೆ ತಿಳಿಯಾಗಿತ್ತು.

ಆದರೆ ಸಂಜೆ ನಾಲ್ಕೂವರೆಯ ಸುಮಾರಿಗೆ ಭಾರೀ ಶಬ್ದದೊಂದಿಗೆ ಸಿಡಿಲು ಕೇಳಿ ಬಂದಿದ್ದು ಕೆಲವೇ ಕ್ಷಣಗಳಲ್ಲಿ ವಾತಾವರಣ ಮಂದ ಬೆಳಕಿನಿಂದ ಆವೃತ್ತವಾಗಿ ಮಳೆ ಸುರಿಯ ತೊಡಗಿತು. ದಿಢೀರನೆ ಬದಲಾದ ಈ ಸನ್ನಿವೇಶ ಜನತೆಯಲ್ಲಿ ಆತಂಕ ಸೃಷ್ಟಿಸುವಂತೆ ಮಾಡಿತಾದರೂ, ನಂತರ ಸಹಜತೆ ಕಂಡಿತು. ಆದರೂ ಮತ್ತೆ ಮತ್ತೆ ಗುಡುಗಿದ ಶಬ್ಧ ಕೇಳಿ ಬಂದಿದ್ದು ಮಾತ್ರ ಆತಂಕವನ್ನು ಮುಂದುವರಿಸುವಂತೆ ಮಾಡಿತು.

ಕುಶಾಲನಗರ : ಮಂಗಳವಾರ ರಾತ್ರಿ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಗುಡುಗು ಮಿಶ್ರಿತ ಮಳೆ ಸುರಿದಿದೆ. ಸತತವಾಗಿ 5 ರಿಂದ 6 ಗಂಟೆಗಳ ಕಾಲ ಗಾಳಿಯೊಂದಿಗೆ ಭಾರೀ ಪ್ರಮಾಣದ ಗುಡುಗು, ಮಿಂಚಿನೊಂದಿಗೆ ಸುರಿದ ಮಳೆಯಿಂದ ನಾಗರಿಕರು ಭಯಭೀತಗೊಂಡ ಬಗ್ಗೆ ವರದಿಯಾಗಿದೆ. ಬುಧವಾರ ದಿನವಿಡೀ ಮೋಡ ಕವಿದ ವಾತಾವರಣ ಕಂಡುಬಂತು.

ಸಿದ್ದಾಪುರ: ಸಿದ್ದಾಪುರ ಸುತ್ತಮುತ್ತಲಿನಲ್ಲಿ ಮಂಗಳವಾರ ದಂದು ಮಧ್ಯರಾತ್ರಿಯಲ್ಲಿ ಸಿಡಿಲು, ಮಿಂಚು ಸಹಿತ ಧಾರಕಾರ ಮಳೆ ಸುರಿದಿದ್ದು, ಬಾರಿ ಸಿಡಿಲಿನ ಶಬ್ಧಕ್ಕೆ ಜನ ಭಯಭೀತರಾದರು.

ಸಿದ್ದಾಪುರ ಸಮೀಪದ ಹೊಸ್ಕೇರಿ ಗ್ರಾಮದಲ್ಲಿ ಸಿಡಿಲಿನ ಅಬ್ಬರಕ್ಕೆ ಕೆಲವು ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಹಾನಿಯಾಗಿರುವದು ತಿಳಿದು ಬಂದಿದೆ.