ಮಡಿಕೇರಿ, ಸೆ.30 : 2018ರ ಮುಂಗಾರು ಋತುವಿನಲ್ಲಿ ಖಾಸಗಿ ನಿವಾಸಿಗಳನ್ನು ಬಳಸಿ ಬೆಳೆ ಸಮೀಕ್ಷೆ ಯೋಜನೆ ಸಂಬಂಧ ಬೆಳೆ ಸಮೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ರೈತರು ಸಹಕರಿಸುವಂತೆ ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ.
ಈ ಬೆಳೆ ಸಮೀಕ್ಷೆಯಿಂದ ಸರ್ಕಾರಕ್ಕೆ ಮತ್ತು ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸರ್ಕಾರಕ್ಕೆ ಖಚಿತವಾಗಿ ಯಾವ ಬೆಳೆ ಎಷ್ಟು ವಿಸ್ತೀರ್ಣದಲ್ಲಿ ಬೆಳೆದಿದೆ ಎಂಬದನ್ನು ತಿಳಿಯಬಹುದಾಗಿದೆ. ಯಾವದೇ ಪ್ರದೇಶದಲ್ಲಿ ಪ್ರಕೃತಿ ವಿಕೋಪದಿಂದ ನಷ್ಟವಾದಲ್ಲಿ ಯಾವ ಬೆಳೆ ಎಷ್ಟು ನಷ್ಟ ಎಂದು ಅಂದಾಜಿಸಬಹುದು. ರಾಜ್ಯದಲ್ಲಿ ಯಾವ ಬೆಳೆಯ ಉತ್ಪಾದನೆ ಎಷ್ಟಿದೆ. ಯಾವ ಬೆಳೆಯ ಉತ್ಪಾದನೆ ಕಡಿಮೆ ಇದೆ. ಉತ್ಪಾದನೆ ಕಡಿಮೆಯಾದ್ದರಿಂದ ಬೆಲೆಯಲ್ಲಿ ಏರುಪೇರಾಗಲಿದೆಯೇ ? ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳಬಹುದು ಎಂದು ಅಂದಾಜಿಸಬಹುದು ಹಾಗೂ ಯಾವ ಬೆಳೆಗಳಿಗೆ ಬೆಂಬಲಿತ ಬೆಲೆ ನೀಡಬೇಕು ಎಂಬ ನಿರ್ಧಾರ ಕೈಗೊಳ್ಳಬಹುದು. ಬೆಳೆ ವಿಮೆಯಲ್ಲಿ ವಿಮಾ ಘಟಕದ ಖಚಿತವಾದ ವಿಸ್ತೀರ್ಣ ಲಭ್ಯವಾಗಲಿದೆ. ಸರ್ಕಾರದಿಂದ ನೀಡುವ ಸೌಲಭ್ಯಗಳಿಗೆ ಉಪಯೋಗ ಹಾಗೂ ಯಾವ ಬೆಳೆಗಳು ನಶಿಸುತ್ತಿವೆ ? ಯಾವ ಬೆಳೆಗಳು ಹೊಸದಾಗಿ ಬೆಳೆಯ ಲಾಗುತ್ತಿದೆ ಎಂದು ತಿಳಿದು ಕೊಳ್ಳಬಹುದು.
ಬೆಳೆ ಸಮೀಕ್ಷೆಯಿಂದ ರೈತರಿಗೆ ಪಹಣಿಯಲ್ಲಿ ಅವರ ಸರ್ವೆ ನಂಬರಿನಲ್ಲಿ ಯಾವ ಬೆಳೆ ಬೆಳೆದಿದೆಯೋ ಆ ಬೆಳೆಯ ಹೆಸರು ಮತ್ತು ವಿಸ್ತೀರ್ಣ ಸರಿಯಾಗಿ ದಾಖಲಾಗಲಿದೆ. ಪ್ರತಿ ಸರ್ವೆ ನಂಬರಿನಲ್ಲಿನ ಬೆಳೆಯ ವಿಸ್ತೀರ್ಣ ಲಭ್ಯವಿರುವದರಿಂದ ಸರ್ಕಾರದಿಂದ ಸೌಲಭ್ಯ ಪಡೆಯಲು ನೇರವಾಗಿ ಉಪಯೋಗಿಸುವದರಿಂದ ರೈತರು ಪುನಃ ಪಹಣಿಯಲ್ಲಿ ದಾಖಲಿಸುವ ಬಗ್ಗೆ ಕ್ರಮವಹಿಸುವ ಅಗತ್ಯವಿರುವದಿಲ್ಲ. ಬೆಳೆ ವಿಮೆಯಲ್ಲಿ ಆ ಬೆಳೆಯ ಸಮರ್ಪಕ ವಿಸ್ತೀರ್ಣ ಸಿಗುವದರಿಂದ ರೈತರಿಗೆ ವಿಮಾ ಪರಿಹಾರದಲ್ಲಿ ಕಡಿತ ಇರುವದಿಲ್ಲ. ಬೆಳೆಯು ನಷ್ಟವಾದಲ್ಲಿ ಅವರು ಬೆಳೆ ಬೆಳೆದ ವಿಸ್ತೀರ್ಣಕ್ಕೆ ಸರಿಯಾಗಿ ವಿಮೆ ಸಿಗುತ್ತದೆ. ಬೆಳೆಯ ವಿಸ್ತೀರ್ಣ ತಿಳಿಯುವದರಿಂದ ಉತ್ಪಾದನೆ ಬಗ್ಗೆ ಕೂಡ ತಿಳಿಯಬಹುದಾಗಿದ್ದು, ಬೆಲೆ ಏರಿಕೆ, ಇಳಿಕೆ ಬಗ್ಗೆ ತಿಳಿದು ಎಂ.ಎಸ್.ಪಿ.ಯನ್ನು ನಿರ್ಧರಿಸಿ ರೈತರಿಗೆ ಸಮರ್ಪಕವಾಗಿ ವಿತರಣೆಯನ್ನು ಮಾಡಬಹುದು.
ಕೊಡಗು ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಯನ್ನು ಹಳ್ಳಿಯಲ್ಲೇ ವಾಸಿಸುವ ಪಿ.ಯು.ಸಿ. ಅಥವಾ ಹೆಚ್ಚಿನ ವಿದ್ಯಾರ್ಹತೆಯುಳ್ಳ ಯುವ ಖಾಸಗಿ ನಿವಾಸಿಗಳು ಅಥವಾ ಸರ್ಕಾರಿ ಸಿಬ್ಬಂದಿಗಳಿಂದ ಕೈಗೊಳ್ಳಲಾಗುತ್ತದೆ. ಈಗಾಗಲೇ ಜಿಲ್ಲೆಯ ಪ್ರತಿ ಹಳ್ಳಿಗಳಿಗೆ ಖಾಸಗಿ ನಿವಾಸಿಗಳನ್ನು ಗುರುತಿಸಿ ಮೊಬೈಲ್ ಆ್ಯಪ್ ಬಳಕೆ ಮಾಡಿ ಬೆಳೆ ಸಮೀಕ್ಷೆ ನಡೆಸುವ ಬಗ್ಗೆ ತರಬೇತಿಯನ್ನು ನೀಡಲಾಗಿದೆ. ಬೆಳೆ ಸಮೀಕ್ಷೆದಾರರಾದ ಖಾಸಗಿ ನಿವಾಸಿ, ಸರ್ಕಾರಿ ಸಿಬ್ಬಂದಿಗಳಿಗೆ ರೈತರು ಸಹಕರಿಸಬೇಕು. ಹಳ್ಳಿಯಲ್ಲಿ ಬೆಳೆ ಸಮೀಕ್ಷೆಯನ್ನು ಕೈಗೊಳ್ಳುತ್ತಿರುವ ಸಮೀಕ್ಷೆದಾರರಿಗೆ ಸಹಕಾರ ನೀಡಬೇಕು. ಜಮೀನಿಗೆ ಬರುವಾಗ ಸರ್ವೆ ನಂಬರನ್ನು ಗುರುತಿಸುವಲ್ಲಿ ಮತ್ತು ಸರ್ವೆ ನಂಬರಿನಲ್ಲಿನ ಬೆಳೆಯ ವಿವರಗಳನ್ನು ಸರಿಯಾಗಿ ನೀಡಬೇಕು. ಸರ್ವೆ ನಂಬರಿನ ಫೋಟೋ ತೆಗೆದುಕೊಳ್ಳುವಾಗ ರೈತರು ನಿಂತಿರುವ ಫೋಟೋ ನೀಡಬೇಕು. ಮೊಬೈಲ್ ಸಂಖ್ಯೆ ಮತ್ತಿತರ ಮಾಹಿತಿ ನೀಡಬೇಕು.
ಈ ಬೆಳೆ ಸಮೀಕ್ಷೆಯು ಬೆಳೆಗಳ ಮಾಹಿತಿಯನ್ನು ಸರ್ಕಾರಿ ದಾಖಲೆಗಳಲ್ಲಿ ದಾಖಲಿಸುವ ಹಾಗೂ ಇದನ್ನು ವಿವಿಧ ರೈತ ಫಲಾನುಭವಿ ಯೋಜನೆಗಳಲ್ಲಿ ಬಳಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿದೆ. ಭೂ ದಾಖಲಾತಿ ಸಂಬಂಧಿತ ಇತರೆ ಎಲ್ಲಾ ವಿಷಯಗಳಿಗಾಗಿ ಹಿಂದಿನ ಕಾರ್ಯ ವಿಧಾನಗಳು ಮುಂದುವರೆಯಲಿವೆ. ಜಿಲ್ಲೆಯ ರೈತ ಬಾಂಧವರು ಬೆಳೆ ಸಮೀಕ್ಷೆಗಾಗಿ ಬರುವ ಖಾಸಗಿ ನಿವಾಸಿಗಳು ಅಥವಾ ಸರ್ಕಾರಿ ಸಿಬ್ಬಂದಿಗಳಿಗೆ ಸಮೀಕ್ಷೆಯ ಸಮಯದಲ್ಲಿ ರೈತರ ಮೊಬೈಲ್ ಸಂಖ್ಯೆ ಮತ್ತು ಇತರೆ ಮಾಹಿತಿಯನ್ನು ನೀಡಿ ಬೆಳೆ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಬೇಕಾಗಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.