ಮಡಿಕೇರಿ, ಸೆ. 30: ಅಕ್ಟೋಬರ್ 6 ರಿಂದ 18ರವರೆಗೆ ಅರ್ಜೆಂಟಿನಾ ರಾಷ್ಟ್ರದಲ್ಲಿ ಇದೇ ಪ್ರಪ್ರಥಮ ಬಾರಿಗೆ ನಡೆಯಲಿರುವ ‘ಫೈವ್ ಎ ಸೈಡ್’ ಹಾಕಿ ಯೂತ್ ಒಲಂಪಿಕ್ಸ್ ಪಂದ್ಯಾಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ಪುರುಷರ ತಂಡದ ಮುಖ್ಯ ಕೋಚ್ ಆಗಿ ಕೊಡಗಿನ ವೀರಾಜಪೇಟೆಯವರಾದ ಬೊಳ್ಳೆಪಂಡ ಜೆ. ಕಾರ್ಯಪ್ಪ ಅವರು ಆಯ್ಕೆಯಾಗಿದ್ದಾರೆ.ಹಾಕಿ ಇಂಡಿಯಾ ಪ್ರಕಟಿಸಿರುವ ತಂಡದ ಕೋಚ್ ಆಗಿ ಕಾರ್ಯಪ್ಪ ನಿಯುಕ್ತಿಗೊಂಡಿದ್ದು, ಮಹಿಳಾ ತಂಡದ ಕೋಚ್ ಆಗಿ ಮಾಜಿ ಆಟಗಾರ ಬಲ್ಜಿತ್‍ಸಿಂಗ್ ಸೈನಿ ನೇಮಕಗೊಂಡಿದ್ದಾರೆ. ಒಟ್ಟು 12 ರಾಷ್ಟ್ರಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ಕಾರ್ಯಪ್ಪ ಅವರು ಈ ಹಿಂದೆಯೂ ಹಲವಾರು ಪ್ರತಿಷ್ಟಿತ ಪಂದ್ಯಾವಳಿಗಳಲ್ಲಿ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹಾಕಿ ಕರ್ನಾಟಕ ಕಾರ್ಯದರ್ಶಿ ಮಾಜಿ ಅಂತರರಾಷ್ಟ್ರೀಯ ಆಟಗಾರ ಡಾ. ಅಂಜಪರವಂಡ ಸುಬ್ಬಯ್ಯ ತಿಳಿಸಿದ್ದಾರೆ.