ಮಡಿಕೇರಿ, ಸೆ. 30: ಭಾರತದ ರಾಷ್ಟ್ರಪತಿಗಳಾದ ರಾಂನಾಥ್ ಕೋವಿಂದ್ ಅವರ ಪುತ್ರ ಹಾಗೂ ಸೊಸೆ ಮತ್ತು ಮೊಮ್ಮಕ್ಕಳಿಬ್ಬರು ಕೊಡಗು ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದಾರೆ. ಇಂದು ಮಂಗಳೂರಿನಿಂದ ಸಂಪಾಜೆ ಮುಖಾಂತರ ಕೊಡಗಿಗೆ ಪ್ರವೇಶಿಸಿದ ಈ ಕುಟುಂಬವನ್ನು ಮಡಿಕೇರಿ ತಹಶೀಲ್ದಾರ್ ಕುಸುಮ, ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಜಗನ್ನಾಥ್ ಸಹಿತ ಇತರರು ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ.ಮಂಗಳೂರು ಹೆದ್ದಾರಿಯ ಜೋಡುಪಾಲ ಹಾಗೂ ಮದೆನಾಡು ವ್ಯಾಪ್ತಿಯ ಭೂಕುಸಿತದೊಂದಿಗೆ ಪ್ರಾಕೃತಿಕ ವಿಕೋಪದ ತೀವ್ರತೆ ಕಂಡು ರಾಷ್ಟ್ರಪತಿಗಳ ಪುತ್ರರಾದ ಪ್ರಶಾಂತ್ ಕುಮಾರ್ ಕೋವಿಂದ್, ಸೊಸೆ ಗೌರಿ ಆತಂಕ ವ್ಯಕ್ತಪಡಿಸಿದ್ದಾಗಿ ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. ಈ ದಂಪತಿಯೊಂದಿಗೆ ಮಕ್ಕಳಾದ ಅಭಿಮನ್ಯು ಹಾಗೂ ಅನನ್ಯ ಪ್ರವಾಸದಲ್ಲಿದ್ದು, ಸಿದ್ದಾಪುರದ ಖಾಸಗಿ ಕಾಫಿ ತೋಟದ ಬಂಗಲೆಯೊಂದರಲ್ಲಿ ತಂಗಿರುವರೆಂದು ಗೊತ್ತಾಗಿದೆ. ಈ ಕುಟುಂಬ ಅ. 2 ರ ತನಕ ಕೊಡಗು ಪ್ರವಾಸದೊಂದಿಗೆ ವಾಸ್ತವ್ಯ ಹೂಡಲಿದ್ದಾರೆ.