ಮಡಿಕೇರಿ, ಸೆ. 30: ವಿವಿಧೆಡೆಗಳಲ್ಲಿ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ತಿರುಗಾಡಲು ಅನುಕೂಲವಾಗುವಂತೆ ರಾಜ್ಯ ಸಾರಿಗೆ ಸಂಸ್ಥೆಯ ಉಚಿತ ಬಸ್ಪಾಸ್ ಸಹಿತ ಬೇಕು ಬೇಡಿಕೆಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಅಗತ್ಯ ಗಮನ ಹರಿಸುವಂತೆ ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದ್ದಾರೆ. ನಿನ್ನೆ ಇಲ್ಲಿಗೆ ಸಮೀಪದ ತಾಳತ್ಮನೆ ಹಾಗೂ ಸಂಪಾಜೆಯ ಸಂತ್ರಸ್ತರ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಕುಂದುಕೊರತೆ ಸರಿಪಡಿಸಲು ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಸಂಪಾಜೆಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ತಂಗಿರುವ ಸಂತ್ರಸ್ತರಿಗೆ ಸುಳ್ಯ ಹಾಗೂ ಮಡಿಕೇರಿ ನಡುವೆ ಸಂಚರಿಸಿ ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು, ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಬಸ್ ಪಾಸ್ ನೀಡುವಂತೆ ಶಾಸಕರ ಬಳಿ ಸಂತ್ರಸ್ತರು ಬೇಡಿಕೆ ಸಲ್ಲಿಸಿದರು. ಅಲ್ಲದೆ ಕುಟುಂಬಕ್ಕೆ ಒಂದರಂತೆ ನೀಡಿರುವ ಬಸ್ಪಾಸ್ನಿಂದ ಎಲ್ಲರಿಗೆ ಪ್ರಯಾಣಿಸಲು ಆಗುತ್ತಿಲ್ಲವೆಂದು ಅಳಲು ತೋಡಿಕೊಂಡರು.
ಆ ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವವರಿಗೆ ಬದಲಿ ವ್ಯವಸ್ಥೆ ಕಲ್ಪಿಸುವ ತನಕ ಉಚಿತ ಬಸ್ ಪಾಸ್ ನೀಡುವಂತೆ ಸೂಚಿಸುತ್ತಾ, ಈ ಬಗ್ಗೆ ಆಯಾ ಕೇಂದ್ರದ ನೋಡಲ್ ಅಧಿಕಾರಿಗಳು ಪಟ್ಟಿ ತಯಾರಿಸಿ ತಹಶೀಲ್ದಾರರಿಗೆ ಸಲ್ಲಿಸಲು ಹೇಳಿದರು.
ನೀರಿಗೆ ವ್ಯವಸ್ಥೆ : ಅಲ್ಲದೆ ಭೂಕುಸಿತದಿಂದ ಮನೆಗಳನ್ನು ತೊರೆದಿರುವ ಕುಟುಂಬಗಳು ಮರಳಿ ಗ್ರಾಮಗಳಿಗೆ ಹಿಂತಿರು ಗುತ್ತಿರುವೆಡೆಗಳಲ್ಲಿ, ಅವಶ್ಯಕತೆಗೆ ತಕ್ಕಂತೆ ಕುಡಿಯುವ ನೀರು ಕಲ್ಪಿಸಲು ಪೈಪ್ಗಳನ್ನು ಕೂಡ ಉಚಿತವಾಗಿ ಒದಗಿಸಲು ಜಿ.ಪಂ. ಅಧಿಕಾರಿಗಳಿಗೆ ಸಲಹೆ ನೀಡಿದರು. ತಾಳತ್ಮನೆ ಸರಕಾರಿ ಶಾಲೆಯಲ್ಲಿ ಆಸರೆ ಪಡೆದಿರುವ ಸಂತ್ರಸ್ತರ ಕುಟುಂಬಗಳಿಗೆ ಇದೇ ಸಂದರ್ಭ ನೀರಿನ ಪೈಪ್ಗಳನ್ನು ವಿತರಿಸಲಾಯಿತು.
ಅಂತೆಯೇ ಸಂಪಾಜೆಯಲ್ಲಿ ನೆಲೆಸಿರುವ 2ನೇ ಮೊಣ್ಣಂಗೇರಿ ಹಾಗೂ ಜೋಡುಪಾಲ ವ್ಯಾಪ್ತಿಯ ಸಂತ್ರಸ್ತರ ಕುಟುಂಬಗಳಿಗೂ ನೀರಿನ ಪೈಪ್ಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಆದಷ್ಟು ಬೇಗ ಪುನರ್ವಸತಿಯ ಭರವಸೆ ನೀಡಿದರು. ಉಭಯ ಕಡೆ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದ ಅವರು, ಸೂಕ್ತ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವದು ಎಂದರು.
ಜಾಗ ಪರಿಶೀಲನೆ : ಮದೆ ಗ್ರಾ.ಪಂ. ವ್ಯಾಪ್ತಿಯ ಗೋಳಿಬಾಣೆಯ ಸುಮಾರು 10 ಎಕರೆ ಜಾಗದಲ್ಲಿ 2 ಎಕರೆಯಷ್ಟು ಅಲ್ಲಿನ ಗ್ರಾಮಸ್ಥರ ಸಾಂಸ್ಕøತಿಕ ಚಟುವಟಿಕೆಗಳಿಗೆ ಕಲ್ಪಿಸಲು ಭರವಸೆಯೊಂದಿಗೆ, ಜನಪ್ರತಿನಿಧಿಗಳ ಅನುದಾನದಿಂದ ಸಮುದಾಯ ಭವನ ನಿರ್ಮಿಸಿಕೊಡಲಾಗುವದು ಎಂದು ನುಡಿದರು. ಈ ಜಾಗದಲ್ಲಿ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತದೊಂದಿಗೆ ಗ್ರಾಮಸ್ಥರು ಕೈ ಜೋಡಿಸಿ ಸಂತ್ರಸ್ತರಿಗೆ ಪುನರ್ವಸತಿಗಾಗಿ ಮನೆಗಳ ನಿರ್ಮಾಣಕ್ಕೆ ಸ್ಪಂದಿಸಲು ಸಲಹೆಯಿತ್ತರು.
ಶಾಸಕರೊಂದಿಗೆ ಕಂದಾಯ ಅಧಿಕಾರಿ ಸತೀಶ್, ಪ್ರಮುಖರಾದ ಹುದೇರಿ ರಾಜೇಂದ್ರ, ಬೆಪ್ಪುರನ ಮೇದಪ್ಪ, ಕಿಮ್ಮುಡಿ ಜಗದೀಶ್, ಕೊಲ್ಯದ ಬಸಪ್ಪ, ಸತೀಶ್, ಅರುಣ್, ಮದೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಸದಸ್ಯೆ ನಿತ್ಯಕುಮಾರಿ ಮೊದಲಾದವರಿದ್ದರು. ಅಲ್ಲದೆ ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ ಸಹಿತ ಆ ಭಾಗದ ಗ್ರಾಮಸ್ಥರು ಹಾಜರಿದ್ದು, ಸಂಪಾಜೆ ಶಾಲೆ ಬಳಿ ಸಂತ್ರಸ್ತರ ನಿವೇಶನಕ್ಕೆ ಕಾಯ್ದಿರಿಸಿರುವ ಜಾಗ ಪರಿಶೀಲಿಸಿದರು.