ಸೋಮವಾರಪೇಟೆ, ಸೆ. 30 : ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೆ ತರಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದಿಂದ ರಕ್ತದಾನ ಮಾಡುವ ಮೂಲಕ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದ್ದು, ಅ.3ರಂದು ಕುಶಾಲನಗರದಲ್ಲಿ ‘ರಕ್ತ ಕೊಟ್ಟೇವು-ಪಿಂಚಣಿ ಬಿಡೆವು’ ಹೋರಾಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ.ಎಂ. ಸತೀಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜನವರಿ 20ರಂದು ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆಯ ಫಲವಾಗಿ ಸರ್ಕಾರ ಎನ್‍ಪಿಎಸ್ ನೌಕರರಿಗೆ ಡಿಸಿಆರ್‍ಜಿ ಮತ್ತು ಕುಟುಂಬ ಪಿಂಚಣಿಯನ್ನು ಜಾರಿಗೆ ತಂದಿದೆ. ಆದರೆ ಆ ಯೋಜನೆಯೂ ಅವೈಜ್ಞಾನಿಕವಾಗಿದ್ದು, ನೌಕರರ ಹಿತಕ್ಕೆ ಪೂರಕವಾಗಿಲ್ಲ. ಈ ಹಿನ್ನೆಲೆ ಎನ್‍ಪಿಎಸ್ ಯೋಜನೆಯಿಂದ ಷರತ್ತು ರಹಿತವಾಗಿ ಹೊರತಂದು ನಿಶ್ಚಿತ ಪಿಂಚಣಿಯನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗಿದೆ ಎಂದರು.

ಅ.3ರಂದು ಪೂರ್ವಾಹ್ನ 10 ಗಂಟೆಗೆ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ರಕ್ತ ಕೊಟ್ಟೇವು-ಪಿಂಚಣಿ ಬಿಡೆವು’ ಎಂಬ ಧ್ಯೇಯದೊಂದಿಗೆ ಪ್ರತಿಭಟನಾರ್ಥವಾಗಿ ರಕ್ತದಾನ ಶಿಬಿರ ನಡೆಯಲಿದೆ. ಎಲ್ಲಾ ಇಲಾಖೆಗಳ ಎನ್‍ಪಿಎಸ್ ಹಾಗೂ ಓಪಿಎಸ್ ನೌಕರರು ಹಾಗೂ ಸಾರ್ವಜನಿಕರು ರಕ್ತದಾನ ಮಾಡುವ ಮೂಲಕ ಸರ್ಕಾರದ ಎದುರು ನಮ್ಮ ಬೇಡಿಕೆಗಳನ್ನು ಮಂಡಿಸಲಾಗುವದು ಎಂದು ಸತೀಶ್ ತಿಳಿಸಿದರು.

ರಕ್ತದಾನ ಕಾರ್ಯಕ್ರಮದಲ್ಲಿ ಶಾಸಕ ರಂಜನ್, ಎಂ.ಎಲ್.ಸಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಸೇರಿದಂತೆ ಸೋಮವಾರಪೇಟೆ, ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕಿನ ಎನ್‍ಪಿಎಸ್ ನೌಕರರು ಭಾಗವಹಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕೆ.ಆರ್. ನವೀನ್‍ಕುಮಾರ್, ಉಪಾಧ್ಯಕ್ಷ ಮಹಾದೇವಮೂರ್ತಿ, ನಿರ್ದೇಶಕರುಗಳಾದ ಪ್ರದೀಪ್, ಗೋಪಿನಾಥ್ ಉಪಸ್ಥಿತರಿದ್ದರು.