ಕುಶಾಲನಗರ, ಸೆ. 30: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪಡಿತರ ಚೀಟಿ, ದಾಖಲೆಗಳನ್ನು ವಿತರಿಸುವ ಸಂದರ್ಭ ಆಹಾರ ಸರಬರಾಜು ಇಲಾಖೆ ಅಧಿಕಾರಿ ಯೊಬ್ಬರು ಹಣದ ಬೇಡಿಕೆ ಇಡುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಕುಶಾಲನಗರದ ಸರಕಾರಿ ಬಸ್ ನಿಲ್ದಾಣ ಮುಂಭಾಗ ಕಟ್ಟಡವೊಂದರಲ್ಲಿ ಇಲಾಖೆ ಅಧಿಕಾರಿ ರಾಜಣ್ಣ ಈ ಸಂಬಂಧ ಕೆಲವು ಸಹಾಯಕರೊಂದಿಗೆ ಭಾನುವಾರ ಕೆಲಸ ನಿರ್ವಹಿಸುತ್ತಿರುವದರೊಂದಿಗೆ ಈ ಸಂದರ್ಭ ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ದಾಖಲಾತಿಗಳಿಗಾಗಿ ಅಲ್ಲಿ ಪರದಾಡುತ್ತಿದ್ದ ದೃಶ್ಯ ಕಂಡುಬಂತು.

ಅಧಿಕಾರಿ ಮತ್ತು ಸಿಬ್ಬಂದಿ ಲ್ಯಾಪ್‍ಟಾಪ್ ಮತ್ತಿತರ ಸಾಮಗ್ರಿಗಳೊಂದಿಗೆ ದಾಖಲೆಗಳನ್ನು ಸಿದ್ಧಪಡಿಸಿ ಗ್ರಾಹಕರಿಗೆ ನೀಡುವ ಸಂದರ್ಭ ಹಣಕ್ಕೆ ಬೇಡಿಕೆ ಇಡುತ್ತಿರುವದಾಗಿ ಸಾರ್ವಜನಿಕರ ಆರೋಪ ಕೇಳಿಬಂತು.

ಈ ಸಂದರ್ಭ ಸ್ಥಳಕ್ಕೆ ಮಾಧ್ಯಮ ಸದಸ್ಯರು ತೆರಳಿದಾಗ, ಅಧಿಕಾರಿಯ ಸಹಾಯಕನೊಬ್ಬ ಸ್ಥಳದಿಂದ ಪರಾರಿಯಾದ ದೃಶ್ಯವೂ ಗೋಚರಿಸಿತು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿರುವದಾಗಿ ಸಂತೋಷ್ ಎಂಬವರು ತಿಳಿಸಿದ್ದಾರೆ.

ಅಧಿಕಾರಿ ರಾಜಣ್ಣ ತಾನು ಪಡಿತರ ಚೀಟಿಗೆ ಸಂಬಂಧಿಸಿದ ಸೀಮೆಎಣ್ಣೆ ಸರಬರಾಜು ಹಿನ್ನೆಲೆಯಲ್ಲಿ ಬಂದಿರುವದಾಗಿ ಪ್ರತಿಕ್ರಿಯಿಸಿದ್ದಾರೆ.