ಸೋಮವಾರಪೇಟೆ, ಸೆ.30: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಕಾರಿನಿಂದ ಡಿಕ್ಕಿಪಡಿಸಿ, ನಂತರ ಜೀಪ್ ಹತ್ತಿಸಲು ಪ್ರಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ, ಅಪರಿಚಿತರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಕ್ರವರ್ತಿ ಬಸ್ ಮಾಲೀಕ ಕೆ.ಬಿ. ಸುರೇಶ್ ಅವರು ನಿನ್ನೆ ಸಂಜೆ ಮಡಿಕೇರಿ ರಸ್ತೆಯ ಪೆಟ್ರೋಲ್ ಬಂಕ್ ಬಳಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ, ಎದುರಿನಿಂದ ಆಗಮಿಸಿದ ಕಾರು ಡಿಕ್ಕಿಪಡಿಸಿದ್ದು, ಸುರೇಶ್ ಅವರು ಕೆಳ ಬಿದ್ದಿದ್ದಾರೆ. ಈ ಸಂದರ್ಭ ಮತ್ತೊಂದು ಜೀಪ್ನಲ್ಲಿದ್ದ ಚಾಲಕನೋರ್ವ ನಾಲ್ಕೈದು ಬಾರಿ ಸುರೇಶ್ ಅವರ ಮೇಲೆ ಜೀಪ್ ಹತ್ತಿಸಲು ಯತ್ನಿಸಿದ್ದು, ಪ್ರಯತ್ನ ವಿಫಲವಾದ ಹಿನ್ನೆಲೆ ಜೀಪ್ನಿಂದ ಕೆಳಗಿಳಿದು ಹಲ್ಲೆ ನಡೆಸಿದ್ದಾರೆ ಎಂದು ಸುರೇಶ್ ಅವರು ದೂರು ನೀಡಿದ್ದಾರೆ.
ಡಿಕ್ಕಿಪಡಿಸಿದ ಕಾರನ್ನು ಶನಿವಾರಸಂತೆ ಬಳಿ ಪೊಲೀಸರು ವಶಕ್ಕೆ ಪಡೆದಿದ್ದು, ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಅಪರಿಚಿತರ ವಿರುದ್ಧ ದೂರು ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.