*ಸಿದ್ದಾಪುರ, ಸೆ. 30: ಕೊಳೆತ ತ್ಯಾಜ್ಯಗಳನ್ನು ಪಟ್ಟಣದ ರಸ್ತೆ ಬದಿ ಮತ್ತು ಜನವಸತಿ ಪ್ರದೇಶಗಳತ್ತ ರಾತ್ರಿ ವೇಳೆ ಗೌಪ್ಯವಾಗಿ ಎಸೆದು ಪರಾರಿಯಾಗುತ್ತಿದ್ದ ಪಟ್ಟಣದ ಕೋಳಿ ವ್ಯಾಪಾರಿಯನ್ನು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಪಾಲಿಬೆಟ್ಟ ರಸ್ತೆಯಲ್ಲಿ ತ್ಯಾಜ್ಯ ಸುರಿಯುತ್ತಿದ್ದ ವೇಳೆಯಲ್ಲಿ ಹಿಡಿದು ಬಳಿಕ ಕೋಳಿ ತ್ಯಾಜ್ಯವನ್ನು ಮರಳಿ ಕೋಳಿ ಅಂಗಡಿ ಮುಂದೆ ಸುರಿದು ಬುದ್ಧಿ ಹೇಳಿರುವ ಪ್ರಕರಣ ನಡೆದಿದೆ.

ಮಡಿಕೇರಿ ರಸ್ತೆಯಲ್ಲಿ ಕೋಳಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ಮಾರ್ಕೆಟ್ ನಿವಾಸಿ ರವಿ ಎಂಬವರ ಮಗ ಆರ್.ಸುಬ್ರಮಣಿ ಎಂಬವರ ಸಹೋದರ ಮತ್ತು ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಯುವಕನೋರ್ವ ಪಾಲಿಬೆಟ್ಟ ರಸ್ತೆಯಲ್ಲಿ ಕೊಳೆತ ತ್ಯಾಜ್ಯಗಳನ್ನು ಸುರಿಯುವ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ಹುಸೈನ್ ಎಂಬುವವರ ಕೈಗೆ ಸಿಕ್ಕಿಬಿದ್ದರು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕೆ.ಮಣಿ ಸದಸ್ಯರಾದ ಟಿ.ಹೆಚ್.ಮಂಜುನಾಥ್, ಜಾಫರ್ ಆಲಿ ಹಾಗೂ ಇತರರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸದಸ್ಯ ಹುಸೈನ್ ನಿತ್ಯ ತನ್ನ ವಾರ್ಡ್‍ನಲ್ಲಿ ಪಟ್ಟಣದ ಕೋಳಿ ವ್ಯಾಪಾರಿಗಳು ಮತ್ತು ಇತರೆ ಮಾಂಸ ವ್ಯಾಪಾರಿಗಳು ತ್ಯಾಜ್ಯವನ್ನು ರಾತ್ರಿ ವೇಳೆ ಸುರಿದು ಓಡಿಹೋಗುತ್ತಿದ್ದು ಈ ಹಿಂದೆ ಕೂಡ ಇಂತಹ ಪ್ರಕರಣ ಪತ್ತೆ ಹಚ್ಚಿ ತ್ಯಾಜ್ಯವನ್ನು ಮರಳಿ ಸಂಬಂಧಿಸಿದವರ ಅಂಗಡಿ ಮುಂದೆ ಸುರಿದಿರುವದಾಗಿ ಪತ್ರಕರ್ತರ ಬಳಿ ತಿಳಿಸಿದರು. ಗ್ರಾಮದ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ತ್ಯಾಜ್ಯವನ್ನು ಸುರಿಯುವವರ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದ್ದುದಾಗಿ ತಿಳಿಸಿದ್ದಾರೆ.

ಕೋಳಿ ಮಾರಾಟಕ್ಕೆ ತಮ್ಮ ಮಳಿಗೆಗಳನ್ನು ವ್ಯಾಪಾರಿಗಳಿಗೆ ಬಾಡಿಗೆಗೆ ನೀಡುವ ಮಾಲೀಕರು ತಿಂಗಳಿಗೆ ಬಾಡಿಗೆ ಮಾತ್ರ ಎಣಿಸದೇ ಪಟ್ಟಣ ವಾಸಿಗಳ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಬಗ್ಗೆಯೂ ಕೊಂಚ ಕಳಕಳಿ ಹೊಂದಬೇಕಿದೆ ಎಂದು ಗ್ರಾಮಸ್ಥರು, ವಿವಿಧ ಸಂಘಟನೆಗಳು, ಪರಿಸರವಾದಿಗಳು, ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ. ಪ್ರತಿಯೊಬ್ಬರೂ ರಾಜಕೀಯ ರಹಿತವಾಗಿ ಗ್ರಾಮದ ನೈರ್ಮಲ್ಯಕ್ಕೆ ಆಧ್ಯತೆ ನೀಡಬೇಕು ಎಂದು ಪಂಚಾಯತ್ ಸದಸ್ಯ ಟಿ.ಹೆಚ್. ಮಂಜುನಾಥ್ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮುಖಂಡ ಎಂ.ಹೆಚ್.ಮೂಸಾ ಮನವಿ ಮಾಡಿದ್ದಾರೆ.

ಗ್ರಾಮ ಪಂಚಾಯತ್ ಆಡಳಿತ ಲಕ್ಷಾಂತರ ರೂಪಾಯಿ ವ್ಯಯಿಸಿ ಮಾರ್ಕೆಟ್ ಪ್ರದೇಶದಲ್ಲಿ ಸುಸಜ್ಜಿತವಾದ ವ್ಯಾಪಾರಿ ಮಳಿಗೆ ಮತ್ತು ಕಸಾಯಿಖಾನೆ ನಿರ್ಮಿಸಿಕೊಟ್ಟರೂ ವ್ಯಾಪಾರಿಗಳು ಅಲ್ಲಿಗೆ ತೆರಳದೇ ಪಟ್ಟಣ ಪ್ರದೇಶವನ್ನು ಗಬ್ಬೆಬ್ಬಿಸುತ್ತಿರುವದರ ಬಗ್ಗೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೆಲವು ಕೋಳಿ, ಮೀನು ಮತ್ತು ಮಾಂಸ ವ್ಯಾಪಾರಿಗಳು ನಾವು ಹಣ ನೀಡಿ ವ್ಯಾಪಾರ ಮಾಡಲು ಪರವಾನಗಿ ಪಡೆದಿದ್ದೇವೆ ಆದರೆ ತ್ಯಾಜ್ಯ ವಿಲೇವಾರಿಗೆ ಗ್ರಾಮಾಡಳಿತ ಸೂಕ್ತ ಜಾಗ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಆದರೆ ಗ್ರಾಮಸ್ಥರು ಸೂಕ್ತ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಕಲ್ಪಿಸಿದ ಬಳಿಕವೇ ಪರವಾನಗಿಯನ್ನು ನೀಡಲಿ ಎಂದು ಒತ್ತಾಯಿಸಿದ್ದಾರೆ.

ಪರಿಸರವನ್ನು ಕಲುಷಿತಗೊಳಿಸುತ್ತಿರುವವರ ಮೇಲೆ ಪೊಲೀಸರು “ಸುಮೋಟೋ” ದೂರು ದಾಖಲಿಸಿಕೊಂಡು ಗ್ರಾಮವನ್ನು ಕೊಳಚೆ ಮುಕ್ತ ಹಾಗೂ ಸಾಂಕ್ರಾಮಿಕ ರೋಗ ಮುಕ್ತ ಗೊಳಿಸಬೇಕೆಂದು ಸಿದ್ದಾಪುರದ ಸರ್ವ ರಾಜಕೀಯ ಪಕ್ಷಗಳ ಪ್ರಮುಖರು, ಸಂಘಟನೆಗಳು ಒತ್ತಾಯಿಸಿದೆ.

-ಅಂಚೆಮನೆ ಸುಧಿ