ಮಡಿಕೇರಿ, ಸೆ. 30: ಕೊಡಗಿನ ಜನತೆ ಪರಂಪರಾಗತವಾಗಿ ನಂಬಿಕೊಂಡು ಬಂದಿರುವ ದೇವಾನು ದೇವತೆಗಳ ನೆಲೆಯು, ಈ ಪ್ರಕೃತಿ ಜಿಲ್ಲೆಯ ಬೆಟ್ಟ ಸಾಲುಗಳ ನಡುವೆ; ಕಾಡು ಮೇಡುಗಳ ಅಂಚಿನ ಅಡವಿಗಳಲ್ಲಿ ಸಹಸ್ರಮಾನಗಳಿಂದಲೂ ಆರಾಧನೆಗೊಳ್ಳುತ್ತಾ ಬಂದಿವೆ.ಕೊಡಗಿನ ಜನತೆಯ ಕುಲಮಾತೆ ತಲಕಾವೇರಿ ಕ್ಷೇತ್ರ ಇರುವದು ವಿಪರೀತ ಮಳೆಯಾಗುವ ಬ್ರಹ್ಮಗಿರಿ ಪ್ರದೇಶವಾಗಿದೆ. ಅಂತೆಯೇ ಕೊಡಗಿನ ಮಳೆ-ಬೆಳೆಗೆ ಆದಿದೇವ ಎಂಬ ಶ್ರದ್ಧೆಯ ತಾಣವಿರುವದು ಕಕ್ಕಬೆ ಸನಿಹದ ಪಾಡಿ ಕ್ಷೇತ್ರ ಶ್ರೀ ಇಗ್ಗುತ್ತಪ್ಪ ದೇವರ ಆದಿನೆಲೆಯೂ ಮಲ್ಮಬೆಟ್ಟ ಶ್ರೇಣಿಯ ಕಡಿದಾದ ಪ್ರದೇಶವಾಗಿದೆ.ಉತ್ತರ ಕೊಡಗಿನ ಗಡಿಯೊಂದಿಗೆ ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳನ್ನು ಬೆಸೆದುಕೊಂಡಿರುವ ಪ್ರಾಕೃತಿಕ ಸಿರಿ ಸಂಪನ್ನ ದೇವನೆಲೆ ಪುಷ್ಪಗಿರಿ. ಇಲ್ಲಿಯೂ ಶ್ರೀ ಶಾಂತಮಲ್ಲಿಕಾರ್ಜುನನ ಆವಾಸ ಸ್ಥಾನವಿದೆ. ಅದೇ ಪುಷ್ಪಗಿರಿ ಶ್ರೇಣಿಯಿಂದ ದೃಷ್ಟಿ ಹರಿಸಿದರೆ ನಮಗೆ ಗೋಚರಿಸುವದು ಕೋಟೆಬೆಟ್ಟ. ಈ ಕೋಟೆ ಬೆಟ್ಟಕ್ಕೆ ದ್ವಾಪರಯುಗದ ಇತಿಹಾಸದೊಂದಿಗೆ ಪಾಂಡವರು ಅಜ್ಞಾತವಾಸದಲ್ಲಿ ನೆಲೆಸಿರುವ ಚರಿತ್ರೆಯ ಉಲ್ಲೇಖವಿದೆ. ಇನ್ನೊಂದೆಡೆ ತ್ರೇತಾಯುಗದ ಐತಿಹ್ಯದೊಂದಿಗೆ ದಕ್ಷಿಣ ಕೊಡಗಿನ ಇರ್ಪು ರಾಮೇಶ್ವರ ಕ್ಷೇತ್ರವು ಗೋಚರಿಸುತ್ತದೆ.

ಇಂತಹ ಎಲ್ಲ ಗಿರಿ ಶಿಖರಗಳ ನಡುವೆ ಆಯಾ ದೇವ ಸನ್ನಿದಿಗೆ ಸಂಬಂಧಿಸಿದ ಪವಿತ್ರ ತೀರ್ಥಕೊಳಗಳಿವೆ ಅಷ್ಟು ಮಾತ್ರವಲ್ಲದೆ ಜಿಲ್ಲೆಯಲ್ಲಿ ಆಡಳಿತಾತ್ಮಕ ವ್ಯವಸ್ಥೆಯಡಿ ಮೂರು ತಾಲೂಕುಗಳು, 16 ಹೋಬಳಿ ಕೇಂದ್ರಗಳು, ಒಂದುನೂರ ನಾಲ್ಕು ಗ್ರಾಮ ಪಂಚಾಯಿತಿಗಳೊಂದಿಗೆ ಒಂದು ನಗರಸಭೆ ಮತ್ತು ಮೂರು ಪಟ್ಟಣ ಪಂಚಾಯಿತಿಗಳು ಇವೆ.

ಈ ಎಲ್ಲೆಡೆ ನೂರಾರು ಸಂಖ್ಯೆಯಲ್ಲಿ ಗ್ರಾಮ ದೇವಾಲಯಗಳಿವೆ. ಹಲವಷ್ಟು ಕಡೆಗಳಲ್ಲಿ ಚರ್ಚ್, ಮಸೀದಿಗಳಿವೆ. ಆಯಾ ಜನಾಂಗದವರು ತಮ್ಮ ತಮ್ಮ ಪದ್ಧತಿಗಳಂತೆ ಪ್ರಾರ್ಥನೆ, ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.

ಇಂತಹ ಕಾಲಘಟ್ಟದಲ್ಲೇ ಕೊಡಗಿನ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ಮಳೆಗಾಲವನ್ನು ಈ ಸಾಲಿನಲ್ಲಿ ಅನುಭವಿಸುವಂತಾಯಿತು.

ಹಾಗಿದ್ದರೂ ಪ್ರಸಕ್ತ ಎಲ್ಲಿಯೂ ಯಾವದೇ ದೇವನೆಲೆಗಳಿಗೆ ಭಂಗ ಉಂಟಾಗಿಲ್ಲ ಎಂಬ ಸಮಾಧಾನ ಜನತೆಯದಾಗಿದೆ. ಪ್ರಸಕ್ತ ಸಂಭವಿಸಿರುವ ಭೂಕುಸಿತ, ಜಲಸ್ಫೋಟ, ಮನೆಗಳ ಕುಸಿತ, ಹೆದ್ದಾರಿ ಕುಸಿತದಿಂದ ಸಂಚಾರಕ್ಕೆ ತೊಡಕು ಎದುರಾಗಿ ಅನೇಕ ಸಾವು-ನೋವು ಸಂಭವಿಸಿದ್ದರೂ, ಎಲ್ಲೂ ಪ್ರಾರ್ಥನಾ ಸ್ಥಳಗಳು ಮಾತ್ರ ನೆಲಸಮವಾಗಿಲ್ಲ ಎನ್ನುವ ವಿಶೇಷ ಅನುಭವ ಆಸ್ತಿಕರ ಭಾವನೆಗಳನ್ನು ಗಟ್ಟಿಗೊಳಿಸಿದ್ದರೆ, ನಾಸ್ತಿಕರ ಹುಬ್ಬೇರಿಸಿದೆ.

ಕಾರಣಗಳು ಅನೇಕ: ಜನತೆಯ ಈ ಉದ್ಗಾರಕ್ಕೆ ಅನೇಕ ಕಾರಣಗಳೊಂದಿಗೆ ಬಲವಾದ ಭಗವದ್ ಭಕ್ತಿ ಮುಖ್ಯವೆನಿಸಿದೆ. ಮಳೆಯ ತೀವ್ರತೆ ನಡುವೆ ಕೋಟೆ ಬೆಟ್ಟ ಕುಸಿಯುತ್ತಿರುವ ಅಪಪ್ರಚಾರ ನಡೆಯಿತು. ಬದಲಾಗಿ ಈ ಬೆಟ್ಟದ ತುತ್ತ ತುದಿಯಲ್ಲಿರುವ ಕೆರೆಗಳ ಸಹಿತ ಶ್ರೀ ಬೊಟ್ಲಪ್ಪ ದೇವರ ಗುಡಿ (ಶಿವಶಕ್ತಿ) ಕಿಂಚಿತ್ತೂ ತೊಂದರೆಯಾಗದೆ ನೆಲೆಗೊಂಡಿರುವ ದೃಶ್ಯ ಗೋಚರಿಸುತ್ತಿದೆ.

ಉತ್ತರದ ಪುಷ್ಪಗಿರಿಯಿಂದ ದಕ್ಷಿಣ ತುದಿಯ ಬ್ರಹ್ಮಗಿರಿ ತನಕ ಸಹಸ್ರಮಾನಗಳಿಂದ ಹರಿಯುತ್ತಿರುವ ನದಿ, ತೊರೆಗಳು, ದೇವನೆಲೆಗಳು ಎಲ್ಲೆಡೆಯೂ ಯಥಾ ಸ್ಥಿತಿಯಲ್ಲಿವೆ. ಮಾತ್ರವಲ್ಲದೆ ಸಂಪಾಜೆ ಗಡಿಯ ಬೆಟ್ಟ ಶ್ರೇಣಿಯ ಅರೆಕಲ್ಲು ಅಯ್ಯಪ್ಪ, ಕೊಯನಾಡು ಗಣಪತಿ, ಪಂಚಲಿಂಗೇಶ್ವರ ದೇಗುಲಗಳ ಸಹಿತ ಬೆಟ್ಟತ್ತೂರು ಶಿವಾಲಯ, ಗಾಳಿಬೀಡು ಭದ್ರಕಾಳಿ, ಕಾಲೂರು ಭದ್ರಕಾಳಿ, ಅಯ್ಯಪ್ಪ, ಮಕ್ಕಂದೂರು ಭದ್ರಕಾಳಿ, ಹಾಲೇರಿ ಭದ್ರಕಾಳಿ, ಇಬ್ಬನಿ ಭದ್ರಕಾಳಿ, ಕೆದಕಲ್ ಭದ್ರಕಾಳಿ, ಮೂವತ್ತೊಕ್ಲು ಭದ್ರಕಾಳಿ, ಸೂರ್ಲಬ್ಬಿ ಭದ್ರಕಾಳಿ, ಕಾಟಕೇರಿ ಅಪ್ಪಂಗೇರಿಯಪ್ಪ ಸಹಿತ ಕೊಡಗಿನಲ್ಲಿ ವಿಭಿನ್ನ ಹೆಸರುಗಳಿಂದ ಪೂಜೆಗೊಳ್ಳುತ್ತಿರುವ ದೇವನೆಲೆಗಳು, ಪ್ರಾರ್ಥನಾ ಮಂದಿರಗಳು ಯಾವ ರೀತಿಯಲ್ಲೂ ತೊಂದರೆಯಿಲ್ಲದೆ ಸುರಕ್ಷಿತಗೊಂಡಿವೆ.

ಮಾತ್ರವಲ್ಲದೆ ವಿಪರೀತ ಭೂಕುಸಿತದಿಂದ ಹಾನಿಗೊಂಡಿರುವ ಪ್ರದೇಶಗಳಾದ ಹಾರಂಗಿ ಜಲಾಶಯ ತಟದಿಂದ ಶಾಂತಳ್ಳಿ ಆದಿಯಾಗಿ ಸಂಪಾಜೆವರೆಗಿನ ಅಪಾರ ಹಾನಿಗೊಂಡಿರುವ ಪ್ರದೇಶಗಳಲ್ಲಿಯೂ ದೇವನೆಲೆಗಳಿವೆ. ಧಕ್ಕೆ ಉಂಟಾಗದಿರುವದು ಭಗವಂತನ ಲೀಲೆಯೆಂದೇ ಆ ಭಾಗದ ಜನತೆಯ ಬಲವಾದ ನಂಬಿಕೆಯಾಗಿದೆ. ಅನೇಕ ಕಡೆಗಳಲ್ಲಿ ಇಂತಹ ದೇವನೆಲೆಗಳ ಎದುರು ಅಥವಾ ಹಿಂಬದಿಯ ಸಹಿತ ಇಕ್ಕಡೆಗಳಲ್ಲಿ ಭೂಕುಸಿತದ ಭಯಾನಕ ದೃಶ್ಯಗಳು ಕಣ್ಣು ಕಟ್ಟುತ್ತಿದ್ದರೂ ಯಾವೊಂದು ದೇವನೆಲೆಯೂ ಅಲುಗಾಡಿಲ್ಲ ಎಂದರೆ ಅದು ದೈವ ಪವಾಡವೇ ಸರಿ ಎನ್ನಲಾಗುತ್ತಿದೆ.

ಮಕ್ಕಂದೂರು: ಆಗಸ್ಟ್ 16ರ ದುರಂತದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವೆಂದರೆ ಮಕ್ಕಂದೂರು ಗ್ರಾಮ ಪಂಚಾಯಿತಿ ಈ ವ್ಯಾಪ್ತಿಗೊಳಪಡುವ ಮಕ್ಕಂದೂರು, ಹೆಮ್ಮೆತ್ತಾಳು ಹಾಗೂ ಮುಕ್ಕೋಡ್ಲು ಗ್ರಾಮಗಳಲ್ಲಿಯೂ ದೇವಾಲಯಗಳಿದ್ದು, ದೇಗುಲಗಳ ಸನಿಹದಿಂದಲೇ ಭೂಕುಸಿತಗೊಂಡಿದ್ದರೂ ದೇವನೆಲೆಗಳಿಗೆ ಯಾವದೇ ಹಾನಿಯಾಗದಿರುವದು ದೈವೀಶಕ್ತಿಯನ್ನು ತೋರ್ಪಡಿಸುತ್ತದೆ.

ಮಕ್ಕಂದೂರುವಿನಲ್ಲಿ ಮುಖ್ಯ ರಸ್ತೆ ಬಳಿಯಲ್ಲಿಯೇ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಭದ್ರಕಾಳೇಶ್ವರಿ ದೇವಾಲಯವಿದೆ. ಪುರಾತನ ಕಾಲದ ದೇವಾಲಯವಾದರೂ ದೇವಾಲಯ ಸಮಿತಿ ವತಿಯಿಂದ ಜೀರ್ಣೋದ್ಧಾರಗೊಂಡು ಉತ್ತಮ ಸ್ಥಿತಿಯಲ್ಲಿದೆ. ದೇವಾಲಯದ ಹಿಂಭಾಗದಲ್ಲಿ ಕೆಲವು ಮನೆಗಳಿಗೆ ತೆರಳಲು ಸಣ್ಣ ರಸ್ತೆಯೊಂದಿದೆ. ರಸ್ತೆಯಿಂದ ಅತಿ ಸನಿಹದಿಂದಲೇ ಭಾರೀ ಪ್ರಮಾಣದಲ್ಲಿ ತೋಟ, ಮನೆ, ಗದ್ದೆ ಸಹಿತ ಕೊಚ್ಚಿಕೊಂಡು ಹೋಗಿದೆ. ಆದರೆ ದೇವಾಲಯಕ್ಕೆ ಏನೂ ಆಗಿಲ್ಲ.

(ಮೊದಲ ಪುಟದಿಂದ)

ಹೆಮ್ಮೆತ್ತಾಳು: ಪ್ರಕೃತಿ ವಿಕೋಪದಲ್ಲಿ ತಾಯಿ-ಮಗ ಜೀವಂತ ಸಮಾಧಿಯಾಗುವದರೊಂದಿಗೆ ಭೀಕರ ದುರಂತ ಸಂಭವಿಸಿದ ಸ್ಥಳ ಹೆಮ್ಮೆತ್ತಾಳು ಇದೇ ಪ್ರದೇಶದಲ್ಲಿ ತಾ. 16ರ ರಾತ್ರಿ ಮತ್ತೊಂದು ಕಡೆ ಭಾರೀ ಭೂಕುಸಿತ ಉಂಟಾಗಿದೆ. ಈ ಭೂಕುಸಿತ ಸಂಭವಿಸಿದ ಸ್ಥಳ ಕೂಡ ದೇವಾಲಯದ ಸಮೀಪದಲ್ಲೇ ಪುರಾಣ ಪ್ರಸಿದ್ಧಿ ಹೊಂದಿರುವ ರಾಜರ ಕಾಲದ ಬೇಟೆ ಅಯ್ಯಪ್ಪ ದೇವಸ್ಥಾನ ಇರುವ ಆದಂ ಎಸ್ಟೇಟ್‍ನ ಭೂಕುಸಿತಕ್ಕೆ 10 ಮನೆಗಳು ಒಂದೇ ಕಡೆಯಲ್ಲಿ ನಾಶವಾಗಿವೆ. ದೇವಾಲಯದ ಸಮೀಪದಿಂದಲೇ ಭೂಕುಸಿದಿದ್ದು, ಇದೀಗ ನೋಡುವಾಗ ಅಪಾಯದಂಚಿನಲ್ಲಿದ್ದರೂ ಹಾಗೇ ಉಳಿದುಕೊಂಡಿದೆ. ಬೇಟೆ ಅಯ್ಯಪ್ಪನ ಬಳಿಯಲ್ಲೇ ನಾಗಪ್ಪನ ಗುಡಿಯೂ ಊರನ್ನು ಕಾಯುತ್ತಿದೆ.

ಇನ್ನು ಸ್ವಲ್ಪ ಕೆಳಭಾಗದಲ್ಲಿ ಹೆಮ್ಮೆತ್ತಾಳು ಗ್ರಾಮ ದೇವತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯ ಗುಡಿಯಿದೆ. ಗುಡಿ ಗುಡ್ಡದ ತುದಿಯಲ್ಲಿದ್ದು, ಕೆಳಭಾಗವನ್ನು ಇಣುಕಿ ನೋಡಿದರೆ ಭಯವಾಗುವಂತಿದೆ. ಇತ್ತ ಗುಡಿಯ ಅನತಿ ದೂರದಲ್ಲಿಯೇ ಭಾರೀ ಗಾತ್ರದ ಮರಗಳು, ಬಂಡೆಗಳೊಂದಿಗೆ ಭೂಕುಸಿತ ಉಂಟಾಗಿದೆ. ಆದರೆ ಚಾಮುಂಡೇಶ್ವರಿ ಜೊತೆಗೆ ಗುಳಿಗಪ್ಪ, ನಾಗದೇವರು ಹಾಗೇ ಉಳಿದುಕೊಂಡಿದ್ದಾರೆ. ಮೊದಲ ದುರಂತದಲ್ಲಿ ಭೂಕುಸಿತದೊಂದಿಗೆ ಜಾರಿ ಹೋದ ಮನೆಯೊಳಗೆ ಸಿಲುಕಿ, ರಕ್ಷಿಸಲ್ಪಟ್ಟ ಎಂ.ಕೆ. ಗೋಪಾಲ (ಚಂದು) ಅವರು ಈ ದೇವಾಲಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಮನೆಯಿಂದ ರಕ್ಷಿಸಲ್ಪಟ್ಟ ಬಳಿಕ ಆಸ್ಪತ್ರೆಯಲ್ಲಿದ್ದ ಅವರನ್ನು ಗ್ರಾಮಸ್ಥರು ವಿಚಾರಿಸಲು ತೆರಳಿದ್ದ ಸಂದರ್ಭ ಅವರು ಕೇಳಿದ ಮೊಟ್ಟ ಮೊದಲ ಪ್ರಶ್ನೆ ಎಂದರೆ, ‘ದೇವಾಲಯ ಇದೆಯಾ... ಏನೂ ಆಗಿಲ್ಲ ತಾನೇ?’ ಎಂದು ದೇವಿಗೆ ಶಕ್ತಿ ಇದೆ ಎಂಬದಕ್ಕೆ ಇದೇ ಸಾಕ್ಷಿ. ಇದೀಗ ಊರಿನಲ್ಲಿ ದೇವರಿದ್ದರೂ ಮನುಷ್ಯರಾರೂ ಇಲ್ಲ.

ಇತ್ತ ಗ್ರಾಮದ ಶ್ರೀ ಮಹಾಗಣಪತಿ ಯುವಕ ಸಂಘದವರು ಗೌರಿ ಗಣೇಶ ಉತ್ಸವ ಸಂದರ್ಭ ಉತ್ಸವ ಮೂರ್ತಿ ಪ್ರತಿಷ್ಠಾಪನೆಗೆಂದು ಜಾಗ ಸಮತಟ್ಟು ಮಾಡಿ, ಅಲ್ಲೊಂದು ಶೆಡ್ ನಿರ್ಮಿಸಿ ಉತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಜಾಗ ಕೂಡ ಗುಡ್ಡದ ಬದಿಯಲ್ಲಿದೆ. ಅದರ ಪಕ್ಕದಲ್ಲಿರುವ ಶೆಡ್‍ನ ಬಳಿ ಭೂಕುಸಿದಿದ್ದರೂ ಸ್ವಲ್ಪ ಮಾತ್ರ ಕುಸಿದು ಹಾಗೇ ನಿಂತಿದೆ. ಶೆಡ್‍ಗೆ ಏನೂ ಹಾನಿಯಾಗಿಲ್ಲ. ಈ ವರ್ಷ ಉತ್ಸವ ಆಚರಣೆ ಬದಲಿಗೆ ಗಣಪತಿಗೆ ದೀಪ ಉರಿಸಿ ನಮಿಸಿದ್ದಾರೆ.

ಮುಕ್ಕೋಡ್ಲು: ಇನ್ನು ಜಲಪ್ರಳಯದೊಂದಿಗೆ ಕೃಷಿ ಭೂಮಿ, ತೋಟ, ಮನೆಗಳು ಮುಳುಗಡೆಯಾಗಿರುವ ಪ್ರದೇಶವೆಂದರೆ ಮುಕ್ಕೋಡ್ಲು ಗ್ರಾಮ ಎರಡೂ ಬದಿಯಿಂದಲೂ ಇಳಿಜಾರು ಪ್ರದೇಶವಾಗಿದ್ದು, ನಡುವಲ್ಲಿ ಹರಿಯುವ ನದಿ, ಬದಿಯಲ್ಲಿ ಗದ್ದೆ ಬಯಲು ಇದ್ದು, ಈ ನಡುವೆ ಇಲ್ಲಿ ಶ್ರೀ ಭದ್ರಕಾಳೇಶ್ವರಿ ದೇವಾಲಯವಿದೆ. ಪ್ರಕೃತಿ ವಿಕೋಪ ಸಂಭವಿಸುವ ಮುನ್ನವೇ ಜೋರಾಗಿ ಸುರಿದ ಮಳೆಯಿಂದಾಗಿ ಒಮ್ಮೆ ಸಂಪೂರ್ಣ ಮುಳುಗಡೆಗೊಂಡಿತ್ತು.

ನಂತರದಲ್ಲಿ ಪ್ರಕೃತಿ ವಿಕೋಪ ಸಂದರ್ಭ ತೋಟ-ಮನೆಗಳು ಸಹಿತ ಕೊಚ್ಚಿ ಹೋದರೂ ಈ ದೇಗುಲದ ಗುಡಿಗಳು ಮಾತ್ರ ಹಾಗೆ ಉಳಿದುಕೊಂಡಿರುವದು ವಿಶೇಷವೇ ಸರಿ. ಸುತ್ತಲಿನ ಪೌಳಿ, ಆವರಣಗೋಡೆ, ಶೀಟುಗಳಿಗೆ ಹಾನಿಯಾಗಿದ್ದರೂ ದೇವರ ಗುಡಿ ಮಾತ್ರ ದೈವೀ ಶಕ್ತಿಯಿಂದಾಗಿ ಉಳಿದುಕೊಂಡಿದೆ. ಮೊನ್ನೆದಿನ ಗ್ರಾಮಸ್ಥರೆ ಸೇರಿ ಈ ದೇಗುಲದ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ.

ಉದಯಗಿರಿ: ಮಕ್ಕಂದೂರು ಗ್ರಾಮದಲ್ಲಿ ನಾಶವಾದ ಮತ್ತೊಂದು ಗ್ರಾಮ ಉದಯಗಿರಿ. ತಾ. 17 ರಂದು ಇಲ್ಲಿ ಪ್ರಕೃತಿಯ ನರ್ತನವಾಗಿದೆ. ಇಲ್ಲಿಯೂ ಗ್ರಾಮ ದೇವತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯ ದೇಗುಲವೊಂದಿದೆ. ಭಾರೀ ಮಳೆ ಬಂದ ಸಂದರ್ಭದಲ್ಲಿ ಭೂಕುಸಿದು ದೇವಾಲಯದ ಆವರಣಗೋಡೆ, ಶೀಟುಗಳಿಗೆ ಹಾನಿಯಾಗಿತ್ತು. ನಂತರ ಸಂಭವಿಸಿದ ದುರಂತದಲ್ಲಿ ಗ್ರಾಮದಲ್ಲಿ ಮನೆ, ಮಾನವ ಸಹಿತ ಭೂಮಿ ಕೊಚ್ಚಿಕೊಂಡು ಹೋಗಿದ್ದರೂ ಈ ದೇವಿಯ ಗುಡಿಗೆ ತೊಂದರೆಯಾಗಿಲ್ಲ. ಇಂದಿಗೂ ಗುಡಿಯಿದೆ.

ಕಾಲೂರು: ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿದ ಕುಗ್ರಾಮಗಳ ಪೈಕಿ ಕಾಲೂರು ಕೂಡ ಒಂದು. ಕಾಲೂರಿನಲ್ಲಿ ಆಗಸ್ಟ್ 15 ರಂದೇ ಅನಾಹುತ ಸಂಭವಿಸಿದೆ. ಭಾರೀ ಪ್ರಮಾಣದಲ್ಲಿ ಭೂಕುಸಿತಗೊಂಡು ಕೆಲವು ಮನೆಗಳಿಗೆ ಹಾನಿಯಾಗಿದ್ದವು. ನಂತರದಲ್ಲಿ ಇನ್ನಷ್ಟು ಭೂಕುಸಿತಗೊಂಡು ಅಪಾರ ಪ್ರಮಾಣದ ಹಾನಿಯಾಗಿದೆ. ತೋಟ, ಗದ್ದೆ, ಮನೆಗಳು ಮುಳುಗಿವೆ. ಆದರೆ ಇಲ್ಲಿರುವ ಮೂರೂ ದೇವಾಲಯಗಳು ಸುರಕ್ಷಿತವಾಗಿವೆ.

ಶ್ರೀ ಭದ್ರಕಾಳಿ ದೇವಸ್ಥಾನ, ಶ್ರೀ ಭಗವತಿ ದೇವಸ್ಥಾನ ಹಾಗೂ ಶ್ರೀ ಅಯ್ಯಪ್ಪ ದೇವಾಲಯಗಳು ಯಾವದೇ ಹಾನಿಯಾಗದೆ ಹಾಗೇ ಉಳಿದುಕೊಂಡಿವೆ. ಈ ದೇವಾಲಯದ ಅರ್ಚಕ, ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರ ಮನೆಗೂ ಹಾನಿಯಾಗಿದ್ದು, ಇದೀಗ ನಾಗೇಶ್ ಅವರು ದೇವಾಲಯದಲ್ಲೇ ವಾತ್ಸವ್ಯ ಹೂಡಿ ಪ್ರತಿ ನಿತ್ಯ ಪೂಜಾ ಕಾರ್ಯ ನೆರವೇರಿಸುತ್ತಿದ್ದಾರೆ.

ಹಟ್ಟಿಹೊಳೆ: ದೇವಾಲಯಗಳು ಮಾತ್ರವಲ್ಲ, ಮಂದಿರ, ಮಸೀದಿಗಳಿಗೂ ಯಾವದೇ ಹಾನಿಯಾಗಿಲ್ಲ. ಭೀಕರ ಜಲಪ್ರಳಯವಾದಾಗ ಹಟ್ಟಿಹೊಳೆ ತುಂಬಿ ಹರಿದು ಪ್ರವಾಹ ಉಕ್ಕಿ ಗ್ರಾಮವೇ ಜಲಾವೃತವಾಗಿತ್ತು. ಪ್ರವಾಹದ ಸೆಳೆತಕ್ಕೆ ಮನೆಗಳೊಂದಿಗೆ ವ್ಯಕ್ತಿಯೋರ್ವರು ಕೂಡ ನೀರು ಪಾಲಾಗಿದ್ದರು. ನದಿಯ ಸನಿಹದಲ್ಲೇ ಇರುವ ನಿರ್ಮಲ ಮಾತೆ ಚರ್ಚ್ ಕೂಡ ಜಲಾವೃತಗೊಂಡು ಆ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಸುಂಟಿಕೊಪ್ಪಕ್ಕೆ ಸ್ಥಳಾಂತರಿಸಲಾಗಿದೆ. ಅಷ್ಟೊಂದು ಜಲಾವೃತವಾದರೂ ಚರ್ಚ್‍ನ ಕಟ್ಟಡಕ್ಕೆ ಯಾವದೇ ಹಾನಿ ಸಂಭವಿಸದಿರುವದು ಇಲ್ಲಿಯೂ ದೈವೀಶಕ್ತಿ ಇದೆ ಎಂಬದನ್ನು ಸಾಬೀತುಪಡಿಸಿದೆ.

ಮದೆನಾಡು: ಮಳೆಗಾಲ ಆರಂಭವಾದಾಗಿನಿಂದ ದುರಂತ ಸಂಭವಿಸುತ್ತಿರುವ ಪ್ರದೇಶವೆಂದರೆ ಮದೆ ಗ್ರಾಮ ಪಂಚಾಯಿತಿ ಮೊದಲು ಭಾರೀ ಗಾತ್ರದ ಭೂಕುಸಿತಗೊಂಡು ಸಂಪರ್ಕ ಕಡಿತಗೊಂಡ ಪ್ರದೇಶ ಇದಾಗಿದೆ. ನಂತರದಲ್ಲಿ ವಿಕೋಪಕ್ಕೆ ಸಿಲುಕಿ ಮೊಣ್ಣಂಗೇರಿ, ಜೋಡುಪಾಲವೆಂಬ ಗ್ರಾಮಗಳಿದ್ದವು ಎಂದು ಹೇಳಲು ಕೂಡ ಸಾಧ್ಯವಾಗದಷ್ಟರ ಮಟ್ಟಿಗೆ ಹಾನಿ ಸಂಭವಿಸಿದೆ. ಮದೆನಾಡಿನಲ್ಲೂ ಮಸೀದಿಯೊಂದಿದ್ದು, ಆ ಭಾಗದಲ್ಲಿ ಯಾವದೇ ಹಾನಿ ಸಂಭವಿಸಿಲ್ಲ. ಅನತಿ ದೂರದಲ್ಲಿಂದ ಸಾಕಷ್ಟು ಹಾನಿಯುಂಟಾಗಿದೆ. ಪಕ್ಕದಲ್ಲೇ ದೇವರ ಗುಡಿಯೊಂದಿದ್ದು, ಅದೂ ಕೂಡ ಸುರಕ್ಷಿತವಾಗಿದೆ.

ಇತ್ತ ಮೊಣ್ಣಂಗೇರಿಯಲ್ಲಿ ಅಪಾರ ಹಾನಿಯಾಗಿದ್ದು, ದೇವರ ಗುಡಿ, ದೇವರ ಕಲ್ಲುಗಳಿಗೆ ಯಾವದೇ ಹಾನಿಯುಂಟಾಗಿಲ್ಲ. ಬಾಣೂರು ವನದುರ್ಗಿ ದೇವಿಯ ಗುಡಿ ಸೇರಿದಂತೆ ಭಜನಾ ಮಂದಿರ, ಕುಡಿಯ ಹಾರಿದ ಕಲ್ಲು, ಇವುಗಳು ಸುರಕ್ಷಿತವಾಗಿವೆ. ಇದರೊಂದಿಗೆ ಅಲ್ಲಿನ ನಿವಾಸಿಗಳು ತಮ್ಮ ಇಷ್ಟ ದೇವಗಳಾದ ಗುಳಿಗ, ಚೌಂಡಿ, ನಾಗಪ್ಪನಿಗೆ ವರ್ಷಂಪ್ರತಿ ಪೂಜೆ, ಹರಕೆ ಸಲ್ಲಿಸುವ ಸಲುವಾಗಿ ಪ್ರತಿಷ್ಠಾಪಿಸಿರುವ ಕಲ್ಲುಗಳು ಕೂಡ ಹಾಗೆ ಉಳಿದುಕೊಂಡಿವೆ. ಸುತ್ತೆಲ್ಲ ಪ್ರದೇಶಗಳೂ ಕೊಚ್ಚಿ ಹೋಗಿದ್ದರೂ ಈ ದೈವೀ ನೆಲೆಗಳು ಮಾತ್ರ ಭದ್ರವಾಗಿವೆ.

ಕೆದಕಲ್: ಮೈಸೂರು ರಸ್ತೆಯ ಕೆದಕಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಐತಿಹಾಸಿಕ ಹಿನ್ನೆಲೆಯಿರುವ ಶ್ರೀ ಭದ್ರಕಾಳೇಶ್ವರಿ ದೇವಾಲಯವಿದೆ. ರಸ್ತೆಯ ಮೇಲ್ಭಾಗದಲ್ಲಿ ದೇವಾಲವಿದ್ದು, ಅದೇ ನೇರಕ್ಕೆ ರಸ್ತೆಯಿಂದ ಕೆಳ ಭಾಗದಲ್ಲಿ ಭಾರೀ ಭೂಕುಸಿತವುಂಟಾಗಿದೆ. ಸ್ವಲ್ಪ ಮೇಲಿನಿಂದ ಕುಸಿತಗೊಂಡಿದ್ದರೆ ದೇಗುಲಕ್ಕೂ ಹಾನಿಯುಂಟಾಗುವ ಸಾಧ್ಯತೆಯಿತ್ತು.

ಮಾದಾಪುರ: ಮಾದಾಪುರದಲ್ಲೂ ಕೂಡ ಪ್ರವಾಹದ ನದಿ ನೀರು ಉಕ್ಕಿ ಹರಿದು ಮನೆಗಳಿಗೆ ನುಗ್ಗಿ ಹಾನಿಯಾಗಿದೆ. ಅಲ್ಲಲ್ಲಿ ಮನೆಗಳೂ ಕುಸಿದಿವೆ. ಮಾದಾಪುರದಲ್ಲಿರುವ ಅಯ್ಯಪ್ಪ ದೇವಾಲಯಕ್ಕೆ ಕೊಂಚ ಹಾನಿಯಾಗಿದೆ. ಸಣ್ಣ ಗುಡಿಯ ಮೇಲ್ಛಾವಣಿ ಕುಸಿದಿದೆ. ಆದರೆ ಮುಖ್ಯ ಗುಡಿ ಜಾರಿ ನಿಂತಿದ್ದು, ಸದ್ಯಕ್ಕೆ ಹಾಗೇ ಉಳಿದುಕೊಂಡಿದೆ.

ಪ್ರಕೃತಿಯ ಅಟ್ಟಹಾಸಕ್ಕೆ ನಲುಗಿ ಹೋದವರ ಸಂಕಷ್ಟಕ್ಕೆ ಜಾತಿ, ಮತ, ಬೇಧ ಮರೆತು ಎಲ್ಲರೂ ನೆರವಾಗಿದ್ದಾರೆ. ನಾವೆಲ್ಲರೂ ಒಂದೇ ಎಂಬ ಭಾವನೆಯ ಸಂದೇಶ ಇಲ್ಲಿ ಪಸರಿಸಿದೆ. ಅದೇ ರೀತಿ ಪ್ರಕೃತಿಯೆದುರು, ದೈವೀಶಕ್ತಿಯೆದುರು ಎಷ್ಟೋ ಸಿರಿವಂತರಾದರೂ ತೃಣ ಸಮಾನರು ಎಂಬ ಸಂದೇಶ ಕೂಡ ಎಲ್ಲರಿಗೂ ಮನ ಮುಟ್ಟಿದಂತಾಗಿದೆ.

ದೇವಿಯ ಬಿಟ್ಟು ನಾ ಹೇಗೆ ಹೋಗಲಿ...

‘ಇಪ್ಪತ್ತೇಳು ವರ್ಷಗಳ ಹಿಂದೆ ದಿಕ್ಕಿಲ್ಲದ ಹಾದಿಯಲ್ಲಿ ಆಕಸ್ಮಿಕವೆಂಬಂತೆ ಹುಟ್ಟೂರು ತೊರೆದು ಬರಿಗೈನಲ್ಲಿ ಕೊಡಗಿಗೆ ಬಂದಾಗ, ಸ್ನೇಹಿತರೊಬ್ಬರ ಮುಖಾಂತರ ಹಾಲೇರಿಯ ಶ್ರೀ ಭದ್ರಕಾಳಿ ದೇವಿ ಸನ್ನಿದಿಗೆ ಬಂದಿರುವೆ, ಇಷ್ಟು ವರ್ಷ ನನ್ನ ಸಂಸಾರವನ್ನು ಸಲಹಿರುವ ತಾಯಿಯನ್ನು ಇಂದು ಬಿಟ್ಟು ಹೇಗೆ ತಾನೆ ನಾ ಹೋಗಲಿ’... ಹೀಗೆಂದು ಪ್ರಶ್ನಿಸಿದವರು ಹಾಲೇರಿ ಶ್ರೀ ಭದ್ರಕಾಳಿ ಸನ್ನಿದಿಯ ಅರ್ಚಕ ಸದಾನಂದ ಭಟ್ ಇವರು ಉಡುಪಿ ಸಮೀಪದ ಕುತ್‍ಪಾಡಿ ಗ್ರಾಮದವರು. 1991 ಸೆಪ್ಟೆಂಬರ್ 16 ರಿಂದ ಇಂದಿಗೂ ಹಾಲೇರಿ ಭದ್ರಕಾಳಿ ಸನ್ನಿದಿಯಲ್ಲಿ ನಿತ್ಯಪೂಜೆಯೊಂದಿಗೆ ಬದುಕು ಕಂಡುಕೊಂಡಿದ್ದಾರೆ.

ಕಳೆದ ಆಗಸ್ಟ್ 14 ರಿಂದ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದಲ್ಲದೆ, ಹಾಲೇರಿ ಸುತ್ತ ಮುತ್ತ ಭೂಕುಸಿತದೊಂದಿಗೆ ರಸ್ತೆ ಸಂಪರ್ಕ ಕಡಿತಗೊಂಡಾಗ, ಅಲ್ಲಿನ ಗ್ರಾಮಸ್ಥರೆಲ್ಲರೂ ಕಾಡು ಮೇಡುಗಳಲ್ಲಿ ಸುತ್ತಿ ಸುಂಟಿಕೊಪ್ಪ ಹಾಗೂ ಇತರೆಡೆಗಳಲ್ಲಿ ಪರಿಹಾರ ಕೇಂದ್ರ ಮತ್ತು ನೆಂಟರಿಷ್ಟರ ಮನೆಗಳಿಗೆ ತೆರಳುವದರೊಂದಿಗೆ, ಊರಿಗೆ ಊರನ್ನೇ ಖಾಲಿ ಮಾಡಿದ್ದರು.

ಆದರೆ, ತಾವು ತಮ್ಮ ಪತ್ನಿ ಸುಮತಿ ಹಾಗೂ ಆಗಷ್ಟೇ ಕರು ಹಾಕಿದ ಹಸುವನ್ನು ಬಿಟ್ಟು ದೇವಿ ಸನ್ನಿಧಿಯ ಪೂಜೆ ತೊರೆದು ಹೋಗಲು ಮನಸ್ಸು ಒಪ್ಪಲೇ ಇಲ್ಲ. ಸರಿ ಸುಮಾರು 27 ವರ್ಷದಿಂದ ನಮ್ಮನ್ನು ಕಾಪಾಡಿದ ದೇವಿಯ ಬಿಟ್ಟು ‘ನಾ ಹೇಗೆ ಹೋಗಲಿ... ಎಂದು ಯೋಚಿಸಿ ಬದುಕಿದರೆ ನಿನ್ನ ಸೇವೆ ಮಾಡಿಕೊಂಡು ಇರುವೆ... ತಪ್ಪಿದಲ್ಲಿ ನಿನ್ನ ಇಚ್ಛೆ ಹೇಗಿದೆಯೋ ಹಾಗೆ ಆಗಲೆಂದು ಗಟ್ಟಿ ಮನಸ್ಸು ಮಾಡಿದೆ’ ಸದ್ಯ ದೇವಿಯು ಕಾಪಾಡಿದ್ದಾಳೆ. ದೇವಾಲಯಕ್ಕೆ ಮತ್ತು ನಮಗೆ ಯಾವ ಹಾನಿಯೂ ಆಗಿಲ್ಲ. ಚೆನ್ನಾಗಿದ್ದೇವೆ... ಮಳೆ ದೂರವಾಗಿದೆ, ಬಹುತೇಕ ಜನರು, ಹತ್ತಾರು ಎಕರೆ ತೋಟ ಕಳೆದುಕೊಂಡವರು ಊರಿಗೆ ವಾಪಾಸಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದು ಅರ್ಚಕ ಸದಾನಂದ ಭಟ್ ‘ಶಕ್ತಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

73ರ ಇಳಿವಯಸ್ಸಿನ ಸದಾನಂದ ಭಟ್ ಮಾತಿನಲ್ಲಿ ದೇವಿಯ ಮೇಲಿನ ಅಪಾರ ಭಕ್ತಿಯೊಂದಿಗೆ ಆತ್ಮವಿಶ್ವಾಸ ಕುಗ್ಗದ ಉತ್ಸಾಹ ಕಂಡುಬಂತು. ಹಾಲೇರಿ ಭದ್ರಕಾಳಿ ತಮ್ಮನ್ನು ಆಕೆಯ ಸೇವೆಗಾಗಿ ಇಲ್ಲಿಗೆ ಕರೆಸಿಕೊಂಡಿದ್ದು, ಎಲ್ಲಿಯ ತನಕ ಪೂಜಿಸುವ ಶಕ್ತಿ ಕರುಣಿಸುವಳೋ ಅಲ್ಲಿಯವರೆಗೆ ಸೇವೆ ಮುಂದುವರಿಸುವದಾಗಿ ಮಾರ್ನುಡಿದರು. ಪತಿಯ ಮಾತಿಗೆ ದನಿಗೂಡಿಸಿದ ಪತ್ನಿ ಸುಮತಿ ಭಟ್, ದೇವರ ಇಚ್ಛೆಯಂತೆ ಎಲ್ಲವೂ ಆಗುತ್ತಿದೆ. ಇಲ್ಲಿ ನಮ್ಮದೇನೂ ಇಲ್ಲವೆಂದು ವ್ಯಾಖ್ಯಾನಿಸಿದರು.

ಪೆಟ್ಟುಕೊಟ್ಟು ಜೀವ ಉಳಿಸಿದ ದೇವರು...

‘ಕಳೆದ 42 ವರ್ಷಗಳಿಂದ ಕಾಲೂರು ಶ್ರೀ ಭದ್ರಕಾಳಿ ಹಾಗೂ ಶ್ರೀ ಭಗವತಿ ಸನ್ನಿಧಿಗಳಲ್ಲಿ ನಿತ್ಯ ಪೂಜೆಯೊಂದಿಗೆ, ಶ್ರೀ ಅಯ್ಯಪ್ಪ ಶ್ರೀ ಮಹಾದೇವರ ಸನ್ನಿಧಿಗಳಲ್ಲೂ ವರ್ಷಾವಧಿಯ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ಆಗಸ್ಟ್ 8 ರಂದು ದೇವಿ ಸನ್ನಿಧಿಯ ಪೂಜೆ ಮುಗಿಸಿ ವಾಪಾಸ್ಸಾಗುತ್ತಿದ್ದಾಗ, ಮರದ ಕೊಂಬೆಯೊಂದು ಮುರಿದು ಬಂದು, ನನಗೆ ದೇವರೇ ಪೆಟ್ಟುಕೊಟ್ಟಂತೆ ಅನುಭವವಾಯಿತು. ಅಂದಿನಿಂದ ಗ್ರಾಮಸ್ಥರಿಗೆ ತಿಳಿಸಿ, ನಾನು ಮರುದಿನದಿಂದ ಪೂಜೆ ನಿಲ್ಲಿಸಿಬಿಟ್ಟೆ. ಅದಾದ 8 ದಿನಗಳಲ್ಲಿ ಸರಣಿ ಭೂಕುಸಿತ, ರಸ್ತೆ ಸಂಪರ್ಕ ಎಲ್ಲ ಸ್ಥಗಿತವಾಯಿತು. ನನ್ನ ಮನೆಯೊಂದಿಗೆ ಎರಡು ಎಕರೆ ಕಾಫಿ ತೋಟವೂ ಹಾನಿಗೊಂಡಿತು. ಅಂದು ನನಗೆ ದೇವರೇ ಎಚ್ಚರಿಸಿ ಆಗಸ್ಟ್ 8 ರಂದು ಪೆಟ್ಟು ಕೊಟ್ಟು ಜೀವ ಉಳಿಸಿದ್ದಾನೆ ಎನ್ನುವ ಅನುಭವವಾಯಿತು.

ಸುಮಾರು 22 ದಿನಗಳ ಬಳಿಕ ಸೆ. 1 ರಿಂದ ನಿತ್ಯ ಪೂಜೆ ಮುಂದುವರಿದಿದೆ. ಇಷ್ಟೆಲ್ಲಾ ಕಾಲೂರಿನಲ್ಲಿ ಹಾನಿಯಾಗಿದ್ದರೂ ಎಲ್ಲ ದೇವ ಸನ್ನಿಧಿಗಳು ಯಾವೊಂದೂ ತೊಂದರೆಯಾಗದೆ ರಕ್ಷಿಸಲ್ಪಟ್ಟಿವೆ. ಇಂದು ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಊರಿನವರೇ ಆಗಿರುವ ಶಾಸಕ ಕೆ.ಜಿ. ಬೋಪಯ್ಯ, ಮೈಸೂರಿನ ಶಾಸಕ ರಾಮದಾಸ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ದೇವರ ದಯೆಯಿಂದ ಸಾಕಷ್ಟು ನೆರವು ಕಲ್ಪಿಸಿದ್ದಾರೆ. ಎಲ್ಲವನ್ನೂ ಆ ದೇವರೇ ಕೊಟ್ಟಿದ್ದು, ನನ್ನ ಆತ್ಮಸ್ಥೈರ್ಯ ಕುಗ್ಗಿಲ್ಲ, ಖಂಡಿತಾ ನಮ್ಮ ಜೀವ ಉಳಿಸಿರುವ ದೇವರು ಮುಂದೆಯೂ ಕಾಪಾಡುತ್ತಾನೆ ಎಂಬ ವಿಶ್ವಾಸದೊಂದಿಗೆ ಭದ್ರಕಾಳಿ ಸನ್ನಿಧಿಯಲ್ಲೇ ಮಲಗುತ್ತಾ, ನಿತ್ಯ ಪೂಜೆಯೊಂದಿಗೆ ದೈನಂದಿನ ಕೆಲಸ ಕಾರ್ಯಗಳಲ್ಲಿ ಮಗ್ನನಾಗಿರುವೆ’ ಎಂದು ಸಾಹಿತಿ, ಅರ್ಚಕ ನಾಗೇಶ್ ಕಾಲೂರು ‘ಶಕ್ತಿ’ಯೊಂದಿಗೆ ಅನುಭವ ಹಂಚಿಕೊಂಡಿದ್ದಾರೆ.

-ವರದಿ: ಶ್ರೀಸುತ, ಕುಡೆಕಲ್ ಸಂತೋಚ್‍ಮಾದಾಪುರ: ಮಾದಾಪುರದಲ್ಲೂ ಕೂಡ ಪ್ರವಾಹದ ನದಿ ನೀರು ಉಕ್ಕಿ ಹರಿದು ಮನೆಗಳಿಗೆ ನುಗ್ಗಿ ಹಾನಿಯಾಗಿದೆ. ಅಲ್ಲಲ್ಲಿ ಮನೆಗಳೂ ಕುಸಿದಿವೆ. ಮಾದಾಪುರದಲ್ಲಿರುವ ಅಯ್ಯಪ್ಪ ದೇವಾಲಯಕ್ಕೆ ಕೊಂಚ ಹಾನಿಯಾಗಿದೆ. ಸಣ್ಣ ಗುಡಿಯ ಮೇಲ್ಛಾವಣಿ ಕುಸಿದಿದೆ. ಆದರೆ ಮುಖ್ಯ ಗುಡಿ ಜಾರಿ ನಿಂತಿದ್ದು, ಸದ್ಯಕ್ಕೆ ಹಾಗೇ ಉಳಿದುಕೊಂಡಿದೆ.

ಪ್ರಕೃತಿಯ ಅಟ್ಟಹಾಸಕ್ಕೆ ನಲುಗಿ ಹೋದವರ ಸಂಕಷ್ಟಕ್ಕೆ ಜಾತಿ, �