*ಗೋಣಿಕೊಪ್ಪಲು, ಸೆ. 30 : ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಸಂತ್ರಸ್ತರ ನೆರವಿಗೆ ಧಾವಿಸಿ ಸಹಾಯ ಮಾಡಿದ ಬಾಳೆಲೆಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಹಾಗೂ ಕಾಫಿಬೆಳೆಗಾರ ಕಾಟಿಮಾಡ ಶರೀನ್ ಮುತ್ತಣ್ಣ ಅವರನ್ನು ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಸನ್ಮಾನಿಸಿದರು.
ಸ್ಥಳೀಯ ಕೊಡವ ಸಮಾಜದ ಸಭಾಂಗಣದಲ್ಲಿ ಈಚೆಗೆ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಳೆಮೇಂಗಡ ಬೋಸ್ ಮಂದಣ್ಣ ಹಟ್ಟಿಹೊಳೆ, ಮುಕ್ಕೋಡ್ಲು, ಮಕ್ಕಂದೂರು, ಕಾಲೂರು ಮೊದಲಾದ ಭಾಗಗಳಿಗೆ ತೆರಳಿ ಮನೆಮಠ, ಆಸ್ತಿಪಾಸ್ತಿ ಕಳೆದು ಕೊಂಡವರಿಗೆ ನೆರವಾಗಲು 15 ದಿನಗಳ ಕಾಲ ದುಡಿದಿದ್ದರು. ಇವರ ಶ್ರಮವನ್ನು ಗುರುತಿಸಿ ಸನ್ಮಾನಿಸ ಲಾಗುತ್ತಿದೆ ಎಂದು ಹೇಳಿದರು.
ಕಳೆದ 10 ವರ್ಷಗಳ ಹಿಂದೆ ಆರ್ಥಿಕ ದುಸ್ಥಿತಿಯಲ್ಲಿದ್ದ ಸಂಘವನ್ನು ಉತ್ತಮ ಕಾರ್ಯನಿರ್ವಹಣೆಯ ಮೂಲಕ ಲಾಭದತ್ತ ಕೊಂಡೊಯ್ಯಲಾಗುತ್ತಿದೆ. 2017-18ನೇ ಸಾಲಿನಲ್ಲಿ ಸಂಘವು ರೂ 5ಲಕ್ಷ ದಷ್ಟು ಲಾಭಗಳಿಸಿದೆ. ಮುಂದೆಯೂ ಸಂಘವನ್ನು ಪ್ರಗತಿಯತ್ತ ಕೊಂಡೊಯ್ಯಲಾಗುವದು ಎಂದು ತಿಳಿಸಿದರು. ಉಪಾಧ್ಯಕ್ಷೆ ವಿನ್ನಿ ಕಾವೇರಮ್ಮ, ನಿರ್ದೇಶಕರಾದ ಅಳಮೇಂಗಡ ಸುರೇಶ್ ಸುಬ್ಬಯ್ಯ, ಆದೇಂಗಡ ವಿನು ಉತ್ತಪ್ಪ, ಕಾಯಮಾಡ ರಾಜ,ಅಡ್ಡೆಂಗಡ ನಾಣಯ್ಯ, ರೀಟಾ ಬೋಪಯ್ಯ ಹಾಗೂ ಇತರ ಸದಸ್ಯರು ಹಾಜರಿದ್ದರು.