ಸುಂಟಿಕೊಪ್ಪ, ಸೆ. 30 : ಸುಂಟಿಕೊಪ್ಪ ಪಟ್ಟಣದಲ್ಲಿ ಅಕ್ರಮವಾಗಿ ಕೇರಳ ಸರಕಾರದ ಲಾಟರಿಯನ್ನು ಮಾರಾಟ ಮಾಡಲು ಶೇಖರಿಸಿಟ್ಟದ್ದನ್ನು ಪತ್ತೆ ಹಚ್ಚಿದ ಅಪರಾಧ ಪತ್ತೆ ದಳದ ಪೊಲೀಸರು ರೂ. 3,17,570 ಮೌಲ್ಯದ ಕೇರಳ ರಾಜ್ಯದ 9319 ಲಾಟರಿ ಟಿಕೇಟನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂದಿಸಿದ್ದಾರೆ.ಜಿಲ್ಲಾ ಅಪರಾದ ಪತ್ತೆದಳದ ಇನ್ಸ್‍ಪೆಕ್ಟರ್ ಮಹೇಶ್ ತಂಡ ಮತ್ತು ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ತಂಡ ಖಚಿತ ಮಾಹಿತಿ ಮೇರೆಗೆ ಮೂವರು ಆರೋಪಿಗಳಾದ ಸುಂಟಿಕೊಪ್ಪ 1ನೇ ವಿಭಾಗದ ನಿವಾಸಿ ಸಲೀಂ ಆಲಿಯಾಸ್ ತನು, 7ನೇ ಹೊಸಕೋಟೆ (ಮೊದಲ ಪುಟದಿಂದ) ಗ್ರಾಮದ ಉಪ್ಪುತೋಡು ನಿವಾಸಿ ಮೂಸ, ಅದೇ ಗ್ರಾಮದ ಕಲ್ಲುಕೋರೆ ನಿವಾಸಿ ಹಾಗೂ ಆಟೋ ಚಾಲಕ ದೇವರಾಜ್ ಇವರನ್ನು ಬಂಧಿಸಿದ್ದಾರೆ. ಸುಂಟಿಕೊಪ್ಪ 1ನೇ ವಿಭಾಗದ ನಿವಾಸಿ ಸಲೀಂ ಆಲಿಯಾಸ್ ತನು ಎಂಬಾತನ ಮನೆಗೆ ದಾಳಿಯಿಟ್ಟು ಶೋಧಿಸಿದಾಗ ಮೂವರು ಆರೋಪಿಗಳು ಕೇರಳ ರಾಜ್ಯ ಸರಕಾರದ ಲಾಟರಿ ಟಿಕೇಟ್‍ನ್ನು ಮಂಚದ ಮೇಲೆ ಹಾಕಿ ಹಂಚುತ್ತಿದ್ದ ಸಂದರ್ಭ ಸೆರೆ ಸಿಕ್ಕಿದ್ದಾರೆ. ಆರೋಪಿಗಳಿಂದ 3,17,570 ರೂ ಮೌಲ್ಯದ ಕೇರಳ ರಾಜ್ಯದ 9319 ಲಾಟರಿ ಟಿಕೇಟನ್ನು ವಶಪಡಿಸಿ ಕೊಳ್ಳಲಾಗಿದೆ. ಆರೋಪಿಗಳ ಮೇಲೆ ಮೊಕದ್ದಮೆ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಎಸ್.ಎನ್. ಜಯರಾಮ್, ಸಿಬ್ಬಂದಿಗಳಾದ ಧನುಕುಮಾರ್, ಅಬ್ದುಲ್ ರೆಹಮಾನ್, ಪುನೀತ್, ಚಾಲಕರಾದ ಶಶಿ ಕುಮಾರ್, ರವಿ, ಡಿಸಿಐಬಿ ಇನ್ಸ್‍ಪೆಕ್ಟರ್ ಮಹೇಶ್, ಎಎಸ್‍ಐ ಹಮೀದ್, ಸಿಬ್ಬಂದಿಗಳಾದ ತಮ್ಮಯ್ಯ, ಅನಿಲ್, ವೆಂಕಟೇಶ್, ನಿರಂಜನ, ಯೋಗೇಶ್ ಕುಮಾರ್ ಪಾಲ್ಗೊಂಡಿದ್ದರು.
ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಲಾಗಿ ಕೇರಳ ರಾಜ್ಯದ ಇರಿಟ್ಟಿ ನಗರದಿಂದ ಸದರಿ ಲಾಟರಿಯನ್ನು ಸುಂಟಿಕೊಪ್ಪ ನಿವಾಸಿಯಾದ ಅತೀಕ್ ಎಂಬ ವ್ಯಕ್ತಿಗೆ ಹಣ ನೀಡಿ ತರಿಸಿಕೊಂಡಿರುವದಾಗಿ ಹಾಗೂ ಸದರಿ ಲಾಟರಿಯನ್ನು ಸುಂಟಿಕೊಪ್ಪ, ಕುಶಾಲನಗರ, ಸೋಮವಾರಪೇಟೆಗಳಲ್ಲಿ ಸಂತೆ ನಡೆಯುವ ದಿನ ಮಾರಾಟ ಮಾಡಲು ಹಂಚಿಕೊಳ್ಳುತ್ತಿದ್ದುದಾಗಿ ತಪ್ಪೊಪ್ಪಿ ಕೊಂಡಿರುತ್ತಾರೆ.
ಈ ಪ್ರಕರಣವನ್ನು ಪತ್ತೆಹಚ್ಚಿದ ಆಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ. ಪೆಣ್ಣೇಕರ್ ನಗದು ಬಹುಮಾನವನ್ನು ಘೋಷಿಸಿದ್ದಾರೆ.
ಎಸ್ಪಿ ಸಲಹೆ
ಕೊಡಗು ಜಿಲ್ಲೆಯಾದ್ಯಂತ ಲಾಟರಿ ಅಕ್ರಮ ಮಾರಾಟ ಜಾಲ ಹಬ್ಬಿಕೊಂಡಿದ್ದು, ಈ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಗ್ರಾಮದ ಬೀಟ್ ಅಧಿಕಾರಿಗಳಿಗಾಗಲೀ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಯ ಪಿಎಸ್‍ಐರವರಿಗಾಗಲೀ ನೀಡುವಂತೆ ಕೋರಲಾಗಿದೆ. ಇದಲ್ಲದೇ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲೆಯ ಸುಮಾರು 30 ಕಡೆಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇರಿಸಿದ್ದು, ಯಾವದೇ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು
ನೀಡಬಹುದಾಗಿರುತ್ತದೆ. ಮಾಹಿತಿ ನೀಡುವ ಸಾರ್ವಜನಿಕರು ತಮ್ಮ ಹೆಸರು ನಮೂದಿಸುವ ಅಗತ್ಯವಿರುವ ದಿಲ್ಲ, ಹೆಸರು ನಮೂದಿಸಿ ಮಾಹಿತಿ ನೀಡಿದ ಸಾರ್ವಜನಿಕರ ವಿವರವನ್ನು ಗೌಪ್ಯವಾಗಿಡಲಾಗುವದೆಂದು ಪೊಲೀಸ್ ಅಧೀಕ್ಷಕರಾದ ಸುಮನ್ ಪೆಣ್ಣೇಕರ್ ತಿಳಿಸಿದ್ದಾರೆ.