ಕೂಡಿಗೆ, ಅ.1 : ಕರ್ನಾಟಕ ಪಂಚಾಯತ್ ರಾಜ್ ವತಿಯಿಂದ ಜಿಲ್ಲೆಯ ಮೂರು ತಾಲೂಕುಗಳ ಆಯಾಯ ತಾಲೂಕಿನ ಒಂದು ಗ್ರಾಮ ಪಂಚಾಯಿತಿಗೆ ಸರ್ಕಾರದ ವತಿಯಿಂದ ಪ್ರತಿವರ್ಷ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ನೀಡಲಾಗುವದು.

ಅದರಂತೆ 2017-18ನೇ ಸಾಲಿನಲ್ಲಿ ರಾಜ್ಯ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಪಡೆದಿದೆ. ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಹಾಗೂ ಮಡಿಕೇರಿ ತಾಲೂಕಿನ ಭಾಗಮಂಡಲ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಪಡೆದುಕೊಂಡಿವೆ.

ಪ್ರಶಸ್ತಿ ಪುರಸ್ಕಾರಕ್ಕೆ ಜಿಲ್ಲಾ ಪಂಚಾಯಿತಿಯ ವತಿಯಿಂದ ಆಯ್ಕೆಯಾದ ಹೆಬ್ಬಾಲೆ ಗ್ರಾಮ ಪಂಚಾಯಿತಿಯನ್ನು ಪಾರದರ್ಶಕ ಗ್ರಾಮ ಪಂಚಾಯಿತಿಯನ್ನಾಗಿ ಗುರುತಿಸಿ ಸರ್ಕಾರದ ಅನುದಾನಗಳ ಸಕಾಲಿಕ ಬಳಕೆ, ಸಭೆಗಳನ್ನು ಯಶಸ್ವಿಯಾಗಿ ನಡೆಸಿರುವದು ಮತ್ತು ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಪೂರ್ಣ ಮಾಡಿರುವದು, ಶುಚಿತ್ವ ಮತ್ತು ನೈರ್ಮಲೀಕರಣ, ಕಂದಾಯ ವಸೂಲಾತಿಯಲ್ಲಿ ಹೆಚ್ಚು ಸಂಗ್ರಹಣೆ, ಉದ್ಯೋಗ ಖಾತರಿ ಯೋಜನೆಯ ಕಾರ್ಯಗತಗೊಳಿಸಿರುವದು, ಉದ್ಯಾನವನ ನಿರ್ಮಾಣ, ಗ್ರಾಮ ಪಂಚಾಯಿತಿ ನಿರ್ವಹಣೆ ಹಿನ್ನೆಲೆಯಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಗಾಂಧಿ ಜಯಂತಿ ಅಂಗವಾಗಿ ತಾ. 2 ರಂದು (ಇಂದು) ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅವರಿಂದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲತಾ ಹಾಗೂ ಅಭಿವೃದ್ಧಿ ಅಧಿಕಾರಿ ರಾಕೇಶ್ ಪುರಸ್ಕಾರ ಸ್ವೀಕರಿಸಲಿದ್ದಾರೆ.