ಸಂಪಾಜೆ, ಅ. 5: ಮುಂದಿನ ಒಂದು ತಿಂಗಳಲ್ಲಿ ಮಾಣಿ-ಮೈಸೂರು ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದರು. ಸಂಪಾಜೆ ಪಯಸ್ವಿನಿ ವ್ಯವಸಾಯ ಸೇವಾ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಹೋಬಳಿ ಮಟ್ಟದ ಜನ ಸಂಪರ್ಕ ತಿಳಿಸಿದರು. ಸಂಪಾಜೆ ಪಯಸ್ವಿನಿ ವ್ಯವಸಾಯ ಸೇವಾ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಹೋಬಳಿ ಮಟ್ಟದ ಜನ ಸಂಪರ್ಕ (ಮೊದಲ ಪುಟದಿಂದ) ಸಾರ್ವಜನಿಕ ಮೂಲಭೂತ ವಸ್ತುಗಳಿಗೆ ಹಾನಿಯಾಗಿದೆ. ಕೆರೆ, ಬಾವಿಗಳು ಮುಚ್ಚಿಹೋಗಿವೆ ಇದನ್ನು ಕೂಡಲೇ ದುರಸ್ತಿ ಮಾಡಿ, ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮದೆನಾಡು, ಹಾಕತ್ತೂರು, ಮೊಣ್ಣಂಗೇರಿ ಗ್ರಾಮಸ್ಥರು ಒತ್ತಾಯಿಸಿದರು. ಇದೇ ವೇಳೆ ಮನೆ ಕುಸಿತ, ಮನೆಗಳಿಗೆ ರಸ್ತೆ ಸಂಪರ್ಕ, ದೂರವಾಣಿ ಸಂಪರ್ಕ, ಪಡಿತರ ವಿತರಣೆ ವಿಳಂಬ, ವಿದ್ಯುತ್ ಸಂಪರ್ಕ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯಿತು. ಇದಕ್ಕೆ ಉತ್ತರಿಸಿ ಈಗಾಲೇ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೂಡಲೇ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವದಾಗಿ ಭರವಸೆ ನೀಡಿದರು.
ಕಲ್ಯಾಳಭಾಗದಲ್ಲಿ ಹಲವು ವರ್ಷಗಳಿಂದ 40ಮನೆಗಳಿಗೆ ಸ್ಥಿರ ದೂರವಾಣಿ ಸಂಪರ್ಕ ಇದ್ದು, ಇದೀಗ ಒಂದು ವರ್ಷಗಳಿಂದ ಸ್ಥಿರ ದೂರವಾಣಿ ಸಂಪರ್ಕವಿಲ್ಲದೆ ಸಂಪರ್ಕ ವ್ಯವಸ್ಥೆಯಿಂದ ವಂಚಿತರಾಗಿದ್ದೇವೆ. ಇದರಿಂದ ಯಾವದೇ ಅಪಾಯಗಳು ಎದುರಾದರೂ ಯಾರಿಗೂ ತಿಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಬಿಎಸ್‍ಎನ್‍ಎಲ್ ಟವರ್ ನಿರ್ಮಾಣವಾಗಿ ಮೊಬೈಲ್ ಸಂಪರ್ಕಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕಲ್ಯಾಳ ಭಾಗದ ಗ್ರಾಮಸ್ಥರು ಒತ್ತಾಯಿಸಿದರು. ಇದೇ ವೇಳೆ ಜಿಲ್ಲಾಧಿಕಾರಿಯವರು ಅಧಿಕಾರಿಗಳನ್ನು ಕರೆಸಿ ಮೊಬೈಲ್ ಟವರ್ ನಿರ್ಮಿಸುವಂತೆ ಸೂಚನೆ ನೀಡಿದರು.
ಸಂಪಾಜೆ ಗ್ರಾ.ಪಂ.ವ್ಯಾಪ್ತಿಯ ಕೊಯನಾಡಿನಲ್ಲಿ 625 ಎಕ್ರೆ ರಬ್ಬರ್ ಎಸ್ಟೇಟನ್ನು ಲೀಸ್‍ಗೆ ನೀಡಲಾಗಿದ್ದು, ಈ ಬಗ್ಗೆ ಈಗಾಗಲೇ ಕೋರ್ಟ್‍ಗೆ ದಾವೆ ಹೂಡಿ ಎಸ್ಟೇಟನ್ನು ಬಿಟ್ಟುಕೊಡುವಂತೆ ಕೋರ್ಟ್ ಆದೇಶ ನೀಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು ಕೂಡಲೇ ಪಂಚಾಯಿತಿ ಸ್ವಾಧೀನ ಪಡೆಯಬೇಕು ಎಂದು ಸಂಪಾಜೆ ಗ್ರಾ.ಪಂ.ವ್ಯಾಪ್ತಿಯ ಗ್ರಾಮಸ್ಥರು ಸಭೆಯಲ್ಲಿ ಸುದೀರ್ಘ ಸಮಯ ಚರ್ಚೆ ನಡೆಸಿ, ಒತ್ತಾಯಿಸಿದರು. ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸಿ ಕಾನೂನು ಕ್ರಮಕೈಗೊಂಡು ಪಂಚಾಯಿತಿ ಸ್ವಾಧೀನಕ್ಕೆ ಒಪ್ಪಿಸುವಂತೆ ಸೂಚನೆ ನೀಡಿದರು.
ಈಗಾಗಲೇ ಪ್ರಕೃತಿ ದುರಂತದಿಂದ ಮಡಿಕೇರಿ-ಸುಳ್ಯ ರಸ್ತೆ ಸಂಪೂರ್ಣ ಕಡಿತಗೊಂಡು ಇದೀಗ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಈ ರಸ್ತೆಯಲ್ಲಿ ಮಿನಿ ಬಸ್‍ನ್ನು ಹಾಕಲಾಗಿದೆ. ಸಂಜೆ ವೇಳೆ 6.30 ಸಮಯಕ್ಕೆ ಇರುವ ಬಸ್ ವ್ಯವಸ್ಥೆಯನ್ನು 5.30ಕ್ಕೆ ಮಾಡಬೇಕು ಎಂದು ಮೊಣ್ಣಂಗೇರಿ, ಜೋಡುಪಾಲ, ಕಾಟಕೇರಿ ಭಾಗದ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದರು.
ಪ್ರಕೃತಿ ದುರಂತದ ವೇಳೆ ಸಂತ್ರಸ್ತರಾಗಿ ಪರಿಹಾರ ಕೇಂದ್ರದಲ್ಲಿ ಉಳಿದಿರುವ ಸಂತ್ರಸ್ತರಿಗೆ ಕೊಯನಾಡಿನಲ್ಲಿರುವ 625 ಎಕ್ರೆ ಜಾಗವನ್ನು ನೀಡಬೇಕು ಎಂದು ಸಂಪಾಜೆ ಗ್ರಾಮಸ್ಥರು ಒತ್ತಾಯಿಸಿದಾಗ, ಮದೆನಾಡು, ಕುಶಾಲನಗರ, ಸಂಪಾಜೆ, ಕಾಟಕೇರಿಗಳಲ್ಲಿ ಜಾಗವನ್ನು ಗುರುತಿಸಲಾಗಿದೆ. ಗುರುತಿಸಿದ ಜಾಗದ ಪ್ರಸ್ತಾಪವನ್ನು ಸರಕಾರಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು.
ಸಭೆಯಲ್ಲಿ ಸಂಪಾಜೆ ವ್ಯಾಪ್ತಿಯ ಕಸ ವಿಲೇವಾರಿಗೆ ಜಾಗ, ನಿವೇಶನ ರಹಿತ 76 ಕುಟುಂಬಗಳಿಗೆ ನಿವೇಶ ನೀಡುವಂತೆ, ಕಂದಾಯ ಇಲಾಖೆ ಹಳೆಯದಾಗಿದ್ದು, ನೂತನ ಕಟ್ಟಡ ನಿರ್ಮಿಸುವಂತೆ ಹೀಗೆ ನಾನಾ ಮನವಿಗಳನ್ನು ಸಾರ್ವಜನಿಕರು ಜಿಲ್ಲಾಧಿಯವರಿಗೆ ಸಲ್ಲಿಸಿದರು. ಒಟ್ಟು 129 ಮನವಿಗಳನ್ನು ಸಲ್ಲಿಸಲಾಗಿದ್ದು, ಎಲ್ಲ ಮನವಿಗಳನ್ನು ಪರಿಶೀಲಿಸಿ, ಮನವಿ ಸಲ್ಲಿಸಿದ ಎಲ್ಲರನ್ನು ಪ್ರತ್ಯೇಕವಾಗಿ ಕರೆಸಿ, ಸಮಸ್ಯೆಗಳನ್ನು ನಿವಾರಣೆಗೊಳಿಸುವದಾಗಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಪಾಜೆ ವ್ಯ.ಸೇ.ಸ.ಬ್ಯಾಂಕ್ ಅಧ್ಯಕ್ಷ ಬಾಲಚಂದ್ರ ಕಳಗಿ, ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಸಂಪಾಜೆ ಹೋಬಳಿಯ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಮಡಿಕೇರಿ ಗ್ರಾಮಾಂತರ ಎಸ್.ಐ.ಚೇತನ್, ವಲಯ ಅರಣ್ಯಾಧಿಕಾರಿಗಳು, ಕೃಷಿ ಅಧಿಕಾರಿಗಳು ನಾನಾ ಇಲಾಖಾಧಿಕಾರಿಗಳು, ಪಂಚಾಯಿತಿ ಪಿಡಿಒಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.