ವೀರಾಜಪೇಟೆ, ಅ. 5: ವೀರಾಜಪೇಟೆಯ ಮಗ್ಗುಲದ ದಂತ ಮಹಾ ವೈದ್ಯಕೀಯ ಕಾಲೇಜು, ಯುರೋಪ್, ಉತ್ತರ ಅಮೇರಿಕ ಹಾಗೂ ದಕ್ಷಿಣ ಪೂರ್ವ ಏಷ್ಯಾ ಖಂಡದಿಂದ 5 ಹೆಸರಾಂತ ವಿಶ್ವವಿದ್ಯಾನಿಲಯಗಳು ಕೊಡಗು ದಂತ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವದರ ಫಲವಾಗಿ ವಿದೇಶದ ವಿಶ್ವ ವಿದ್ಯಾಲಯದ ಸಂಶೋಧಕರು, ಹಿರಿಯ ಪ್ರಾಧ್ಯಾಪಕರುಗಳು ಕೊಡಗು ದಂತ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡುತ್ತಿರುವದರಿಂದ ವಿದ್ಯಾ ಸಂಸ್ಥೆಗೆ ಇನ್ನಷ್ಟು ಮೆರುಗು ಬಂದಂತಾಗಿದೆ ಎಂದು ಕಾಲೇಜಿನ ಡೀನ್ ಪ್ರೊ. ಡಾ. ಸುನಿಲ್ ಮುದ್ದಯ್ಯ ಹೇಳಿದರು.
ಕೊಡಗು ದಂತ ವೈದ್ಯಕೀಯ ಕಾಲೇಜಿನ 2018ರ ಪದವಿ ಪ್ರದಾನ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕೊಡಗು ದಂತ ಕಾಲೇಜಿನಲ್ಲಿ ದಂತ ಆರೋಗ್ಯ ಕ್ಷೇತ್ರದ 9 ವಿಭಾಗಗಳಲ್ಲಿಯೂ ಸ್ನಾತಕೋತ್ತರ ತರಬೇತಿ ಲಭ್ಯವಿದ್ದು ಈಗಾಗಲೇ ಸಂಸ್ಥೆ ತಜ್ಞ ದಂತ ವೈದ್ಯರುಗಳನ್ನು, ಉಪನ್ಯಾಸಕರುಗಳನ್ನು, ವಿಜ್ಞಾನಿಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಂಗ್ಯಾರಿಯನ್ ಆರ್ಥೋಡಾಂಟಿಕ್ ಸಂಸ್ಥೆಯ ಅಧ್ಯಕ್ಷರು, ಡೆಬೆರೆಸಿಯನ್ ಹಂಗ್ಯಾರಿ ಆರ್ಥೋಡಾಂಟಿಕ್ ವಿಶ್ವ ವಿದ್ಯಾಲಯದ ಉಪನ್ಯಾಸಕರಾದ ಪ್ರೊ. ಪೀಟರ್ ಬಾರ್‍ಬ್ಲೇ ಮಾತನಾಡಿ ಕೊಡಗು ದಂತ ವೈದ್ಯಕೀಯ ವಿದ್ಯಾ ಸಂಸ್ಥೆಯ ವಿದ್ಯಾರ್ಜನೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ ಈ ಕಾಲೇಜು ವಿಶ್ವದ ಬೇರೆ ದಂತ ವೈದ್ಯಕೀಯ ವಿದ್ಯಾಲಯಗಳ ಜೊತೆ ಒಡಂಬಡಿಕೆ ಮಾಡಿಕೊಂಡಿರುವದರಿಂದ ಹೆಚ್ಚಿನ ಮಹತ್ವ ಪಡೆಯುವಂತಾಗಿದೆ ಎಂದರು.
ಸಮಾರಂಭದಲ್ಲಿ 46 ಮಂದಿಗೆ ಪದವಿ ಹಾಗೂ 35ಮಂದಿಗೆ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ವಾಯುಸೇನೆ ದಂತ ವೈದ್ಯಕೀಯ ಕಾಲೇಜಿನ ಬಾಲ, ಜಯನ್ ಹಾಗೂ ಡಾ. ಆನ್ಮೋಲ್ ಕಲಾ, ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ಪೊನ್ನಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭ ಡಾ. ಆನ್ಮೋಲ್ ಕಲಾ ಅವರು ‘ಜರ್‍ನಲ್ ಆಫ್ ಮಲ್ಟಿಡಿಸೆಪ್ಲೆನರಿ ಡೆಂಟಲ್ ರಿಸರ್ಚ್’ ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ಅವರನ್ನು ಡಾ. ಕೆ.ಸಿ. ಪೊನ್ನಪ್ಪ ಸನ್ಮಾನಿಸಿದರು.
ಕೊಡಗು ದಂತ ವೈದ್ಯಕೀಯ ಕಾಲೇಜಿನ ಪ್ರತಿಷ್ಠತ ಚಿನ್ನದ ಪದಕವನ್ನು ಡಾ. ಕೊಂಗಕೊನಾ ಭಾರದ್ವಜ್, ಎಂ.ಝಡ್. ನೌಷಿಯ ಹಾಗೂ ಎಂ.ಸಿ. ಶ್ವೇತಾ ಇವರುಗಳಿಗೆ ಪ್ರೊ. ಪೀಠರ್ ಬಾರ್ ಬ್ಲೇ, ಟ್ರಸ್ಟ್‍ನ ಕೆ.ಕೆ. ಅಯ್ಯಪ್ಪ ವಿತರಿಸಿದರು.