ವೀರಾಜಪೇಟೆ, ಅ. 5: ಯಾವದೇ ವೃತ್ತಿಯಲ್ಲಿ ಕೌಶಲ್ಯ ಹಾಗೂ ನೈಪುಣ್ಯತೆ ಹೊಂದ ಬೇಕಾದರೆ ತರಬೇತಿಗಳು ಅತ್ಯಾವಶ್ಯಕ ಎಂದು ಕೊಡಗು-ಮ್ಯೆಸೂರು ಸಂಸದ ಪ್ರತಾಪ್‍ಸಿಂಹ ಹೇಳಿದರು. ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಹಾಗೂ ಎಕ್ಸ್‍ಲೆನ್ಸ್ ಲರ್ನಿಂಗ್ ಸೆಲ್ಯೂಷನ್ಸ್ ಪ್ರೈ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ರೋಜ್‍ಗಾರ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು 70 ವರ್ಷದವರೆಗೆ ನಮ್ಮನ್ನು ಕೇಳುವವರಿರಲಿಲ್ಲ. ಆದರೆ ಇಂದು ವಿಶ್ವದ ಮೂರು ಅಗ್ರಗಣ್ಯ ನಾಯಕರಲ್ಲಿ ಭಾರತದ ಪ್ರಧಾನ ಮಂತ್ರಿಗಳು ಒಬ್ಬರು ಸ್ಥಾನ ಪಡೆದುಕೊಂಡಿದ್ದಾರೆ ಎಂದರೆ ನಮ್ಮ ದೇಶ ಎಷ್ಟು ಮುಂದುವರೆಯುತ್ತಿದೆ ಎಂಬದನ್ನು ಮನಗಾಣಬಹುದಾಗಿದೆ. ಸರ್ಕಾರಕ್ಕೆ ಒಂದು ಸಾಮಾಜಿಕ ಜವಾಬ್ದಾರಿ ಇದೆ. ಅದರ ಹಿಂದಿರುವ ಉದ್ದೇಶ ನಮ್ಮಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸುವಂತೆ ಮಾಡುತ್ತದೆ. ಪ್ರಪಂಚದಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳನ್ನು ಭಾರತ ಹೊಂದಿದ್ದರೂ ಕೂಡ ನಮ್ಮಲ್ಲಿ ಕೌಶಲ್ಯ ಅಭಿವೃದ್ಧಿಯ ಕೊರತೆ ಇರುವದರಿಂದ ಶೇ 75ರಷ್ಟು ಉನ್ನತ ಮಟ್ಟದ ವಿದ್ಯಾರ್ಹತೆ ಪಡೆದ ಇಂಜಿನಿಯರ್‍ಗಳಿಗೆ ಕೌಶಲ್ಯ ಅಭಿವೃದ್ದಿಯ ಕೊರತೆ ಇದೆ ಎಂದು ಐಟಿ ದಿಗ್ಗಜ ನಾರಾಯಣಮೂರ್ತಿ ಅವರು ವ್ಯಾಖ್ಯಾನಿಸುತ್ತಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಬಿಜೆಪಿ ಅಲ್ಪ ಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಜೋಕಿಂ ರಾಡ್ರಿಗಾಸ್, ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ಕೇಂದ್ರ ವ್ಯವಸ್ಥಾಪಕ ಎಂ.ಜೆ ಚಂದನ್ ಉಪಸ್ಥಿತರಿದ್ದರು. ಎಲ್,ಐ,ಸಿ, ಕಾಫಿಡೇ, ವುಡ್‍ಲ್ಯಾಂಡ್ಸ್, ಯುರೇಕಾ ಫೋಬ್ಸ್ ಸೇರಿದಂತೆ ಸುಮಾರು 15 ಪ್ರತಿಷ್ಠಿತ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸಿದ್ದವು. ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶೃತಿ ಸ್ವಾಗತಿಸಿ ವಂದಿಸಿದರು. ಸುಮಾರು 150ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು.