ಸಿದ್ದಾಪುರ, ಅ. 5: ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಸಿಲುಕಿದ್ದಾರೆ. ಸಂಜೆಯಾಗುತ್ತಲೇ 15ಕ್ಕೂ ಅಧಿಕ ಬೀದಿ ನಾಯಿಗಳು ಬಸ್ಸು ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸುತ್ತಾಡುತ್ತಿವೆ. ಇತ್ತೀಚೆಗೆ ಸಿದ್ದಾಪುರದ ಮಾರುಕಟ್ಟೆಯ ಸಮೀಪ ಬೀದಿ ನಾಯಿಗಳು 5 ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಆದರೂ ಕೂಡ ಸಿದ್ದಾಪುರ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಹಿಸುತ್ತಿದೆ. ಇದೀಗ ದಿನನಿತ್ಯ ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಸಾರ್ವಜನಿಕರು ಭಯದಿಂದಲೇ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತ ಮಂಡಳಿ ತಮಗೇನು ಸಂಬಂಧವಿಲ್ಲದಂತೆ ವರ್ತಿಸುತ್ತಿರುವ ಬಗ್ಗೆ ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯಿತಿ ಆವರಣದೊಳಗೆ ಕಸದ ರಾಶಿ !!! :
ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಗ್ರಾಮ ಪಂಚಾಯಿತಿಯು ಇದಕ್ಕೆ ವಿರುದ್ಧವಾಗಿದೆ. ಸಿದ್ದಾಪುರದ ಪಟ್ಟಣದ ಕಸ ಹಾಗೂ ತ್ಯಾಜ್ಯಗಳನ್ನು ಚೀಲದಲ್ಲಿ ತುಂಬಿ ರಾಶಿಗಟ್ಟಲೆ ಕಸದ ರಾಶಿಯನ್ನು ಪಂಚಾಯಿತಿಯ ಆವರಣದೊಳಗೆ ಶೇಖರಿಸಿಟ್ಟಿದ್ದಾರೆ. ತುಂಬಿಸಿರುವ ಕಸ ತ್ಯಾಜ್ಯಗಳ ಚೀಲದಲ್ಲಿ ಹುಳುಗಳು ಉತ್ಪತ್ತಿ ಆಗುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಈ ಹಿನ್ನೆಲೆ ವರ್ತಕರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಶುಚಿತ್ವಕ್ಕೆ ಆಸಕ್ತಿ ವಹಿಸಬೇಕಾದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸದಸ್ಯರುಗಳು ಮಾಸಿಕ ಸಭೆಗಳಲ್ಲಿ ಈ ಬಗ್ಗೆ ಚಕಾರ ಎತ್ತದೆ ತಮ್ಮ ಸ್ವಾರ್ಥ ಲಾಭಕ್ಕಾಗಿ ಸದಸ್ಯರುಗಳ ನಡುವೆ ಪರಸ್ಪರ ಕಚ್ಚಾಡುತ್ತಿರುವದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂಬ ಆರೋಪಗಳು ಇವೆ. ಜಿಲ್ಲೆಯಲ್ಲಿ ಅತೀ ದೊಡ್ಡ ಗ್ರಾ.ಪಂ ಹಾಗೂ ಅಧಿಕ ಲಾಭವಿರುವ ಗ್ರಾ.ಪಂ ಎಂಬ ಹೆಗ್ಗಳಿಕೆ ಇದ್ದರೂ ಕೂಡ ಇಲ್ಲಿ ಬೆಟ್ಟದಷ್ಟು ಸಮಸ್ಯೆಗಳು ತಾಂಡವವಾಡುತ್ತಿದೆ. ನೀರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಹೊಂದದಿರುವ ಬಗ್ಗೆ ಹಾಗೂ ಜಟಿಲ ಸಮಸ್ಯೆಗಳ ಬಗ್ಗೆ ಸ್ಪಂದಿಸದಿರುವ ಬಗ್ಗೆ ಪಂಚಾಯಿತಿಯ ವಿರುದ್ಧ ಗ್ರಾಮಸ್ಥರು ಭ್ರಮನಿರಸಗೊಂಡಿದ್ದಾರೆ.
ಕಸದ ವಿಲೇವಾರಿಯ ಜಾಗಕ್ಕಾಗಿ ರಾಜೀನಾಮೆ !!! :
ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ಈವರೆಗೂ ಶಾಶ್ವತ ಜಾಗವನ್ನು ಕಂಡು ಹಿಡಿಯುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಈ ಹಿಂದೆ ಆಡಳಿತ ಮಂಡಳಿಯ ಸದಸ್ಯರುಗಳು ಕಸ ವಿಲೇವಾರಿಗೆ ಸೂಕ್ತ ಜಾಗವನ್ನು ಒದಗಿಸಿಕೊಡದಿದ್ದಲ್ಲಿ ಸಾಮೂಹಿಕ ರಾಜೀನಾಮೆ ನೀಡುವದಾಗಿ ಹೇಳಿದ್ದರು. ಅಲ್ಲದೇ ಜಿಲ್ಲಾಡಳಿತದ ಕಚೇರಿ ಎದುರು ಪ್ರತಿಭಟನೆ ಕೂಡ ಹಮ್ಮಿಕೊಂಡಿದ್ದರು. ಆದರೆ ಜಾಗವನ್ನು ಕಾರ್ಯ ರೂಪಕ್ಕೆ ತರುವಲ್ಲಿ ಯಶಸ್ವಿಯಾಗದೇ ಆಡಳಿತ ಮಂಡಳಿ ರಾಜಕೀಯದಲ್ಲೇ ಕಾಲಹರಣ ಮಾಡಿತು. ಈ ಹಿನ್ನೆಲೆ ಗ್ರಾ.ಪಂ ಆವರಣದೊಳಗೆ ಕಸದ ರಾಶಿಯನ್ನು ವಿಲೇವಾರಿ ಮಾಡುತ್ತಿರುವುದರಿಂದ ತ್ಯಾಜ್ಯ ವಸ್ತುಗಳನ್ನು ತಿನ್ನಲು ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಪಂಚಾಯಿತಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.