ಕೂಡಿಗೆ , ಅ. 6 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಡಿಗೆ ಮತ್ತು ಹಳೆ ಕೂಡಿಗೆ ಗ್ರಾಮಗಳಿಗೆ ಅಗತ್ಯವಿದ್ದ ರುದ್ರಭೂಮಿ ಜಾಗ ಗುರುತಿಸುವ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಆದೇಶದಂತೆ ಕಂದಾಯ ಇಲಾಖೆಯ ಸರ್ವೆ ಅಧಿಕಾರಿಗಳ ತಂಡವು ಕೂಡಿಗೆಯ ಕಾವೇರಿ ನದಿಯ ದಡದ ಸಮೀಪ ಸರ್ವೆ ನಂ.84, 66ರಲ್ಲಿ ಗುರುತಿಸಿದ ರುದ್ರಭೂಮಿ ಜಾಗವನ್ನು ಸರ್ವೆ ನಡೆಸಿದರು.

ಕೂಡಿಗೆ ಗ್ರಾಮಸ್ಥರಿಗೆ ಶವ ಸಂಸ್ಕಾರಕ್ಕೆ ಜಾಗವಿಲ್ಲದೆ, ಇತ್ತೀಚೆಗೆ ಗ್ರಾಮಸ್ಥರು ಶವವನ್ನು ಕೂಡಿಗೆ ಗ್ರಾಮ ಪಂಚಾಯಿತಿ ಎದುರು ಇಟ್ಟು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ತುರ್ತು ಸಭೆ ನಡೆಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೈಸಾರಿ ಜಾಗವನ್ನು ಗುರುತಿಸಿ ಕೊಡುವಂತೆ ತಾಲೂಕು ಕಂದಾಯ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಇಂದು ಜಿಲ್ಲಾಧಿಕಾರಿಗಳು ರುದ್ರಭೂಮಿ ಜಾಗವನ್ನು ಸರ್ವೆ ನಡೆಸುವಂತೆ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಆದೇಶಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಸರ್ವೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದರು.

ಈ ಸಂದರ್ಭ ಗ್ರಾ. ಪಂಚಾಯಿತಿ ಉಪಾಧ್ಯಕ್ಷ ಗಿರೀಶ್‍ಕುಮಾರ್, ಸದಸ್ಯರಾದ ಕೆ.ಜೆ.ಮೋಹಿನಿ, ಕೆ.ಟಿ.ಈರಯ್ಯ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಸಚಿನ್, ಸರ್ವೆ ಅಧಿಕಾರಿ ಮಂಜುನಾಥ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಿಲ್ಪ, ಪಿಡಿಓ ಸ್ವಾಮಿನಾಯಕ್, ಕಂದಾಯ ವಸೂಲಿಗಾರ ಕೆ.ಸಿ.ರವಿ, ಬಸವೇಶ್ವರ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ಭೀಮಣ್ಣ, ನಿರ್ದೇಶಕರು, ಸ್ಥಳೀಯ ಯುವಕ ಸಂಘದ ಅಧ್ಯಕ್ಷ ಕೆ.ಟಿ.ಪ್ರವೀಣ್, ಕಾರ್ಯದರ್ಶಿ ಕೆ.ಕೆ.ಪ್ರತಾಪ್, ನಿರ್ದೇಶಕರು ಹಾಗೂ ಗ್ರಾಮಸ್ಥರಾದ ಕೆ.ಕೆ.ಮಂಜುನಾಥ್, ಪ್ರಕಾಶ್, ಶೇಖರ್, ಗಿರೀಶ್, ಕಿರಣ್, ಮಲ್ಲೇಶ್, ನಾಗರಾಜ್ ಮೊದಲಾದವರು ಇದ್ದರು.