ಮಡಿಕೇರಿ, ಅ. 6: ಸರಕಾರಿ ಅಧಿಕಾರಿಗಳ ವರ್ಗಾವಣೆ ಸಹಜವೇ ಆಗಿದೆ. ಆದರೆ, ಪ್ರಸಕ್ತ ವರ್ಷ ಕೊಡಗು ಜಿಲ್ಲೆಯ ಮಟ್ಟಿಗೆ ಅದರಲ್ಲೂ ದುರಂತಮಯ ಸನ್ನಿವೇಶ ಇನ್ನೂ ತಹಬದಿಗೆ ಬರುವ ಮುನ್ನವೇ ಈ ದುರಂತಗಳ ಬಗ್ಗೆ ಅರಿವು ಹೊಂದಿ ರುವ ಅಧಿಕಾರಿಯೊಬ್ಬರನ್ನು ಸರಕಾರ ವರ್ಗಾಣೆ ಮಾಡಿರುವದು ಅಚ್ಚರಿ ದಾಯಕವಾಗಿದೆ. ಮೇಘಸ್ಫೋಟ - ಜಲಸ್ಪೋಟದಂತಹ ಸನ್ನಿವೇಶದಿಂದ ಕೊಡಗು ಜಿಲ್ಲೆ ಈ ಬಾರಿ ಅಕ್ಷರಶ: ನಲುಗಿ ಹೋಗಿದೆ. ಪ್ರಾಕೃತಿಕ ದುರಂತದ ಈ ವೇಳೆಯಲ್ಲಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಾಕಷ್ಟು ಶ್ರಮ ವಹಿಸಿರುವ ಇಲ್ಲಿನ ಪ್ರಸ್ತುತದ ಆಗು-ಹೋಗುಗಳ ಬಗ್ಗೆ ಸೂಕ್ತ ಅರಿವು - ಅನುಭವವನ್ನು ಹೊಂದಿರುವ ಕೊಡಗು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಏಕಾಏಕಿ ಸರಕಾರ ವರ್ಗಾವಣೆಗೊಳಿಸಿದೆ. ತೆರವಾಗಲಿ ರುವ ಈ ಸ್ಥಾನಕ್ಕೆ ನೂತನ ಅಧಿಕಾರಿಯಾಗಿ ಕುಮುಟಾದಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ಲಕ್ಷ್ಮಿಪ್ರಿಯಾ ಅವರನ್ನು ನೇಮಕ ಮಾಡಲಾಗಿದೆ.
ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕೊಡಗು ಜಿಲ್ಲೆಯ ಸಿ.ಇ.ಓ. ಆಗಿ 2018ರ ಜನವರಿಯಲ್ಲಿಯಷ್ಟೆ ನೇಮಕಗೊಂಡಿದ್ದರು. ಇದೀಗ ಕೇವಲ 9 ತಿಂಗಳ ಅವಧಿಯಲ್ಲಿ ಇವರನ್ನು ವರ್ಗಾವಣೆಗೊಳಿಸಿರುವ ಸರಕಾರದ ಕ್ರಮ ಪ್ರಶ್ನಾರ್ಹವಾಗಿದೆ. ಈ ಬಾರಿ ಜೂನ್ ತಿಂಗಳಿನಿಂದ ಈ ತನಕವೂ ಪ್ರಾಕೃತಿಕ ದುರಂತ, ಜಲಪ್ರಳಯ, ಭೂ-ಬೆಟ್ಟಕುಸಿದಂತಹ ಹತ್ತು ಹಲವಾರು ಸಂಕಷ್ಟಗಳನ್ನು ಕೊಡಗು ಜಿಲ್ಲೆ ಎದುರಿಸಿದೆ. ಇದೀಗಷ್ಟೆ ಈ ದುರಂತಗಳ ಸರಮಾಲೆಯನ್ನು ಸರಿಪಡಿಸುವ ಪ್ರಯತ್ನದೊಂದಿಗೆ ಸಂತ್ರಸ್ತ ಜನತೆಯ ಬದುಕನ್ನು ಪುನರ್ ನಿರ್ಮಾಣ ಮಾಡುವ ಕೆಲಸ ಕಾರ್ಯಗಳು ಆರಂಭಗೊಳ್ಳುತ್ತಿವೆ. ದುರಂತದ ಸಮಯದಲ್ಲಿ ಜಿಲ್ಲೆಯಲ್ಲೇ ಇದ್ದು ಕಾರ್ಯನಿರ್ವಹಿಸಿದ ಅಧಿಕಾರಿಗೆ ಈ ಕುರಿತಾದ ಸಮರ್ಪಕ ಮಾಹಿತಿಯೂ ಇದೆ. ಇಂತಹ ಸಂದರ್ಭದಲ್ಲಿ ಅನುಭವ ಹೊಂದಿ ರುವ ಅಧಿಕಾರಿಗಳನ್ನು ಜಿಲ್ಲೆಯಲ್ಲಿ ಉಳಿಸಿಕೊಂಡು ಅಗತ್ಯ ಕೆಲಸ ಕಾರ್ಯ ಗಳನ್ನು ಮಾಡುವದರ ಬದಲಾಗಿ ಅನುಭವಸ್ತ ಅಧಿಕಾರಿ ಯನ್ನು ವರ್ಗಾವಣೆ ಮಾಡಿರುವದು ಜಿಲ್ಲೆಯ ಜನತೆಯ ದೌರ್ಭಾಗ್ಯವೇ ಆಗಿದೆ.
ನೂತನ ಅಧಿಕಾರಿಯಾಗಿ ಆಗಮಿಸುವವರಿಗೆ ಕೊಡಗು ಜಿಲ್ಲೆಯ ಬಗ್ಗೆ ಹಾಗೂ ಇಲ್ಲಿ ಘಟಿಸಿರುವ ದುರಂತಗಳ ಬಗ್ಗೆ ಸೂಕ್ತ ಅರಿವು - ಮಾಹಿತಿ ಪಡೆಯಲು ಹೆಚ್ಚು ಕಾಲಾವಕಾಶ ಬೇಕಾಗಿದೆ ಎಂಬದರಲ್ಲಿ ಎರಡು ಮಾತಿಲ್ಲ. ಕೊಡಗಿನ ಪುನಶ್ಚೇತನದ ಕುರಿತು ಕೊಡಗು ಅಭಿವೃದ್ಧಿ ಪ್ರಾಧಿಕಾರ ಅಥವಾ ಪುನರ್ ನಿರ್ಮಾಣ ಮಂಡಳಿಯನ್ನು ರಚಿಸಬೇಕು ಎಂಬ ಅಭಿಪ್ರಾಯದ ನಡುವೆ ಅನುಭವಸ್ಥ ಅಧಿಕಾರಿಯನ್ನು ವರ್ಗಾವಣೆಗೊಳಿಸಿರುವ ಕ್ರಮದ ಹಿಂದೆ ಏನು ಉದ್ದೇಶ ಅಡಗಿದೆ ಎಂಬದು ನಿಗೂಡವಾಗಿದೆ.
ಪ್ರಮುಖರೆಲ್ಲರೂ ಮಹಿಳಾ ಅಧಿಕಾರಿಗಳು: ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಬ್ಬರೂ ಮಹಿಳಾ ಅಧಿಕಾರಿಗಳಾಗಿದ್ದಾರೆ. ಇದೀಗ ಈ ಎರಡು ಸ್ಥಾನದೊಂದಿಗೆ ಮತ್ತೊಂದು ಪ್ರಮುಖ ಜವಾಬ್ದಾರಿಯುತವಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಾನಕ್ಕೂ ಮಹಿಳಾ ಅಧಿಕಾರಿಯೊಬ್ಬ ರನ್ನು ನಿಯೋಜಿಸಲಾಗಿದೆ.
ಯಾವದೇ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಪ್ರಶ್ನಿಸುವದು ಸರಿಯಲ್ಲದಿದ್ದರೂ ಕೊಡಗು ಜಿಲ್ಲೆ ಪ್ರಸಕ್ತ ವರ್ಷ ಎದುರಿಸಿರುವ ಸಂಕಷ್ಟದ ಸಂದರ್ಭದಲ್ಲಿ ಖುದ್ದಾಗಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ಸಾಕಷ್ಟು ಅನುಭವವಿರುವ ಅಧಿಕಾರಿಯನ್ನು ಈ ಸಂದರ್ಭದಲ್ಲಿ ವರ್ಗಾವಣೆಗೊಳಿಸಿರುವದು ಎಷ್ಟು ಸಮಯೋಚಿತ ಎಂಬದು ಪ್ರಶ್ನೆಯಾಗಿದೆ.