ಮಡಿಕೇರಿ, ಅ. 6: ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ತಯಾರಾಗುವ ಬಗ್ಗೆ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ನಡೆಯಿತು.
ನಗರದ ಬ್ಲಾಸಂ ಶಾಲೆಯ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮೇಜರ್ (ನಿವೃತ್ತ) ಒ.ಎಸ್. ಚಿಂಗಪ್ಪ ಮಾತನಾಡಿ, ಇರುವ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಉದ್ಯೋಗ ಗಿಟ್ಟಿಸಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ಮಾಡಿದರು.
ಸೇನಾ ನೇಮಕಾತಿ ರ್ಯಾಲಿಯಲ್ಲಿ ಪ್ರಮುಖವಾಗಿ ದೈಹಿಕ ಪರೀಕ್ಷೆ ಅತೀ ಮುಖ್ಯ, ನಂತರ ವೈದ್ಯಕೀಯ ಪರೀಕ್ಷೆ, ಹಾಗೆಯೇ ಸಾಮಾನ್ಯ ಜ್ಞಾನ ಪ್ರಮುಖವಾಗಿದೆ ಎಂದು ಅವರು ಹೇಳಿದರು.
ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಗೀತಾ ಮಾತನಾಡಿ, ಸೇನಾ ನೇಮಕಾತಿಯು ಮೆರಿಟ್ ಆಧಾರದ ಮೇಲೆ ನಡೆಯಲಿದ್ದು, ಹೆಚ್ಚಿನ ಅಂಕ ಪಡೆಯಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಭಾರತ ಮಟ್ಟದಲ್ಲಿ ಪರೀಕ್ಷೆ ನಡೆಯುವದರಿಂದ ದೈಹಿಕ, ವೈದ್ಯಕೀಯ, ಸಾಮಾನ್ಯ ಜ್ಞಾನ ಪರೀಕ್ಷೆ ಎದುರಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ ಅವರು ಸೇನಾ ನೇಮಕಾತಿಗೆ 10 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು. ತಾ. 12 ರವರೆಗೆ ಬ್ಲಾಸಂ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದರು.