ವೀರಾಜಪೇಟೆ, ಅ. 6: ಬಾಳೆಲೆ ನಲ್ಲೂರು ಗ್ರಾಮದಲ್ಲಿ ಪಂಜರಿ ಎರವರ ಬೆಳ್ಳಿ ಎಂಬವನನ್ನು ಕೊಲೆ ಮಾಡಿದ ಆರೋಪದ ಮೇರೆ ಕೆ.ಜೆ.ರಮೇಶ್ ಎಂಬಾತನಿಗೆ ಇಲ್ಲಿನ ಅಪರ ಎರಡನೇ ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ. ರಮಾ ಅವರು ಜೀವಾವಧಿ ಶಿಕ್ಷೆ ಹಾಗೂ ರೂ 30,000 ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ತಾ. 31.7.17ರಂದು ರಾತ್ರಿ 8 ಗಂಟೆಗೆ ಬಾಳೆಲೆ ನಲ್ಲೂರು ಗ್ರಾಮದ ಲೈನು ಮನೆಯಲ್ಲಿದ್ದ ಪಂಜರಿ ಎರವರ ಬೆಳ್ಳಿ ಎಂಬಾತನೊಂದಿಗೆ ಜಗಳ ತೆಗೆದು ತನ್ನ ಅತ್ತೆ ಬೋಜಿಗೆ ನಿರಂತರ ಕಿರುಕುಳ ನೀಡುತ್ತಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಅಳಿಯ ರಮೇಶ ಕುತ್ತಿಗೆಗೆ ಕತ್ತಿಯಿಂದ ಕಡಿದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದವನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.
ಮೃತ ಬೆಳ್ಳಿಗೆ ಎರಡು ಪತ್ನಿಯರಿದ್ದು ಎರಡನೆ ಪತ್ನಿಯ ಮಗಳನ್ನು ರಮೇಶ ವಿವಾಹವಾಗಿದ್ದನು. ಸರ್ಕಲ್ ಇನ್ಸ್‍ಪೆಕ್ಟರ್ ದಿವಾಕರ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಸರಕಾರದ ಪರ ಅಭಿಯೋಜಕರಾದ ಡಿ. ನಾರಾಯಣ್ ವಾದಿಸಿದರು.