ಮಡಿಕೇರಿ, ಅ.6 : ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕೊಡಗಿನ ನಿರಾಶ್ರಿತರಿಗೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಳಂಬ ನೀತಿಯನ್ನುಅನುಸರಿಸುತ್ತಿವೆ ಎಂದು ಆರೋಪಿಸಿರುವ ಜಿ.ಪಂ. ಸದಸ್ಯೆ ಕೆ.ಪಿ.ಚಂದ್ರಕಲಾ ಅವರು, ಜಿಲ್ಲೆಯ ಶಾಸಕರು ಹಾಗೂ ಸಂಸದರು ಸರ್ಕಾರಗಳ ಮೇಲೆ ಒತ್ತಡ ಹೇರಿ ಅಗತ್ಯ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಉಂಟಾದ ಪ್ರಾಕೃತಿಕ ವಿಕೋಪದ ಸಂದರ್ಭ ಮುಖ್ಯಮಂತ್ರಿಯಾದಿಯಾಗಿ ಹಲವಾರು ಮಂದಿ ಸಚಿವರುಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರೂ, ಪರಿಹಾರ ಕಾರ್ಯಗಳು ಇನ್ನೂ ಚುರುಕುಗೊಂಡಿಲ್ಲ ಎಂದು ದೂರಿದರು.

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 320ಕ್ಕೂ ಹೆಚ್ಚಿನ ಕುಟುಂಬಗಳು ನೆರೆ ಹಾವಳಿಗೆ ತುತ್ತಾಗಿದ್ದು, ಹಲವು ಕುಟುಂಬಗಳು ಸಂಪೂರ್ಣವಾಗಿ ಮನೆ ಕಳೆದುಕೊಂಡಿದ್ದರೆ, ಇನ್ನು ಕೆಲವು ಭಾಗಶಃ ಹಾನಿಗೊಳಗಾಗಿವೆ. ಅಲ್ಲದೆ, ಮನೆಯೊಳಗಿದ್ದ ಬಹುತೇಕ ಸಾಮಗ್ರಿಗಳು ನೀರುಪಾಲಾಗಿವೆ. ಈ ಪೈಕಿ ಕೆಲವರಿಗೆ ಮಾತ್ರ ಸರ್ಕಾರದ ವತಿಯಿಂದ 3800 ರೂ.ಗಳ ತಾತ್ಕಾಲಿಕ ಪರಿಹಾರ ಲಭ್ಯವಾಗಿದ್ದು, ಬಹುತೇಕ ಮಂದಿ ಇಂದು ಕೂಡ ಈ ಮೊತ್ತಕ್ಕಾಗಿ ಸರದಿಯ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ಉಂಟಾದ ನೆರೆ ಹಾವಳಿಗೆ ಹಾರಂಗಿ ಅಣೆಕಟ್ಟೆ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂಬ ಕುರಿತು ಮುಖ್ಯ ಮಂತ್ರಿಗಳು, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಲೋಕಾಯುಕ್ತರು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರು ನೀಡಿ, ತನಿಖೆ ನಡೆಸುವಂತೆ ಒತ್ತಾಯಿಸಲಾಗಿದ್ದರೂ, ಲೋಕಾಯುಕ್ತರ ಕಚೇರಿಯಿಂದ ಮಾಹಿತಿ ಕೋರಿರುವದು ಬಿಟ್ಟರೆ ಇತರರಿಂದ ಇದುವರೆಗೆ ಯಾವದೇ ಸ್ಪಂದನ ದೊರಕಿಲ್ಲವೆಂದು ಚಂದ್ರಕಲಾ ಅತೃಪ್ತಿ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರಿಗೆ ತಲಾ 50 ಸಾವಿರ ರೂ.ಗಳ ತುರ್ತು ಪರಿಹಾರ ಹಾಗೂ ಸಂಪೂರ್ಣ ಮನೆ ಕಳೆದುಕೊಂಡವರಿಗೆ ರೂ. 6 ಲಕ್ಷ ಒದಗಿಸುವದಾಗಿ ಹೇಳಲಾಗಿತ್ತಾದರು, ಇದನ್ನು ಎಲ್ಲಿ ಪಡೆಯಬೇಕು, ಯಾರನ್ನು ಸಂಪರ್ಕಿಸಬೇಕು ಎನ್ನುವ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ ಎಂದು ದೂರಿದ ಅವರು, ಈ ನಿಟ್ಟಿನಲ್ಲಿ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.

ಪ್ರಕೃತಿ ವಿಕೋಪದ ಸಂದರ್ಭ ಜಿಲ್ಲಾಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೂ, ಪರಿಹಾರ ಕಾರ್ಯಗಳಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯುವ ಮೂಲಕ ನಿರಾಶ್ರಿತರಿಗೆ ಅಗತ್ಯ ಪರಿಹಾರ ಒದಗಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಪ್ರಕೃತಿ ವಿಕೋಪ ನಿಧಿಯಡಿ ಸರ್ಕಾರ ಜಿಲ್ಲೆಗೆ 85 ಕೋಟಿ ಬಿಡುಗಡೆ ಮಾಡಿದ್ದು, ಇದನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ. ಜಿಲ್ಲಾ ಪಂಚಾಯ್ತಿಗೆ ರೂ. 33.15 ಕೋಟಿ ಒದಗಿಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಹಾನಿ ಸಂಭವಿಸಿರುವದರಿಂದ ಈ ಮೊತ್ತವನ್ನು ಹೆಚ್ಚಿಸಬೇಕೆಂದು ಚಂದ್ರಕಲಾ ಆಗ್ರಹಿಸಿದರು.

ಕುಶಾಲನಗರ ವ್ಯಾಪ್ತಿಯ ನಿರಾಶ್ರಿತರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗುಂಡೂರಾವ್ ಬಡಾವಣೆಯ ತಾವರೆ ಕೆರೆ ಬಳಿ ಸರ್ವೆ ನಂಬರ್ 17 ರಲ್ಲಿ 1 ಎಕರೆ ಜಾಗವನ್ನು ಗುರುತಿಸಿದೆ. ಆದರೆ, ಕುಶಾಲನಗರದಲ್ಲಿ ವಿವಿಧ ಸರ್ಕಾರಿ ಅಭಿವೃದ್ಧಿ ಕಾರ್ಯಗಳಿಗೆ ಈ ಜಾಗದ ಅಗತ್ಯವಿರುವದರಿಂದ ಜಿಲ್ಲಾಡಳಿತ ಪಟ್ಟಣ ವ್ಯಾಪ್ತಿಯಲ್ಲಿ ಬಿಡಿ ಬಿಡಿಯಾಗಿರುವ ಸರ್ಕಾರಿ ಜಾಗಗಳನ್ನು ಗುರುತಿಸಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಮುಂದಿನ 15 ದಿನಗಳ ಒಳಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪÀಂದಿಸಿ, ಅಗತ್ಯ ಪರಿಹಾರ, ಪುನರ್ವಸತಿ ಕಲ್ಪಿಸಲು ಮುಂದಾಗದಿದ್ದಲ್ಲಿ ಸಂತ್ರÀಸ್ತರೊಡಗೂಡಿ ಹೋರಾಟಕ್ಕೆ ಮುಂದಾಗುವದಾಗಿ ಎಚ್ಚರಿಕೆ ನೀಡಿದರು.

ಜಿ.ಪಂ ನ ಮತ್ತೊಬ್ಬ ಸದಸ್ಯೆ ಕುಮುದಾ ಧರ್ಮಪ್ಪ ಮಾತನಾಡಿ, ಮಾದಾಪುರ ಜಿ.ಪಂ ಕ್ಷೇತ್ರ ವ್ಯಾಪ್ತಿಯ ಸೂರ್ಲಬ್ಬಿ, ಗರ್ವಾಲೆ ಗ್ರಾಮದ ಎಲ್ಲರಿಗೂ ತಲಾ 3800 ರೂ.ಗಳ ಚೆಕ್‍ನ್ನು ತಾ.ಪಂ ಸದಸ್ಯರ ಗಮನಕ್ಕೆ ತಾರದೆ ವಿತರಿಸಲಾಗಿದೆ. ಇತರ ಭಾಗಗಳಲ್ಲಿ ಸಮರ್ಪಕವಾಗಿ ಹಣ ವಿನಿಯೋಗವಾಗದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಪರಿಹಾರ ವಿತರಣೆಯಲ್ಲೂ ಬಿಜೆಪಿ ಶಾಸಕರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇಗ್ಗೋಡ್ಲು ಬೆಟ್ಟ ವ್ಯಾಪ್ತಿಗೆ ಇನ್ನೂ ಸಮರ್ಪಕವಾದ ರಸ್ತೆ ನಿರ್ಮಾಣವಾಗಿಲ್ಲ, ಕಳೆದ 20 ವರ್ಷಗಳಿಂದ ಶಾಸಕರು ಈ ಭಾಗದಿಂದ ನಿರಂತರವಾಗಿ ಆಯ್ಕೆಯಾಗುತ್ತಿದ್ದರೂ, ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್ ಹಾಗೂ ಸುಂಟಿಕೊಪ್ಪ ಗ್ರಾ.ಪಂ ಸದಸ್ಯೆ ನಾಗರತ್ನ ಉಪಸ್ಥಿತರಿದ್ದರು.