ವರದಿ: ವಾಸು ಎ.ಎನ್.
ಸಿದ್ದಾಪುರ, ಅ. 11: ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಉಪಟಳ ನೀಡುತ್ತಿರುವ 2 ಕಾಡಾನೆಗಳನ್ನು ಮುಂದಿನ ತಿಂಗಳಿನಲ್ಲಿ ಸೆರೆಹಿಡಿಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ವೀರಾಜಪೇಟೆ ತಾಲೂಕಿನ ಸಿದ್ದಾಪುರ, ಗುಹ್ಯ, ಮಾಲ್ದಾರೆ ಹಾಗೂ ಕರಡಿಗೋಡು ಭಾಗದಲ್ಲಿ ಕಳೆದ ಕೆಲವು ತಿಂಗಳಿನಿಂದ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ. ಅಲ್ಲದೇ ಮಾನವನ ಮೇಲೆ ಧಾಳಿ ನಡೆಸುತ್ತಿದ್ದ ಘಟನೆಗಳು ನಡೆದಿದ್ದವು. ಕಾಡಾನೆಗಳ ಹಾವಳಿಯಿಂದ ತತ್ತರಿಸಿದ ಬೆಳೆಗಾರರು ಹಾಗೂ ಕಾರ್ಮಿಕರು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ಗೊಂಡಿದ್ದರು. ಕಾಡಾನೆಗಳನ್ನು ನಾಡಿನಿಂದ ಕಾಡಿಗೆ ಅಟ್ಟಲೆಂದು ಆರ್.ಆರ್.ಟಿ ತಂಡವೊಂದನ್ನು ರಚಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಗಲಿರುಳು ಶ್ರಮಪಟ್ಟು ಕಾಡಾನೆಗಳನ್ನು ಕಾಡಿಗೆ ಅಟ್ಟದರೂ ಕೂಡ ರಾತ್ರಿ ಹಿಂತಿರುಗಿ ಕಾಫಿ ತೋಟಗಳಗೆ ಲಗ್ಗೆ ಇಡುತ್ತಿದ್ದವು. ಕಾಡಾನೆಗಳ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ ಸಿದ್ದಾಪುರ ಭಾಗದ ಬೆಳೆಗಾರರು ಹಾಗೂ ಕಾರ್ಮಿಕ ಸಂಘಟನೆಗಳು ಕಾಡಾನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈತರ, ಬೆಳೆಗಾರರ ಹಾಗೂ ಕಾರ್ಮಿಕರ ಹೋರಾಟ ಸಮಿತಿಯೊಂದನ್ನು ರಚಿಸಿ ಮಡಿಕೇರಿಯ ಅರಣ್ಯ ಭವನದ ಎದುರು ಬೃಹತ್ ಹೋರಾಟ ನಡೆಸಿತ್ತು. ಅಲ್ಲದೇ ವೀರಾಜಪೇಟೆಯ ಅರಣ್ಯ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಭೆಯನ್ನು ನಡೆಸಿ ರಾಜ್ಯದ ವನ್ಯಜೀವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ಕುಮಾರ್ ಅವರ ಸಮ್ಮುಖದಲ್ಲಿ ಸಭೆಯೊಂದನ್ನು ನಡೆಸಿ ಬೆಳೆಗಾರರು ಹಾಗೂ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಕೂಡಲೇ ಸಿದ್ದಾಪುರ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಸ್ಥಳಾಂತರ ಗೊಳಿಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ರಾಜ್ಯದ ಮುಖ್ಯ ಅರಣ್ಯಾಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಹಿನೆÀ್ನಲೆಯಲ್ಲಿ ಇದೀಗ 2 ಕಾಡಾನೆಗಳನ್ನು ಹಿಡಿಯಲು ಆದೇಶ ದೊರತಿದೆ. ಸಿದ್ದಾಪುರದ ವಿಭಾಗದಲ್ಲೇ 70ಕ್ಕೂ ಅಧಿಕ ಕಾಡಾನೆಗಳು ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದವು ಎಂಬ ಮಾಹಿತಿ ಇತ್ತು ಅರಣ್ಯ ಇಲಾಖೆಯು ಅತೀ ಹೆಚ್ಚು ಉಪಟಳ ಮಾಡಿ ತೊಂದರೆ ಮಾಡುತ್ತಿರುವ 2 ಕಾಡಾನೆಗಳ ಸೆರೆಗೆ ಮುಂದಿನ ತಿಂಗಳು ಕಾರ್ಯಾಚರಣೆ ನಡೆಸುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ. ಆದರೆ ಹಾಸನ ಜಿಲ್ಲೆಯಲ್ಲಿ ಕೂಡ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಆ ಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಬಳಿಕ ಸಿದ್ದಾಪುರದಲ್ಲಿ ಕಾಡಾನೆಗಳನ್ನು ಹಿಡಿಯುವ ಕಾರ್ಯಕ್ಕೆ ಮುಂದಾಗಬಹುದೆಂದು ತಿಳಿದು ಬಂದಿದೆ.
ದಸರಾಕ್ಕೆ ತೆರಳಿರುವ ಸಾಕಾನೆಗಳು
ಕಾಡಾನೆಗಳನ್ನು ಕಾರ್ಯಾಚರಣೆ ಮೂಲಕ ಹಿಡಿಯಬೇಕಾದ ಸಾಕಾನೆಗಳಾದ ಅಭಿಮನ್ಯು ಹಾಗೂ ಇನ್ನಿತರ sಸಾಕಾನೆಗಳು ಮೈಸೂರಿನ ದಸರಾ ಕಳೆದು ಬಂದ ಬಳಿಕ ಮುಂದಿನ ಕಾರ್ಯಚರಣೆಯ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳು ತಯಾರಿ ನಡೆಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ
ಕಾಡಾನೆಗಳು ಅರಣ್ಯದೊಳಗೆ ಇದೆ ಡಿ.ಸಿ.ಎಫ್
ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಚಲನವಲನಗಳನ್ನು ಕಂಡು ಹಿಡಿಯಲು ಸಿದ್ದಾಪುರ ಭಾಗದಲ್ಲಿ ಕಾಡಾನೆಗಳ ಹಿಂಡಿನಲ್ಲಿದ್ದ ನಾಲ್ಕೈದು ಹೆಣ್ಣಾನೆಗಳಿಗೆ ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಸಿದ್ದು, ಇದರ ಮಾಹಿತಿಯ ಪ್ರಕಾರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಬಹುತೇಕ ಕಾಡಾನೆಗಳು ಅರಣ್ಯದೊಳಗೆ ಸೇರಿದೆ ಎಂದು ವೀರಾಜಪೇಟೆ ಡಿ.ಸಿ.ಎಫ್ ಮರಿಯಾ ಕ್ರಿಸ್ತಿರಾಜ್ ‘ಶಕ್ತಿ’ಗೆ ತಿಳಿಸಿದರು. ಸಿದ್ದಾಪುರ ಸುತ್ತಮುತ್ತಲು ಕಾಡಾನೆಗಳ ಸಂಖ್ಯೆ ಹೆಚ್ಚಾಗಿದ್ದು, ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕನಿಷ್ಟ 15 ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕೆಂದು ಅರಣ್ಯ ಇಲಾಖೆಗೆ ಮನವಿ ಪತ್ರ ನೀಡಿದ್ದೇವೆ . ಕೇವಲ 2 ಕಾಡಾನೆಗಳನ್ನು ಹಿಡಿದರೆ ಸಮಸ್ಯೆ ಬಗೆಹರಿಯುವದಿಲ್ಲವೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ಸಂಚಾಲಕ ಮಂಡೇಪಂಡ ಪ್ರವೀಣ್ ತಿಳಿಸಿದರು.
ಮತ್ತೆ ಪ್ರತ್ಯಕ್ಷ
ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಹಾಗೂ ಪ್ರಾಕೃತಿಕ ವಿಕೋಪದಿಂದಾಗಿ ಕಾಡಾನೆಗಳ ಹಿಂಡು ಬೇರೆ ಊರಿಗೆ ತೆರಳಿದ್ದವು. ಇದೀಗ ಮಳೆಯು ಇಳಿಮುಖಗೊಂಡ ಹಿನೆÀ್ನಲೆಯಲ್ಲಿ ಕಾಡಾನೆಗಳು ಮತ್ತೊಮ್ಮೆ ಕಾಫಿ ತೋಟಗಳತ್ತ ಲಗ್ಗೆ ಇಟ್ಟಿದ್ದು, ಅಮ್ಮತ್ತಿ ಒಂಟಿಯಂಗಡಿ, ಹೊಸೂರು ಬೆಟ್ಟಗೇರಿ, ಬೈರಂಬಾಡ, ಚೆನ್ನಯ್ಯನಕೋಟೆ ಭಾಗದಲ್ಲಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಉಪವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಆರ್.ಆರ್.ಟಿ ತಂಡದವರು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದರೂ ಕೂಡ ಕಾಡಾನೆಗಳು ಮತ್ತೆ ಹಿಂತಿರುಗಿ ನಾಡಿಗೆ ಲಗ್ಗೆ ಇಡುತ್ತಿರುವದು ಅರಣ್ಯಾಧಿಕಾರಿಗಳಿಗೆ ಸಮಸ್ಯೆ ಆಗಿದೆ. ಈ ಹಿನೆÀ್ನಲೆಯಲ್ಲಿ ಸರಕಾರವು ಆನೆ-ಮಾನವ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.