ಮಡಿಕೇರಿ, ಅ.11 : ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಪ್ರತೀ ವರ್ಷ ಕೊಡ ಮಾಡುವ ಪ್ರತಿಭಾ ಪುರಸ್ಕಾರವನ್ನು ಈ ಬಾರಿಯೂ ನೀಡಲಾಗುವದು ಎಂದು ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರತೀ ವರ್ಷ ಆಗಸ್ಟ್ ತಿಂಗಳಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಆಗಸ್ಟ್ ತಿಂಗಳಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮನ್ನು ಡಿಸೆಂಬರ್ ತಿಂಗಳಿಗೆ ಮುಂದೂಡ ಲಾಗಿದೆ ಎಂದು ಹೇಳಿದರು.
ಪ್ರತೀ ವರ್ಷದಂತೆ ಈ ಬಾರಿಯೂ ಎಸ್‍ಎಸ್‍ಎಲ್‍ಸಿ.ಯಲ್ಲಿ ಗ್ರಾಮೀಣ ವಿಭಾಗದಲ್ಲಿ ಶೇ.85 ಮೇಲ್ಪಟ್ಟು ಹಾಗೂ ನಗರ ವಿಭಾಗದಲ್ಲಿ ಶೇ.90ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪಿಯುಸಿ ಮತ್ತು ಪದವಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದವರಿಗೆ ಮತ್ತು ಸಿಇಟಿ ಮತ್ತು ಎನ್‍ಇಇಟಿಯಲ್ಲಿ 1000ದ ಒಳಗೆ ರ್ಯಾಂಕ್ ಪಡೆದ ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದು ಹೇಳಿದರು.
ಪಿಯುಸಿಯಲ್ಲಿ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ತಲಾ ಮೂರು ಮಂದಿಯನ್ನು ಪುರಸ್ಕರಿಸಲಾಗುವದು ಎಂದು ತಿಳಿಸಿದ ಅವರು, ಇದರೊಂದಿಗೆ ವೈದ್ಯಕೀಯ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದ, ಕ್ರೀಡೆ, ಕಲೆ, ಸಾಂಸ್ಕøತಿಕ ಕ್ಷೇತ್ರಗಳಲ್ಲಿ ರಾಜ್ಯ ,ರಾಷ್ಟ್ರ ಮತ್ತು ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುವದು ಎಂದರಲ್ಲದೆ, ಅರ್ಹರು ಸೂಕ್ತ ದಾಖಲೆಗಳ ಸಹಿತ ಅರ್ಜಿಗಳನ್ನು ನ.20ರ ಒಳಗಾಗಿ ಸಂಘದ ಕಚೇರಿಗೆ ಸಲ್ಲಿಸಬಹುದೆಂದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಗೌಡ ಜನಾಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದ ವಿವಿಧ ಸ್ಪರ್ಧೆಗಳನ್ನು ತಾ. 24ರಂದು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ನಡೆಸಲಾಗುವದೆಂದು ಇದೇ ಸಂದರ್ಭ ತಿಳಿಸಿದ ಅವರು, ಎಲ್‍ಕೆಜಿಯಿಂದ 1ನೇ ತರಗತಿವರೆಗಿನ ಮಕ್ಕಳಿಗೆ ಛದ್ಮವೇಷ, 2 ರಿಂದ 4ನೇ ತರಗತಿವರೆಗಿನ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, 5 ರಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಸಾಮಾನ್ಯ ಜ್ಞಾನ ಸ್ಪರ್ಧೆ, 8
ರಿಂದ 10ನೇ ತರಗತಿಯವರಿಗೆ 5 ನಿಮಿಷದ ಜಾನಪದ (ಸೋಲೋ) ನೃತ್ಯ, ಹಾಗೂ ಪಿಯುಸಿ ಮತ್ತು ಮೇಲ್ಟಟ್ಟವರಿಗೆ ಮೂರು ನಿಮಿಷದ ಸೋಬಾನೆ ಹಾಡು ಸ್ಪರ್ಧೆ ಆಯೋಜಿಲಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಅದೇ ದಿನ ಬೆಳಿಗ್ಗೆ 9 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದ ಅವರು, ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಕಾರ್ಯದರ್ಶಿ ಕೊಟ್ಟಕೇರಿಯನ ಡಿ.ದಯಾನಂದ, ಸಹ ಕಾರ್ಯದರ್ಶಿ ತಳೂರು ಕೆ. ದಿನೇಶ್‍ಕುಮಾರ್ ಖಜಾಂಚಿ ಕಟ್ಟೆಮನೆ ಆರ್.ಸೋನಾ, ನಿರ್ದೇಶಕ ಕೆದಂಬಾಡಿ ಕೀರ್ತಿಕುಮಾರ್ ಉಪಸ್ಥಿತರಿದ್ದರು.