ಮಡಿಕೇರಿ, ಅ. 11: ಪ್ರಕೃತಿ ವಿಕೋಪಕ್ಕೆ ಸಿಲುಕಿ ಅತೀ ಹೆಚ್ಚು ಹಾನಿಗೀಡಾಗಿರುವ ಪ್ರದೇಶವಾದ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ದಾನಿಗಳ ಮೂಲಕ ಸಂತ್ರಸ್ತರಿಗಾಗಿ ಬಂದಿದ್ದ ಅಕ್ಕಿ, ಎಣ್ಣೆ, ಕಂಬಳಿ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನ ದಾಸ್ತಾನಿಟ್ಟಿದ್ದನ್ನು ಕಂದಾಯ ಇಲಾಖಾಧಿಕಾರಿಗಳು ಧಾಳಿ ಮಾಡಿ ವಶಕ್ಕೆ ತೆಗೆದು ಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.ದುರಂತ ಸಂಭವಿಸಿದ ಸಂದರ್ಭ ಹಲವಷ್ಟು ಮಂದಿ ಈ ವ್ಯಾಪ್ತಿಯಲ್ಲಿ ಸಂತ್ರಸ್ತರಾಗಿದ್ದು, ಇಡೀ ಗ್ರಾಮದ ಜನತೆಯನ್ನು ಸ್ಥಳಾಂತರಿಸಲಾಗಿತ್ತು. (ಮೊದಲ ಪುಟದಿಂದ) ನಂತರದಲ್ಲಿ ಸುಧಾರಿಸಿದ ಬಳಿಕ ಗ್ರಾಮಕ್ಕೆ ಸಹೃದಯರ ನೆರವಿನ ಸಾಮಗ್ರಿಗಳು ಬಂದಿದ್ದವು. ಪಂಚಾಯಿತಿ ಹಾಗೂ ಶಾಲೆಯಲ್ಲಿ ದಾಸ್ತಾನಿರಿಸಲು ಸ್ಥಳವಿಲ್ಲದ್ದರಿಂದ ಅಲ್ಲಿನ ವಿಎಸ್‍ಎಸ್‍ಎನ್ ಕೊಠಡಿಗಳಲ್ಲಿ ದಾಸ್ತಾನಿರಿಸಲಾಗಿತ್ತು. ಈ ಬಗ್ಗೆ ಸುಳಿವರಿತ ಕಂದಾಯ ಇಲಾಖಾಧಿಕಾರಿಗಳು ನಿನ್ನೆ ಧಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಈ ವಸ್ತುಗಳು ಕೆಲವು ಸಂತ್ರಸ್ತರಿಗೆ ಸೇರಿದ್ದೆಂದು ಕೆಲವರು ಹೇಳುತ್ತಿದ್ದರೆ ಇನ್ನೂ ಕೆಲವು ಯುವಕರು ಲಾರಿಯಿಂದ ಇಳಿಸಿದವರು ಲೋಡುಗಟ್ಟಲೆ ವಸ್ತುಗಳಿದ್ದುದು ಇದೀಗ ಒಂದು ಪಿಕ್‍ಅಪ್‍ನಷ್ಟಾಗಿದೆ. ಇನ್ನುಳಿದವು ಎಲ್ಲಿ ಹೋಯಿತೆಂದು ಪ್ರಶ್ನಿಸುತ್ತಿದ್ದಾರೆ..!?