ಮಡಿಕೇರಿ, ಅ. 11: ಕರ್ನಾಟಕದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರದಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿರುವ, ಏಕೈಕ ಬಿಎಸ್‍ಪಿ ಶಾಸಕ ಎನ್. ಮಹೇಶ್ ಹೊರಬಂದಿದ್ದಾರೆ. ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.ನಿನ್ನೆಯಷ್ಟೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೈಸೂರು ದಸರಾ ಉದ್ಘಾಟನೆ ವೇಳೆ, ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆ ಬೆನ್ನಲ್ಲೇ ಇಂದು ಶಿಕ್ಷಣ ಸಚಿವರು ಹಾಗೂ ಚಾಮರಾಜನಗರ ಶಾಸಕರಾಗಿರುವ ಎನ್. ಮಹೇಶ್ ಸಚಿವ ಸ್ಥಾನ ತ್ಯಜಿಸಿರುವದು ಸಾಕಷ್ಟು ಕುತೂಹಲಕ್ಕೆ ಎಡೆಯಾಗಿದೆ.ಎನ್. ಮಹೇಶ್ 1990ರ ದಶಕದಲ್ಲಿ ಮೂರು ವರ್ಷಗಳ ಕಾಲ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿದ್ದಲ್ಲದೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಯಷ್ಕರ ಶಿಕ್ಷಣ ಇಲಾಖೆ ಪ್ರಭಾರ ಹೊಣೆಗಾರಿಕೆ ನಿರ್ವಹಿಸಿ ಪರಿಚಿತರಾಗಿದ್ದರು. ಈಗಾಗಲೇ ರಾಷ್ಟ್ರಮಟ್ಟದಲ್ಲಿ ಯುಪಿಎ ಮೈತ್ರಿ ಕೂಟದಿಂದ ಬಿಎಸ್ಪಿ ನಾಯಕಿ ಮಾಯಾವತಿ ಹೊರಬಂದಿದ್ದು, ಇಂದು ಆ ಪಕ್ಷದ ಸಚಿವರ ರಾಜೀನಾಮೆ ರಾಜ್ಯ ಮೈತ್ರಿ ಸರಕಾರದ ಮೇಲೂ ಪರಿಣಾಮ ಬೀರುವ ನಿರೀಕ್ಷೆಯಿದೆ.