ವೀರಾಜಪೇಟೆ, ಅ. 11: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಈಗಾಗಲೇ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪೂರ್ಣಗೊಳಿಸಿದ್ದು, ಕೆಲವರು ಈಗಾಗಲೇ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಕಾಂಗ್ರೆಸ್ ಜನತಾದಳ ಪಕ್ಷಗಳ ಮೈತ್ರಿಯಲ್ಲಿಯೂ 18 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಕಾಂಗ್ರೆಸ್ ಪಕ್ಷ ಮೈತ್ರಿಯ ನೆಪದಲ್ಲಿ ಸಿಂಹ ಪಾಲನ್ನು ಪಡೆದುಕೊಂಡು ಚುನಾವಣಾ ಕಣಕ್ಕಿಳಿಯಲಿದೆ. ಜನತಾದಳ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿಯಲ್ಲಿ 18 ಸ್ಥಾನಗಳ ಪೈಕಿ ಜನತಾದಳದ ಅಭ್ಯರ್ಥಿಗಳು ಸುಮಾರು ಐದು ಕಡೆಗಳಲ್ಲಿ ಸ್ಫರ್ಧಿಸಲು ಅವಕಾಶವನ್ನು ಪಡೆದಿದ್ದಾರೆ. ಕಾಂಗ್ರೆಸ್ ಜನತಾದಳದ ಮೈತ್ರಿ ನಿಚ್ಚಳ ಬಹುಮತ ಪಡೆದರೂ ಪಟ್ಟಣ ಪಂಚಾಯಿತಿಯಲ್ಲಿ ಸಮ್ಮಿಶ್ರ ಪಕ್ಷಗಳ ಆಡಳಿತ ಬರುವ ಸಾಧ್ಯತೆಯಿದೆ.

ಈಗ ಕಾಂಗ್ರೆಸ್ ಪಕ್ಷ ಎಲ್ಲ ಘಟಕಗಳನ್ನು ವಿಸರ್ಜಿಸಿರುವದರಿಂದ ಕಾಂಗ್ರೆಸ್ ಪಕ್ಷಕ್ಕೆ ಪಟ್ಟಣ ಪಂಚಾಯಿತಿ ಚುನಾವಣೆಗೆ ಸ್ಫರ್ಧಿಸಲು ಪಕ್ಷದ ಘಟಕಗಳಿಲ್ಲದೆ ಕಾರ್ಯಕರ್ತರ ಒಮ್ಮತವಿಲ್ಲದೆ ಆತಂಕ ಉಂಟಾಗಿದೆ.

ಬಿ.ಜೆ.ಪಿ.ಯಿಂದ ಟಿಕೇಟ್ ಸಿಗದೆ ಅತೃಪ್ತಗೊಂಡ ಪಕ್ಷದ ಅಭ್ಯರ್ಥಿಗಳು ಬಂಡಾಯವಾಗಿ ಸ್ಪರ್ಧಿಸಲು ಸಿದ್ಧತೆ

ನಡೆಸಿದ್ದಾರೆ. ಕಾಂಗ್ರೆಸ್ ಜನತಾದಳ ಪಕ್ಷಗಳಲ್ಲಿಯೂ ಕೆಲವು ಅತೃಪ್ತರು ಬಂಡಾಯವಾಗಿ ಸ್ಪರ್ಧಿಸಲು ಹಿಂಜರಿಯುವದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಳೆದ ಆಗಸ್ಟ್ ತಿಂಗಳ ಚುನಾವಣೆಯ ಪ್ರಕ್ರಿಯೆಯನ್ನು ಈಗಲೂ ಮುಂದುವರೆಸಿರುವ ಜಿಲ್ಲಾಧಿಕಾರಿಯವರು ಆಗಸ್ಟ್ 17ರ ತನಕ ಸಲ್ಲಿಕೆಯಾದ 33ನಾಮಪತ್ರಗಳು ಮುಂದುವರೆಯಲಿದ್ದು ಪುನಃ ತಾ.16ರಂದು ನಾಮಪತ್ರ ಸಲ್ಲಿಸಲು ಒಂದು ದಿನ ಮಾತ್ರ ಅವಕಾಶ ನೀಡಲಾಗಿದೆ. ತಾ. 20 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ತಾ.28ರಂದು ಮತದಾನ ನಡೆಯಲಿದೆ.

ಕಳೆದ 2013ರಲ್ಲಿ ಮಾರ್ಚ್ ತಿಂಗಳ 7 ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದಿತ್ತಾದರೂ ಸರಕಾರ ಮೀಸಲಾತಿಯನ್ನು ವಿಳಂಬವಾಗಿ ಪ್ರಕಟಿಸಿದ್ದರಿಂದ ತಾ. 11.9.2013ರಂದು ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡಂದಿನಿಂದ ಐದು ವಷಗಳ ಅವಧಿಯ ನಂತರ ಚುನಾವಣೆಯನ್ನು ಘೋಷಿಸಲಾಗಿದೆ.

ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಸಾಲಿನಲ್ಲಿ ಭಾರತೀಯ ಜನತಾ ಪಾರ್ಟಿ 10 ಸ್ಥಾನಗಳನ್ನು ಕಾಂಗ್ರೇಸ್ 2 ಹಾಗೂ ಜನತಾದಳ 4 ಸ್ಥಾನಗಳನ್ನು ಪಡೆದಿತ್ತು.